ಮೌಢ್ಯ ಹೋಗಲಾಡಿಸಲು ಸ್ಮಶಾನದಲ್ಲಿ ಚುನಾವಣಾ ಪ್ರಚಾರ ವಾಹನಗಳಿಗೆ ಚಾಲನೆ: ಸತೀಶ್ ಜಾರಕಿಹೊಳಿ

Update: 2023-04-02 14:42 GMT

ಬೆಳಗಾವಿ, ಎ. 2: ‘ಮುಂಬರಲಿರುವ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಹೊಸದಾಗಿ ವಾಹನಗಳನ್ನು ತಂದಿದ್ದು, ಇನ್ನೂ ಎರಡು ಅಥವಾ ಮೂರು ದಿನಗಳಲ್ಲಿ ಮೌಢ್ಯ ಹೋಗಲಾಡಿಸಲು ಸ್ಮಶಾನಲ್ಲಿ ಪೂಜೆ ಸಲ್ಲಿಸಿ ಪ್ರಚಾರ ವಾಹನಗಳಿಗೆ ಚಾಲನೆ ನೀಡಲಾಗುವುದು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಪ್ರತಿದಿನ ರಾಹುಕಾಲ ಇರುತ್ತದೆ. ಎ.13ರಿಂದ 20ರ ವರೆಗಿನ ಅವಧಿಯಲ್ಲೂ ರಾಹುಕಾಲವಿದ್ದರೆ, ಆ ವೇಳೆಯಲ್ಲೇ  ನಾನು ನಾಮಪತ್ರ ಸಲ್ಲಿಸುತ್ತೇನೆ. ರಾಹುಕಾಲ ಅಥವಾ ಒಳ್ಳೆಯ ಕಾಲ ಎಂಬುದು ಕೇವಲ ನಮ್ಮ ಭ್ರಮೆ’ ಎಂದು ನುಡಿದರು.

‘ಮೌಢ್ಯಾಚರಣೆ ವಿರೋಧಿಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ನಮ್ಮ ವಿಚಾರಧಾರೆಗಳನ್ನು ಪ್ರಚಾರ ಮಾಡಲಾಗುತ್ತಿದೆ. ಸಮಾಜ ಸುಧಾರಕರಾದ ಬಸವಣ್ಣ, ಬುದ್ಧ ಮತ್ತು ಅಂಬೇಡ್ಕರ್ ಅವರ ಮಾರ್ಗದಲ್ಲಿ ನಡೆಯುವ ಪ್ರಯತ್ನವಷ್ಟೇ ಇದು’ ಎಂದ ಅವರು, ‘ಯಮಕನಮರಡಿ ಕ್ಷೇತ್ರದಲ್ಲಿ ಈ ಬಾರಿ ಪ್ರಚಾರ ಮಾಡುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ವರುಣಾ ಕ್ಷೇತ್ರದಿಂದ ಟಿಕೆಟ್ ಘೋಷಣೆಯಾಗಿದೆ. ಸಿದ್ದರಾಮಯ್ಯ ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ವರುಣಾ ಕ್ಷೇತ್ರ 40 ವರ್ಷಗಳಿಂದ ಅವರ ಕೈಹಿಡಿದಿದೆ. ಈ ಬಾರಿ ಅಲ್ಲಿ ಸೋಲುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ವರುಣಾ ಕ್ಷೇತ್ರಕ್ಕೆ ಪ್ರಚಾರಕ್ಕೆ ನಾನು ಹೋಗುತ್ತೇನೆ’ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

Similar News