ವಾಹನ ತಡೆದು ದಾಳಿ ಪ್ರಕರಣ: ಅಮಾನುಷ ದೌರ್ಜನ್ಯದ ವೀಡಿಯೋ ಹರಿಯಬಿಟ್ಟಿದ್ದ ಪುನೀತ್ ಕೆರೆಹಳ್ಳಿ; ವ್ಯಾಪಕ ಆಕ್ರೋಶ

Update: 2023-04-02 10:49 GMT

ಬೆಂಗಳೂರು, ಎ.2: 'ರಾಷ್ಟ್ರ ರಕ್ಷಣಾ ಪಡೆ'ಯ ಕಾರ್ಯಕರ್ತರೆಂದು ಕರೆಸಿಕೊಂಡ ಪುನೀತ್ ಕೆರೆಹಳ್ಳಿ ನೇತೃತ್ವದ ದುಷ್ಕರ್ಮಿಗಳ ಗುಂಪೊಂದು ಕನಕಪುರ ತಾಲೂಕಿನ ಸಾತನೂರು ಬಳಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ತಡೆದು ದಾಳಿ ನಡೆಸಿರುವ ಘಟನೆಗೆ ಸಂಬಂಧಿಸಿದ ಅಮಾನುಷ ದೌರ್ಜನ್ಯದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಬೆಳಕಿಗೆ ಬಂದಿದೆ.  

ಶುಕ್ರವಾರ ಮಧ್ಯರಾತ್ರಿಯಲ್ಲಿ ಗೂಡ್ಸ್ ವಾಹನವೊಂದರಲ್ಲಿ ಗೋವುಗಳನ್ನು ಮಳವಳ್ಳಿ ಕಡೆಯಿಂದ ತಮಿಳುನಾಡಿನ ಕುಮಂಗಲಗೆರೆ ಸಾಗಿಸುತ್ತಿದ್ದ ವೇಳೆ ರಾಷ್ಟ್ರ ರಕ್ಷಣಾ ಪಡೆಯ ಪುನೀತ್‌ಕೆರೆಹಳ್ಳಿ ಹಾಗೂ ಆತನ ಸ್ನೇಹಿತರು  ಸಾತನೂರು ಬಳಿ ವಾಹನವನ್ನು ತಡೆದು ವಾಹನದಲ್ಲಿದ್ದ ಮೂವರ ಮೇಲೆ ಹಲ್ಲೆ ನಡೆಸಿತ್ತು. ಈ ವೇಳೆ ಮಂಡ್ಯದ ಇದ್ರೀಸ್ ಪಾಷಾ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಮೃತನ ಪಾಲಕರು ಪುನೀತ್‌ಕೆರೆಹಳ್ಳಿಯೇ ಕೊಲೆ ಮಾಡಿರುವುದು ಎಂದು ಆರೋಪಿಸಿ ಸಾತನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ವಿಡಿಯೋ ಹರಿಬಿಟ್ಟಿದ್ದ ಪುನೀತ್ ಕೆರೆಹಳ್ಳಿ

ಸಾತನೂರು ಘಟನೆಗೆ ಸಂಬಂಧಿಸಿದ ವಿಡಿಯೋ ಹರಿಬಿಟ್ಟಿದ್ದ ಪುನೀತ್ ಕೆರೆಹಳ್ಳಿ, ಈ ಹಿಂದೆ ಕೂಡ ಇಂಥ ಹಲವು ವಿಡಿಯೋಗಳನ್ನು ಹರಿಬಿಟ್ಟಿರುವುದು ಬೆಳಕಿಗೆ ಬಂದಿದೆ.  

ಸಾತನೂರು ಘಟನೆ ಬಳಿಕ (ಶನಿವಾರ) ಬೆಂಗಳೂರಿನ ಬಾಗಲ ಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ಮತ್ತೊಂದು ವಾಹನವನ್ನು ತಡೆದು ಅನೈತಿಕ ಪೊಲೀಸ್ ಗಿರಿ ನಡೆಸಿರುವ ವಿಡಿಯೋ ಹರಿಬಿಟ್ಟಿದ್ದಾನೆ. ಈ ವಿಡಿಯೋದಲ್ಲಿ ಆತ ಹೇಳುವಂತೆ ''ಇದು ನಮ್ಮ ಮೂರನೇ ಗೋ ರಕ್ಷಣೆ. ಕನಕಪುರದಲ್ಲಿ ಮುಗಿಸಿ ಬರುವ ದಾರಿಯಲ್ಲಿ ಬೆಂಗಳೂರಿನ ಬಾಗಲ ಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೊಂದು ವಾಹನವನ್ನು ತಡೆದಿದ್ದೇವೆ'' ಎಂದು ಹೇಳುತ್ತಾನೆ. ಈ ನಡುವೆ ಈ ಗುಂಪು ಹರಿಬಿಟ್ಟಿರುವ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದ್ದು, ಅದರಲ್ಲಿ ಗೋ ಸಾಗಾಟ ನಡೆಸುತ್ತಿದ್ದ ವಾಹನವನ್ನು ತಡೆದು ವಾಹನದಲ್ಲಿದ್ದ ವ್ಯಕ್ತಿಗೆ ವಿದ್ಯುತ್ ಶಾಕ್ ನೀಡಿ ಕ್ರೂರವಾಗಿ ಹಿಂಸಿಸುವುದು ವಿಡಿಯೋದಲ್ಲಿ ದಾಖಲಾಗಿದೆ. 

ವಿಡಿಯೋದಲ್ಲೇನಿದೆ? : ವ್ಯಕ್ತಿಯೊಬ್ಬರನ್ನು ವಾಹನಕ್ಕೆ ಕಟ್ಟಿ ಹಾಕಿ ವಿದ್ಯುತ್ ಶಾಕ್ ಕೊಡುವುದು ಮತ್ತು 'ಇಂಥವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ' ಎಂದು ಪುನೀತ್ ಕೆರೆಹಳ್ಳಿ ಹೇಳುವುದು ವಿಡಿಯೋದಲ್ಲಿ ದಾಖಲಾಗಿದೆ. ಆದರೆ ಈ ಘಟನೆ ನಡೆದಿರುವ ದಿನಾಂಕ, ನಿಖರವಾದ ಸ್ಥಳದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.  

ವ್ಯಾಪಕ ಆಕ್ರೋಶ: 

ಘಟನೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಹಲವರು ಪುನೀತ್ ಕೆರೆಹಳ್ಳಿ ಬಂಧನಕ್ಕೆ ಒತ್ತಾಯಿಸಿದ್ದಾರೆ. 

ರಾಜಸ್ತಾನದ ಸ್ವಘೋಷಿತ ಗೋರಕ್ಷಕ ಮೋನು ಮನೇಸರ್‌ ರೀತಿಯಲ್ಲೇ ಪುನೀತ್ ಕೆರೆಹಳ್ಳಿ ಕೂಡ ಪದೇ ಪದೇ ಹಿಂಸಾಪ್ರಚೋದಕ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟು ಜನರಿಂದ ಗೋರಕ್ಷಣೆ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದಾನೆ ಎಂದು ಹಲವರು ಆರೋಪಿಸಿದ್ದಾರೆ. 

ಇದನ್ನೂ ಓದಿ: ಕನಕಪುರ | ಪುನೀತ್‌ಕೆರೆಹಳ್ಳಿ ತಂಡದಿಂದ ವಾಹನ ತಡೆದು ದಾಂಧಲೆ: ಓರ್ವನ ಅನುಮಾನಾಸ್ಪದ ಸಾವು

Similar News