ವಿಪಕ್ಷಗಳ ಒಗ್ಗಟ್ಟಿಗೆ ಕರೆ ನೀಡಿದ ಕಾಂಗ್ರೆಸ್: ಮೊದಲು ನಿಮ್ಮ ಮನೆ ಸರಿಪಡಿಸಿಕೊಳ್ಳಿ ಎಂದ ಎಚ್‌.ಡಿ. ದೇವೇಗೌಡ

Update: 2023-04-02 09:49 GMT

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಗೂ ಮುನ್ನ ವಿಪಕ್ಷಗಳ ಒಗ್ಗಟ್ಟಿಗಾಗಿ ಪ್ರಯತ್ನಗಳು ನಡೆಯುತ್ತಿರುವ ಬೆನ್ನಿಗೇ, ಕಾಂಗ್ರೆಸ್ ಮೊದಲು ತನ್ನ ಮನೆಯನ್ನು ಸರಿಪಡಿಸಿಕೊಳ್ಳಲಿ ಎಂದು ಜೆಡಿಎಸ್ ಪಕ್ಷದ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವ್ಯಂಗ್ಯವಾಡಿದ್ದಾರೆ.

PTI ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ದೇವೇಗೌಡರು, ವಿರೋಧ ಪಕ್ಷಗಳ ಮುಂದೆ ಹಲವಾರು ಆಯ್ಕೆಗಳಿದ್ದು, ಈ ದೇಶವು ನಾಯಕತ್ವದ ಸಂಪತ್ತು ಹೊಂದಿದೆ ಎಂದು ಪ್ರತಿಪಾದಿಸಿದ್ದಾರೆ.

ತಮ್ಮ ವೃದ್ಧಾಪ್ಯ ಸಂಬಂಧಿ ಕಾಯಿಲೆಗಳ ಕಾರಣಕ್ಕೆ ಸಕ್ರಿಯ ಪ್ರಚಾರದಿಂದ ಹಿಂದೆ ಸರಿದಿರುವ ಹಿರಿಯ ರಾಜಕಾರಣಿ ದೇವೇಗೌಡರು, ಮೇ 10ರಂದು ಕರ್ನಾಟಕ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್ ಸಾಧನೆಯ ಬಗ್ಗೆ ಅದಮ್ಯ ವಿಶ್ವಾಸ ವ್ಯಕ್ತಪಡಿಸಿದ್ದು, ಈ ಚುನಾವಣಾ ಫಲಿತಾಂಶವು ಇತರೆ ರಾಜ್ಯಗಳ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

"ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಆಡಳಿತಾರೂಢ ಬಿಜೆಪಿಯನ್ನು ಒಳಗೊಂಡಿರುವ ಕಠಿಣ ಚುನಾವಣಾ ಸ್ಪರ್ಧೆಯಲ್ಲಿ ಜೆಡಿಎಸ್ ಮರಳಿ ಅಧಿಕಾರಕ್ಕೆ ಬರಲಿದ್ದು, ಜೆಡಿಎಸ್ ತನ್ನ ಪಂಚರತ್ನ ಕಾರ್ಯಕ್ರಮಗಳಾದ ಸಾಮಾಜಿಕ ಒಳಗೊಳ್ಳುವಿಕೆ ಹಾಗೂ ಅಭಿವೃದ್ಧಿ ದೃಷ್ಟಿಕೋನದ ಮೂಲಕ ಮತ ಯಾಚನೆ ಮಾಡುತ್ತಿದೆ. ಜೆಡಿಎಸ್ ಪಕ್ಷ ಕೇವಲ ಮೈಸೂರು ಪ್ರಾಂತ್ಯಕ್ಕೆ ಮಾತ್ರ ಸೀಮಿತ ಎಂಬುದು ರಾಷ್ಟ್ರೀಯ ಪಕ್ಷಗಳ ಜಾಣ ಪ್ರಚಾರವಾಗಿದೆ" ಎಂದು ಜೆಡಿಎಸ್ ವರಿಷ್ಠರೂ ಆದ ಎಚ್.ಡಿ.ದೇವೇಗೌಡ ಅಭಿಪ್ರಾಯ ಪಟ್ಟಿದ್ದಾರೆ.

ರಾಷ್ಟ್ರೀಯ ಪಕ್ಷಗಳು ದೊಡ್ಡ ಹಾಗೂ ಸುಳ್ಳು ಭರವಸೆಗಳನ್ನು ನೀಡುತ್ತಿವೆ ಎಂದು ಅವರು ಪಿಟಿಐ ಸಂದರ್ಶನದ ಸಂದರ್ಭದಲ್ಲಿ ಲಿಖಿತ ಪ್ರತಿಕ್ರಿಯೆ ನೀಡಿದ್ದಾರೆ.

ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ:

ಪ್ರಶ್ನೆ: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಸಾಧನೆಯನ್ನು ನೀವು ಹೇಗೆ ನೋಡುತ್ತೀರಿ? ಜೆಡಿಎಸ್ ಪಕ್ಷದ ಚುನಾವಣಾ ಪ್ರಚಾರ ಕಾರ್ಯತಂತ್ರ ಹಾಗೂ ಗಮನ ಏನಾಗಿರಲಿದೆ?

ಉತ್ತರ: ನನ್ನ ಪಕ್ಷವು ಕರ್ನಾಟಕದಾದ್ಯಂತ ಉತ್ತಮ ಸಾಧನೆ ತೋರಲಿದೆ. ಸಿನಿಕರಾಗಿರುವ ಹಾಗೂ ರಾಷ್ಟ್ರೀಯ ಪಕ್ಷಗಳತ್ತಲೇ ಹೆಚ್ಚು ಗಮನ ನೀಡುತ್ತಿರುವವರು ಅಚ್ಚರಿಗೊಳಗಾಗಲಿದ್ದಾರೆ. ನಾವು ವಿಭಜನೆಯ ಕಾರ್ಯಸೂಚಿ ಮೇಲೆ ಮತ ಯಾಚಿಸುತ್ತಿಲ್ಲ. ನಾವು ಸಾಮಾಜಿಕ ಒಳಗೊಳ್ಳುವಿಕೆ ಹಾಗೂ ಅಭಿವೃದ್ಧಿ ದೃಷ್ಟಿಕೋನ ಹೊಂದಿರುವ ಪಂಚರತ್ನ ಕಾರ್ಯಕ್ರಮಗಳ ಆಧಾರದಲ್ಲಿ ಮತ ಯಾಚಿಸುತ್ತಿದ್ದೇವೆ. ನಮ್ಮ ಪಕ್ಷವು ಅಧಿಕಾರಕ್ಕೆ ಬರಲಿದೆ ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಿದೆ.

ಪ್ರ: ಕೆಲವು ವಲಯಗಳಲ್ಲಿ ಜೆಡಿಎಸ್ ಪಕ್ಷವು ಮೈಸೂರು ಪ್ರಾಂತ್ಯವನ್ನು ಬಿಟ್ಟು ವಿಸ್ತರಣೆಗೊಳ್ಳಲು ಸಾಧ್ಯವಾಗಿಲ್ಲ ಎಂಬ ಭಾವನೆಯಿದೆ‌. ಈ ನಿಟ್ಟಿನಲ್ಲಿ ಯಾವ ಪ್ರಯತ್ನ ಮಾಡಲಾಗಿದೆ?

ಉ: ನಾವು ರಾಷ್ಟ್ರೀಯ ಪಕ್ಷಗಳ ಜಾಣ ಪ್ರಚಾರದಿಂದ ಪ್ರಾದೇಶಿಕವಾಗಿ ಸೀಮಿತಗೊಂಡಿದ್ದೇವೆ. ನಾವು ಯಾವಾಗಲೂ ರಾಜ್ಯಾದ್ಯಂತ ಹಾಗೂ ಎಲ್ಲ ಸಮುದಾಯಗಳಿಂದ ಶಾಸಕರನ್ನು ಹೊಂದಿದ್ದೆವು. ನಾನು ಹೇಳುತ್ತಿರುವುದನ್ನು ಅರ್ಥ ಮಾಡಿಕೊಳ್ಳಲು ಯಾರಾದರೂ 1999ರ ನಂತರದ ಶಾಸಕರು ಹಾಗೂ ಕ್ಷೇತ್ರಗಳ ಪಟ್ಟಿಯನ್ನು ನೋಡಬೇಕಿದೆ.

ಪ್ರ: ಜೆಡಿಎಸ್ ಪಕ್ಷವು 123 ಕ್ಷೇತ್ರಗಳ್ಲಿ ಗೆದ್ದು ಸ್ವತಂತ್ರವಾಗಿ ಸರ್ಕಾರ ರಚಿಸುವ ಗುರಿ ಹೊಂದಿದೆ‌. ಆದರೆ, ಕೆಲವು ಚುನಾವಣಾ ವಿಶ್ಲೇಷಕರು ಈ ಗುರಿಯನ್ನು ಅವಾಸ್ತವ ಎಂದು ಹೇಳುತ್ತಿದ್ದಾರೆ. ಇದನ್ನು ಸಾಧಿಸಬಹುದು ಎಂಬ ಆತ್ಮವಿಶ್ವಾಸ ನಿಮಗೆ ಎಲ್ಲಿಂದ ಬಂತು?

ಉ: ನಮ್ಮ ಕಠಿಣ ಪರಿಶ್ರಮ ಹಾಗೂ ಅಭಿವೃದ್ಧಿ ದೃಷ್ಟಿಕೋನ ನಮಗೆ ಆ ಆತ್ಮವಿಶ್ವಾಸ ನೀಡಿದೆ. ನಾನು ನಮ್ಮ ಟೀಕಾಕಾರರು ಹಾಗೂ ವಿರೋಧಿಗಳ ಸಿನಿಕತೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.

ಪ್ರ: ನೀವೀಗಲೂ ಜನತಾ ಪರಿವಾರ ಅಥವಾ ತೃತೀಯ ರಂಗವನ್ನು ಪುನರುಜ್ಜೀವನಗೊಳಿಸಬಹುದು ಎಂದು ಭಾವಿಸಿದ್ದೀರಾ ಅಥವಾ ಇದು ಮುಗಿದ ಅಧ್ಯಾಯವೆ?

ಉ: ಎಲ್ಲವೂ ಸಾಧ್ಯವಿದೆ. ಎಲ್ಲವೂ ಎಂದರೆ ಎಲ್ಲವೂ ಕೂಡಾ. ನನಗೆ ತೃತೀಯ ಅಥವಾ ನಾಲ್ಕನೆ ರಂಗದ ಕುರಿತು ನಂಬಿಕೆ ಇಲ್ಲ. ಈ ದೇಶ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸುವ ಎಲ್ಲ ಪ್ರಯತ್ನವೂ ಮೊದಲ ರಂಗವೇ ಆಗಿದೆ ಎಂದು ನನ್ನ ನಂಬಿಕೆ.

Similar News