×
Ad

ಇನ್ನೊಬ್ಬರಿಂದ ಮೀಸಲಾತಿ ಕಿತ್ತು ಕೊಡುವುದನ್ನು ಒಕ್ಕಲಿಗ ಸಮುದಾಯ ಒಪ್ಪಲ್ಲ: ನಂಜಾವಧೂತ ಸ್ವಾಮೀಜಿ

ಶೇ.4ರಿಂದ ಶೇ.16ರಷ್ಟು ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ

Update: 2023-04-03 14:36 IST

ಮಂಡ್ಯ: 'ರಾಜ್ಯದ ಒಕ್ಕಲಿಗರು ಬೇರೆಯವರ ಅನ್ನವನ್ನು ಕಸಿದು ತಿನ್ನಬೇಕು ಎನ್ನುವವರಲ್ಲ. ಶ್ರಮಿಕ ವರ್ಗ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು, ಕೂಡಲೇ ಶೇ. 4 ರಿಂದ ಶೇ.16ರಷ್ಟು ಮೀಸಲಾತಿ ಹೆಚ್ಚಳ ಮಾಡಬೇಕು' ಎಂದು ತುಮಕೂರು ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನದ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಮಹಾಸ್ವಾಮೀಜಿ ಒತ್ತಾಯಿಸಿದ್ದಾರೆ.

ಮದ್ದೂರು ಪಟ್ಟಣದ ಸುಮುಖ ನಿಧಿ ಲಿಮಿಟೆಡ್ ನ ನೂತನ ಕಚೇರಿಯನ್ನು ಲೋಕಾರ್ಪಣೆಗೊಳಿಸಿ ಬಳಿಕ ಆಶೀರ್ವಚನ ನೀಡಿದ ಅವರು, ಈಗ ಘೋಷಣೆ ಮಾಡಿರುವ  2 ಪರ್ಸೆಂಟ್ ಅನ್ನು ಸ್ವೀಕಾರ ಮಾಡಬೇಕೋ, ಬೇಡವೋ ಎಂಬುದು ಗೊಂದಲವಾಗಿದೆ. ಇನ್ನೊಬ್ಬರಿಂದ ಕಿತ್ತು ಕೊಡುವುದನ್ನು ಉದಾರ ಮನಸ್ಥಿತಿಯ ಒಕ್ಕಲಿಗ ಸಮುದಾಯ ಒಪ್ಪುವುದಿಲ್ಲ ಎಂದರು.

ನಮ್ಮ ಸುಮುದಾಯದಲ್ಲಿ ಶೇಕಡಾ 60 ರಷ್ಟು ಜನ ಆರ್ಥಿಕವಾಗಿ ಹಿಂದುಳಿದಿದ್ದು, ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಯಾವ ರೀತಿ ಸರಿಪಡಿಸುತ್ತಿರಿ ಅನ್ನುವುದನ್ನು ಮೂರು ಪ್ರಮುಖ ಪಕ್ಷಗಳು ಬಹಿರಂಗ ಪಡಿಸಬೇಕು  ಎಂದು ಒತ್ತಾಯಿಸಿದ ಅವರು,
ಸಮುದಾಯಕ್ಕೆ ಆಗಿರುವ ಮೀಸಲಾತಿ ಅನ್ಯಾಯವನ್ನು ಯಾವ ರೀತಿ ಸರಿಪಡಿಸುತ್ತೀರಿ? ಎಂಬುವುದರ ಮಾನದಂಡ ಆಧಾರದ ಇಟ್ಟುಕೊಂಡು ಸಮುದಾಯ ಚುನಾವಣೆಯಲ್ಲಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.

ಈಗಾಗಲೇ ಸರಕಾರದ ಎಲ್ಲಾ ರಂಗದಲ್ಲೂ ಮೀಸಲಾತಿ ಇಲ್ಲದೇ  ಶೇ.70 ಇರೋರಿಗೆ ಮತ್ತೆ ಶೇ. 18 ಮೀಸಲಾತಿ ನೀಡಿದರೆ ಬಡವರ ಮಕ್ಕಳು ಏನ ಮಾಡಬೇಕು? ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ನಾವು ಶೇ.15 ಇರುವ ದೊಡ್ಡ ಸಮುದಾಯಕ್ಕೆ ಬರಿ ಶೇ.4 ಮೀಸಲಾತಿ ನೀಡುವುದು ಯಾವ ನ್ಯಾಯ? ಇದರಿಂದ ನಮ್ಮ ಒಕ್ಕಲಿಗ ಮಕ್ಕಳು ಎಲ್ಲಾ ಅವಕಾಶಗಳಿಂದ ವಂಚಿತರಾಗುತ್ತಿದ್ದು ಇದರ ವಿರುದ್ಧ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಸುಮುಖ ನಿಧಿ ಸಂಸ್ಥೆಯು ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡು ಮತ್ತಷ್ಟು ಅಭಿವೃದ್ಧಿ ಯಶಸ್ಸು ಕಾಣಲೆಂದು ಹಾರೈಸಿದರಲ್ಲದೆ, ಆರ್ಥಿಕವಾಗಿ ಹಿಂದು ವರ್ಗದವರಿಗೂ ಸೇವೆ ಕಲ್ಪಿಸಿ ದುರ್ಬಲರನ್ನು ಸಶಕ್ತರನ್ನಾಗಿಸಲು ಶ್ರಮಿಸಬೇಕೆಂದು ಕರೆ ನೀಡಿದರು.

ಸಾಹಿತಿಗಳಾದ ತೈಲೂರು ವೆಂಕಟ ಕೃಷ್ಣ,  ಡಾ. ಬೆಳ್ಳೂರು ವೆಂಕಟಪ್ಪ, ಸಂಸ್ಥೆ ಸಂಸ್ಥಾಪಕ ಷೇರುದಾರ ಡಾ. ಬಿ. ಪಿ. ಮಹೇಶ್,  ಅಧ್ಯಕ್ಷ ಕೆ.ಆರ್. ಕುಮಾರ್, ವ್ಯವಸ್ಥಾಪಕ ನಿರ್ದೇಶಕ ಟಿ. ಸಿ. ರಘು, ಕಾರ್ಯದರ್ಶಿ ಮಹೇಶ್, ನಿರ್ದೇಶಕರಾದ ಟಿ. ಪಿ. ಶ್ರೀನಿವಾಸ್. ಸಿ. ಕೆ. ಸತೀಶ್,ಟಿ. ಎಸ್. ಸತೀಶ್, ಶಂಕರೇಗೌಡ, ಸಂಸ್ಥಾಪಕ ಷೇರುದಾರ ಎಸ್. ಸಿದ್ದರಾಜು, ಡಿ. ಕುಮಾರಸ್ವಾಮಿ, ಲೆಕ್ಕ ಪರಿಶೋಧಕ ಶಿವರಾಜು ಸೇರಿದಂತೆ ಇತರರಿದ್ದರು.

"ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಅಂಬಾನಿ, ಅದಾನಿಯಂತಹ ಉದ್ಯಮಿಗಳ ಮೇಲೆ ಇರುವ ಕಾಳಜಿ ಸಾಮಾನ್ಯ ಜನ ಹಾಗೂ ರೈತರ ಬಗ್ಗೆ ಇಲ್ಲದಾಗಿದೆ. ರೈತರು ದೇಶದ ಜನರಿಗೆ ಅನ್ನ ನೀಡಲು ಹಗಲಿರಳು ದುಡಿಯುತ್ತಾರೆ. ದೊಡ್ಡ ಉದ್ಯಮಿಗಳ ಹಾಗೂ ಬಂಡವಾಳಶಾಹಿಗಳ ಸಾವಿರಾರು ಕೋಟಿ ರೂ. ಸಾಲ ಮನ್ನಾ ಮಾಡುವ ಸರಕಾರಕ್ಕೆ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡುವ ಮನಸ್ಸು ಇಲ್ಲ."

 -ಶ್ರೀ ನಂಜಾವದೂತ ಮಹಾಸ್ವಾಮೀಜಿ.

Similar News