ವಾಟ್ಸ್‌ಆ್ಯಪ್ ಗ್ರೂಪ್ ಅಡ್ಮಿನ್‌ಗೂ ತಟ್ಟಿದ ನೀತಿ ಸಂಹಿತೆ ಉಲ್ಲಂಘನೆ ಬಿಸಿ!

Update: 2023-03-31 18:13 GMT

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆಯನ್ನು ಘೋಷಿಸಿದ್ದು, ಇದೀಗ ವಾಟ್ಸ್‌ಆ್ಯಪ್ (WhatsApp) ಗ್ರೂಪ್‌ನ ಅಡ್ಮಿನ್‌ಗೂ ನೀತಿ ಸಂಹಿತೆ ಉಲ್ಲಂಘನೆಯ ಬಿಸಿ ತಟ್ಟಿದೆ.

ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ವಿ.ಪಿ.ಶಶಿಧರ್ ಎಂಬವರಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಅವರು ಕಾರಣ ಕೇಳಿ ಮಾ.30ರಂದು ಜಾರಿ ಮಾಡಿರುವ ನೋಟಿಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ನೋಟಿಸ್‌ನಲ್ಲಿ ಏನಿದೆ?: ಮಾದರಿ ನೀತಿ ಸಂಹಿತೆಯು ಜಾರಿಯಲ್ಲಿರುವ ಸಂದರ್ಭ ಪತ್ರಿಕೆ, ಮಾಧ್ಯಮ, ಸಾಮಾಜಿಕ ಜಾಲತಾಣ ಹಾಗೂ ಇನ್ನಿತರ ಮೂಲಗಳಿಂದ ಯಾವುದೇ ರಾಜಕೀಯ ಪ್ರಚಾರ ಮಾಡಬೇಕಾದಲ್ಲಿ ಮತ್ತು ರಾಜಕೀಯ ಪ್ರೇರಿತ ಹೇಳಿಕೆ ನೀಡಬೇಕಾದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ನೇಮಕ ಮಾಡಲಾಗಿರುವ ಡಿಸ್ಟ್ರಿಕ್ಟ್ ಮೀಡಿಯಾ ಸರ್ಟಿಫಿಕೇಷನ್ ಆ್ಯಂಡ್ ಮಾನಿಟರಿಂಗ್ ಕಮಿಟಿ ಇವರಿಂದ ಪೂರ್ವ ಅನುಮತಿ ಪಡೆಯಬೇಕಾಗಿರುತ್ತದೆ ಚುನಾವಣಾಧಿಕಾರಿ ಹೇಳಿದ್ದಾರೆ.

ನೀವು ಅಡ್ಮಿನ್ ಆಗಿರುವ ‘ನಮ್ಮ ಕುಶಾಲನಗರ’ ವಾಟ್ಸ್‌ಆ್ಯಪ್ ಗ್ರೂಪ್‌ನ ಮೂಲಕ ಯಾವುದೇ ಪೂರ್ವ ಅನುಮತಿ ಪಡೆಯದೆ ರಾಜಕೀಯ ಪ್ರೇರಿತ ಹೇಳಿಕೆಯ ವೀಡಿಯೊ ತುಣುಕನ್ನು ಹಂಚಿಕೊಂಡಿರುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿರುತ್ತದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ಆದುದರಿಂದ, ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ಪ್ರಜಾಪ್ರತಿನಿಧಿ ಕಾಯ್ದೆ 1951ರ ರೀತ್ಯ ನಿಮ್ಮ ಮೇಲೆ ಏಕೆ ಕಾನೂನು ಕ್ರಮ ಜರುಗಿಸಬಾರದು ಎಂಬುದಕ್ಕೆ ಈ ನೋಟಿಸ್ ತಲುಪಿದ 24 ಗಂಟೆಯೊಳಗಾಗಿ ಖುದ್ದು ಲಿಖಿತ ಸಮಜಾಯಿಷಿಯನ್ನು ನೀಡುವಂತೆ ಸೂಚಿಸಲಾಗಿದೆ. ತಪ್ಪಿದ್ದಲ್ಲಿ ನಿಮ್ಮ ಸಮಜಾಯಿಷಿ ಏನು ಇಲ್ಲವೆಂದು ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾಧಿಕಾರಿ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಡಿ ಡಾ.ಮಂತರ್ ಗೌಡ ಹಾಗೂ ವಿ.ಪಿ.ಶಶಿಧರ್ ಅವರಿಗೆ ಉತ್ತರ ನೀಡುವಂತೆ ನೋಟೀಸ್ ನೀಡಲಾಗಿತ್ತು. ಇಬ್ಬರೂ ಶುಕ್ರವಾರ ಉತ್ತರ ನೀಡಿದ್ದು, ಅದನ್ನು ಪರಿಶೀಲಿಸಿದ ನಂತರ ಕ್ರಮ ಕೈಗೊಳ್ಳಬೇಕೇ,  ಬೇಡವೇ ಎನ್ನುವುದನ್ನು ನಿರ್ಧರಿಸಲಾಗುವುದು.
ಯತೀಶ್ ಉಳ್ಳಾಲ್, ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ

Similar News