ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರುವುದಾಗಿ ಘೋಷಿಸಿದ ಮಾಜಿ ಸಚಿವ ಮನೋಹರ್‌ ತಹಶೀಲ್ದಾರ್‌

Update: 2023-04-01 13:42 GMT

ಹಾವೇರಿ: ಮಾಜಿ ಸಚಿವ ಮನೋಹರ ತಹಶೀಲ್ದಾರ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್‌ ಸೇರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. 

ಹಾನಗಲ್ ಪಟ್ಟಣದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮನೋಹರ ತಹಶೀಲ್ದಾರ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ. 

''ಈ ಬಾರಿಯಾದರೂ ನನಗೆ ಅವಕಾಶ ನೀಡುವಂತೆ ದೆಹಲಿವರೆಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ ಮನವಿ ಮಾಡಿದ್ದೆ. ಆದರೆ 2018 ರಿಂದ ನನ್ನನ್ನು ಕಣದಿಂದ ಹಿಂದೆ ಸರಿಸುವ ಪ್ರಯತ್ನ ನಡೆದಿತ್ತು. ಶ್ರೀವಾಸ್ ಮಾನೆ  ಅವರನ್ನು ಹಾನಗಲ್ ಅಭ್ಯರ್ಥಿ ಎಂದು ಘೋಷಿಸಿದ ನಂತರ ಸೌಜನ್ಯಕ್ಕೂ ಸಹ ಕಾಂಗ್ರೆಸ್ ಮುಖಂಡರು ನನ್ನ ಸಂಪರ್ಕ ಮಾಡಿಲ್ಲ'' ಎಂದು ಇದೇ ವೇಳೆ  ನೋವು ತೋಡಿಕೊಂಡರು. 

ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಭೇಟಿಯಾಗಿದ್ದು,  ಏಪ್ರಿಲ್ 7 ರಂದು ಹಾನಗಲ್ ಪಟ್ಟಣದಲ್ಲಿ ನಡೆಯಲಿರುವ ಪಂಚರತ್ನ ಯಾತ್ರೆ ವೇಳೆ ಪಕ್ಷ ಸೇರ್ಪಡೆಯಾಗಲಿದ್ದಾರೆ.

Similar News