ಮುಸ್ಲಿಮರ ಮೀಸಲಾತಿ ರದ್ದು ಆದೇಶ ಪ್ರಶ್ನಿಸಿ ಹೈಕೋರ್ಟ್‍ಗೆ ಪಿಐಎಲ್ ಸಲ್ಲಿಕೆ

Update: 2023-03-31 18:01 GMT

ಬೆಂಗಳೂರು: ಮುಸ್ಲಿಮರಿಗೆ ಪ್ರವರ್ಗ 2ಬಿ ಅಡಿಯಲ್ಲಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಪಡಿಸಿರುವ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯ ವಿಚಾರಣೆಯ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ. 

ಈ ಸಂಬಂಧ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಆರೀಫ್ ಜಮೀಲ್ ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಮುಸ್ಲಿಮರ 2ಬಿ ಮೀಸಲಾತಿ ರದ್ದುಪಡಿಸಿದ ಬಳಿಕ ಅವರನ್ನು 'ಆರ್ಥಿಕ ಹಿಂದುಳಿದ ವರ್ಗ'(ಇಡಬ್ಲ್ಯೂಎಸ್)ಕ್ಕೆ ಸೇರಿಸಿ ರಾಜ್ಯ ಸರಕಾರ 2023ರ ಮಾರ್ಚ್ 27ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಅರ್ಜಿ ಇತ್ಯರ್ಥಗೊಳ್ಳುವ ತನಕ ಆದೇಶ ಜಾರಿಗೆ ಮಧ್ಯಂತರ ತಡೆ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಅರ್ಜಿದಾರರ ಪರ ವಕೀಲ ರಹಮತ್ ಉಲ್ಲಾ ಕೊತ್ವಾಲ್ ಅವರು ವಕಾಲತ್ತು ವಹಿಸಿದ್ದಾರೆ.

ಮುಸ್ಲಿಮರಿಗೆ ಪ್ರವರ್ಗ 2ಬಿ ಅಡಿ ನೀಡಲಾಗುತ್ತಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದು ಮಾಡಿ ಆರ್ಥಿಕ ದುರ್ಬಲ ವರ್ಗ (ಇಡಬ್ಲ್ಯೂಎಸ್)ಕ್ಕೆ ಸೇರಿಸಿ 2023ರ ಮಾ.24ರಂದು ರಾಜ್ಯ ಸರಕಾರ ನಿರ್ಣಯ ಕೈಗೊಂಡಿದೆ. ಸರಕಾರದ ಈ ತರಾತುರಿ ಮತ್ತು ದೋಷಪೂರಿತ ನಿರ್ಧಾರ ಮುಸ್ಲಿಮರನ್ನು ಇಡಬ್ಲ್ಯೂಎಸ್ ವರ್ಗಗಳಿಗೆ ನಿಗದಿಪಡಿಸಲಾದ ಶೇ.10ರ ಮೀಸಲಾತಿಯಲ್ಲಿ ಸಾಮಾನ್ಯ ವರ್ಗದಡಿ ಪೈಪೋಟಿ ಮಾಡಲು ತಳ್ಳಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಮುಸ್ಲಿಮರಿಗೆ ನೀಡಲಾಗುತ್ತಿದ್ದ ಶೇ.4ರಷ್ಟು ಮೀಸಲಾತಿಯನ್ನು ರಾಜ್ಯದ ಶಕ್ತಿಯುತ ಸಮುದಾಯಗಳಾದ ಒಕ್ಕಲಿಗ ಮತ್ತು ವೀರಶೈವ-ಲಿಂಗಾಯತರಿಗೆ ತಲಾ ಶೇ.2ರಂತೆ ಹಂಚಿಕೆ ಮಾಡಲಾಗಿದೆ. ಇದು ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಮಾಡಿರುವ ರಾಜಕೀಯ ಪ್ರೇರಿತ ನಿರ್ಧಾರವಾಗಿದೆ. ಎಸ್ಸಿ-ಎಸ್ಟಿ ವರ್ಗಗಳಿಗಿಂತ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಒಂದು ನಿರ್ದಿಷ್ಟ ಅಲ್ಪಸಂಖ್ಯಾತ ಸಮುದಾಯಕ್ಕೆ ಅನ್ಯಾಯ ಮಾಡುವಂತಹ ಯಾವ ಸಂದರ್ಭವನ್ನೂ ರಾಜ್ಯ ಸರಕಾರ ಬಿಡುತ್ತಿಲ್ಲ. ಮುಸ್ಲಿಂ ಸಮುದಾಯದ ವಿರುದ್ಧ ಹಲವು ಬಗೆಯ ದೌರ್ಜನ್ಯಗಳ ಜೊತೆಗೆ ಇದೀಗ ಮೀಸಲಾತಿಯನ್ನೂ ಕಿತ್ತುಕೊಳ್ಳಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

Similar News