ಬಿಜೆಪಿ ಸರಕಾರ ತಂದಿದ್ದಕ್ಕೆ ನನಗೆ ಪಶ್ಚಾತ್ತಾಪ ಇದೆ: ಮೈಸೂರಿನಲ್ಲಿ ಬೆಂಬಲಿಗರೊಂದಿಗೆ ಎಚ್. ವಿಶ್ವನಾಥ್ ಸತ್ಯಾಗ್ರಹ
ಮೈಸೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರ ಉರುಳಲು ಕಾರಣಕರ್ತರಲ್ಲಿ ಒಬ್ಬರಾದ ಅಡಗೂರು ಎಚ್ ವಿಶ್ವನಾಥ್ ಅವರು ಬಿಜೆಪಿ ಸರ್ಕಾರ ರಚನೆಯಾಗಿದಕ್ಕೆ ಸೋಮವಾರ ಪಶ್ಚಾತ್ತಾಪ ಪಟ್ಟು ಸತ್ಯಾಗ್ರಹ ನಡೆಸುತ್ತಿದ್ದಾರೆ.
ಮೈಸೂರು ನ್ಯಾಯಾಲಯದ ಮಹಾತ್ಮ ಗಾಂಧಿ ಪುತ್ಥಳಿ ಬಳಿ ತಮ್ಮ ಬೆಂಬಲಿಗರೊಂದಿಗೆ ಎಚ್ ವಿಶ್ವನಾಥ್ ಸತ್ಯಾಗ್ರಹ ನಡೆಸುತ್ತಿದ್ದು, ಲೇಖಕ ಭಗವಾನ್ ಕೂಡಾ ಸೇರಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಎಚ್ ವಿಶ್ವನಾಥ್, ''ಡಬಲ್ ಇಂಜಿನ್ ಸರ್ಕಾರ ಇದ್ದರೆ ರಾಜ್ಯಕ್ಕೆ ಒಳಿತೆಂದು ಸಮ್ಮಿಶ್ರ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ತಂದೆವು. ಆದರೆ ಬಿಜೆಪಿ ಪರಮ ಭ್ರಷ್ಟ ಸರ್ಕಾರವಾಗಿದೆ. ಇಂತಹ ಸರ್ಕಾರ ಬರಲು ನಾನು ಕಾರಣವಾಗಿದ್ದಕ್ಕೆ ನನಗೆ ಅತೀವ ನೋವಿದೆ'' ಎಂದು ವಿಷಾದಿಸಿದರು.
'ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾಗಿ, ಜನವಿರೋಧಿ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟ ಕೊರಗು ತನ್ನನ್ನು ಕಾಡುತ್ತಿದೆ, ಪಾಪದ ಹೊರೆ ಇಳಿಸಿಕೊಳ್ಳಲು ಪಶ್ಚಾತಾಪ ಸತ್ಯಾಗ್ರಹ ಮಾಡುತ್ತಿದ್ದೇನೆ' ಎಂದು ಹೇಳಿದರು.
ಐವತ್ತು ವರ್ಷಗಳ ರಾಜಕಾರಣದಲ್ಲಿ 40 ವರ್ಷ ಕಾಂಗ್ರೆಸ್‌ನಲ್ಲಿದ್ದೆ. ನಾನು ಎಲ್ಲಿದ್ದರೂ, ಹೇಗಿದ್ದರೂ ನನ್ನ ಮನಸ್ಸಿನಲ್ಲಿ ಕಾಂಗ್ರೆಸ್ ಮಾತ್ರವಿದೆ. ನಾನು ಸದಾಕಾಲ ಜನರೊಟ್ಟಿಗೆ ಬೆರೆತು ಬದುಕಿದವನು ಎಂದರು.
ಕೆಲವೊಂದು ಅನಿವಾರ್ಯ ಕಾರಣಗಳಿಂದಾಗಿ ದೇವೇಗೌಡರ ಮಾತಿಗೆ ಬೆಲೆಕೊಟ್ಟು ನಾನು ಜಾತ್ಯತೀತ ಜನತಾ ದಳವನ್ನು ಸೇರಬೇಕಾಯಿತು. ದೇವೇಗೌಡರ ಅಭಿಮಾನ, ಪ್ರೀತಿ ಮತ್ತು ಆಶೀರ್ವಾದಗಳಿಂದ ಹಾಗೂ ಹುಣಸೂರಿನ ಜನರ ವಿಶ್ವಾಸದಿಂದಾಗಿ ಶಾಸಕನಾಗಿಯೂ ಆಯ್ಕೆಯಾದೆ. ಆದರೇ, ಜೆಡಿಎಸ್ ಶಾಸಕನಾದ ನನ್ನನ್ನು ಆ ಪಕ್ಷ ನಡೆಸಿಕೊಂಡ ರೀತಿ ಸ್ವಾಭಿಮಾನಿಯಾದ ನನಗೆ ಸಹಿಸಿಕೊಳ್ಳಲಾಗಲಿಲ್ಲ. ನನ್ನ ಮೂಲ ವ್ಯಕ್ತಿತ್ವಕ್ಕೇ ಪೆಟ್ಟು ಬೀಳುತ್ತಿದೆ ಎಂದೆನಿಸಿ ಹೊಂದಾಣಿಕೆ ಇಲ್ಲದ ಮೈತ್ರಿ ಸರ್ಕಾರದಿಂದ ಯಾರಿಗೂ ಅನುಕೂಲವಿಲ್ಲ ಎಂಬುದು ಖಾತ್ರಿಯಾಗಿ ಅನಿವಾರ್ಯವಾಗಿ ಬಿಜೆಪಿ ಬೆಂಬಲಿಸಬೇಕಾಯಿತು ಎಂದು ಹೇಳಿದರು.