ನೀತಿ ಸಂಹಿತೆ | 39.38 ಕೋಟಿ ರೂ.ಮೌಲ್ಯದ ಸೊತ್ತುಗಳು ವಶ: ಮುಖ್ಯ ಚುನಾವಣಾ ಅಧಿಕಾರಿ

1539 ಮಂದಿ ಗಡಿಪಾರು

Update: 2023-04-01 15:58 GMT

ಬೆಂಗಳೂರು, ಎ.1: ‘ರಾಜ್ಯ ವಿಧಾನಸಭೆಗೆ ಮಾದರಿ ನೀತಿ ಸಂಹಿತೆ ಘೋಷಣೆಯಾದ ಬಳಿಕ ಈವರೆಗೆ ನಗದು, ಮದ್ಯ, ಮಾದಕ ದ್ರವ್ಯ ಹಾಗೂ ಇತರ ವಸ್ತುಗಳು ಸೇರಿದಂತೆ ಒಟ್ಟು 39.38 ಕೋಟಿ ರೂ.ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‍ಕುಮಾರ್ ಮೀನಾ ತಿಳಿಸಿದ್ದಾರೆ.

ರಾಜ್ಯದಲ್ಲಿ 2040 ಫ್ಲೈಯಿಂಗ್ ಸ್ಕ್ವಾಡ್ಸ್ ಹಾಗೂ 2605 ಸ್ಥಿರ ಕಣ್ಗಾವಲು ತಂಡಗಳು ಸಕ್ರಿಯವಾಗಿವೆ. ಖಾಸಗಿ ಸ್ವತ್ತುಗಳ ಮೇಲಿದ್ದ 29,740 ಗೋಡೆ ಬರಹಗಳು, 69,245 ಪೋಸ್ಟರ್‍ಗಳು, 45,081 ಬ್ಯಾನರ್‍ಗಳು ಹಾಗೂ 23,611 ಇತರ ಬರಹಗಳನ್ನು ತೆರವುಗೊಳಿಸಲಾಗಿದೆ. 73 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. 

ಫ್ಲೈಯಿಂಗ್ ಸ್ಕ್ವಾಡ್ಸ್, ಸ್ಥಿರ ಕಣ್ಗಾವಲು ತಂಡಗಳು ಹಾಗೂ ಪೊಲೀಸ್ ಇಲಾಖೆಯು 7.07 ಕೋಟಿ ರೂ.ನಗದು, 5.80 ಲಕ್ಷ ರೂ.ಮೌಲ್ಯದ 1,156.11 ಲೀಟರ್ ಮದ್ಯ, 21.76 ಲಕ್ಷ ರೂ.ಮೌಲ್ಯದ 39.25 ಕೆಜಿ ಮಾದಕ ದ್ರವ್ಯ, 9.58 ಕೋಟಿ ರೂ.ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, 172 ಎಫ್‍ಐಆರ್‍ಗಳನ್ನು ದಾಖಲು ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆಯವರು 3.90 ಕೋಟಿ ರೂ.ನಗದನ್ನು ವಶಪಡಿಸಿಕೊಂಡಿದ್ದಾರೆ ಎಂದು ಮನೋಜ್‍ಕುಮಾರ್ ಮೀನಾ ತಿಳಿಸಿದ್ದಾರೆ.

ಅಬಕಾರಿ ಇಲಾಖೆಯವರು 11.66 ಕೋಟಿ ರೂ.ಮೌಲ್ಯದ 1,39,051 ಲೀಟರ್ ಮದ್ಯ, 1.81 ಲಕ್ಷ ರೂ.ಮೌಲ್ಯದ 12 ಕೆಜಿ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಅಲ್ಲದೆ, 150 ವಿವಿಧ ಬಗೆಯ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 19,255 ಶಸ್ತ್ರಾಸ್ತ್ರಗಳನ್ನು ಜಮಾ ಮಾಡಲಾಗಿದೆ. 9 ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. 1 ಶಸ್ತ್ರ ಪರವಾನಗಿ ರದ್ದು ಮಾಡಲಾಗಿದೆ. 1091 ಪ್ರಕರಣಗಳನ್ನು ಸಿಆರ್‍ಪಿಸಿ ಸೆಕ್ಷನ್ ಅಡಿ ದಾಖಲು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

1539 ಮಂದಿಯನ್ನು ಗಡಿಪಾರು ಮಾಡಲಾಗಿದೆ. 2710 ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ಎಲ್ಲ ತಂಡಗಳು ನಡೆಸಿರುವ ಕಾರ್ಯಾಚರಣೆಯಲ್ಲಿ ಈವರೆಗೆ ನಗದು, ಮದ್ಯ, ಮಾದಕ ದ್ರವ್ಯ ಹಾಗೂ ಇತರ ವಸ್ತುಗಳು ಸೇರಿದಂತೆ ಒಟ್ಟು 39.38 ಕೋಟಿ ರೂ.ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮನೋಜ್‍ಕುಮಾರ್ ಮೀನಾ ತಿಳಿಸಿದ್ದಾರೆ.

ಸ್ಥಿರ ಕಣ್ಗಾವಲು ಸಮಿತಿಗಳು ಶಿವಮೊಗ್ಗ ಜಿಲ್ಲೆಯಲ್ಲಿ 1.39 ಕೋಟಿ ರೂ., ಬೆಂಗಳೂರು ನಗರದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 30 ಲಕ್ಷ ರೂ., ಕಲಬುರಗಿ ನಗರದಲ್ಲಿ 1 ಕೋಟಿ ರೂ.ನಗದನ್ನು ಮಾ.31ರವರೆಗೆ ಜಪ್ತಿ ಮಾಡಿದ್ದಾರೆ ಎಂದು ಮನೋಜ್‍ಕುಮಾರ್ ಮೀನಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Similar News