ನೀತಿ ಸಂಹಿತೆ ಉಲ್ಲಂಘನೆ: ಕೊಡಗಿನ ಇಬ್ಬರು ಬಿಜೆಪಿ ಶಾಸಕರಿಗೆ ನೋಟೀಸ್

Update: 2023-04-01 10:41 GMT

ಮಡಿಕೇರಿ ಏ.1 : ಮಡಿಕೇರಿ ಕ್ಷೇತದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ನೋಟೀಸ್ ನೀಡಿದ್ದಾರೆ. 

ಯಾವುದೇ ಪೂರ್ವಾನುಮತಿ ಪಡೆಯದೆ ಸಾಮಾಜಿಕ ಜಾಲತಾಣದ ಫೇಸ್ ಬುಕ್ ಮೂಲಕ ರಾಜಕೀಯ ಪಕ್ಷದ ಚಿಹ್ನೆಯನ್ನು ಬಳಸಿ ಶ್ರೀ ಶಿವಕುಮಾರ ಸ್ವಾಮಿಗಳ ಜಯಂತಿಯಂದು ಶತಕೋಟಿ ನಮನ ಮತ್ತು ಡಾ.ಕೇಶವ ಬಲರಾಂ ಹೆಗ್ಡೆವಾರ್ ಗುರೂಜಿ ಅವರ ಜಯಂತಿಯಂದು ಗೌರವಪೂರ್ಣ ಪ್ರಣಾಮಗಳು ಎಂದು ಶುಭಾಶಯ ಕೋರಿರುವ ಪೋಸ್ಟ್ ಅನ್ನು ಹಂಚಿಕೊಂಡಿರುವುದರಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ನೋಟೀಸ್ ನೀಡಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಉತ್ತರ ನೀಡುವಂತೆ ತಿಳಿಸಲಾಗಿದೆ.

► ಶಾಸಕ ಕೆ.ಜಿ.ಬೋಪಯ್ಯಗೆ ನೋಟೀಸ್  

ವಿರಾಜಪೇಟೆ ಕ್ಷೇತದ ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ನೋಟೀಸ್ ನೀಡಿದ್ದಾರೆ. ಪರೀಕ್ಷೆಯ ಹಿನ್ನೆಲೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರಿದ ಕಾರಣಕ್ಕಾಗಿ ನೋಟೀಸ್ ನೀಡಿ 24 ಗಂಟೆಯೊಳಗೆ ಉತ್ತರ ನೀಡುವಂತೆ ತಿಳಿಸಲಾಗಿದೆ.

 ಯಾವುದೇ ಪೂರ್ವಾನುಮತಿ ಪಡೆಯದೆ ರಾಜಕೀಯ ಪ್ರೇರಿತ ಚಿತ್ರವನ್ನು ಹಂಚಿಕೊಂಡಿರುವುದರಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ನೋಟೀಸ್ ನಲ್ಲಿ ತಿಳಿಸಲಾಗಿದೆ.

 ಮತ್ತೊಬ್ಬರಿಗೆ ನೋಟೀಸ್ : ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಜನ್ಮ ದಿನದ ಸಂದರ್ಭ ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದ ಹಿನ್ನೆಲೆ ಶ್ರೀಮಂಗಲದ ನಾಲ್ಕೇರಿ ಗ್ರಾಮದ ಸಚಿನ್ ಚೆರಿಯಮನೆ ಎಂಬುವವರಿಗೂ ನೋಟೀಸ್ ನೀಡಲಾಗಿದೆ. ರಾಜಕೀಯ ಪ್ರೇರಿತ ಚಿತ್ರವನ್ನು ಹಂಚಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.    

Similar News