ಈ ಬಾರಿ ನನ್ನ ಎದುರು ಯಾರೇ ನಿಂತರೂ ಗೆಲ್ಲುತ್ತೇನೆ: ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
ದಾವಣಗೆರೆ: ಯಾರೂ ಬೇಕಾದರೂ ನನ್ನ ವಿರುದ್ಧ ಸ್ಪರ್ಧಿಸಲಿ, ಬೇಡ ಅನ್ನುವುದಿಲ್ಲ. ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಜನರು ರೋಸಿ ಹೋಗಿದ್ದಾರೆ. ಶೇ.40ರಷ್ಟು ಕಮಿಷನ್ ಸರ್ಕಾರ ಎಂದು ಮಾಧ್ಯಮಗಳಲ್ಲಿ ಬಂದಿದೆ ಎಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.
ಇಲ್ಲಿನ ಶಾಮನೂರು ಗ್ರಾಮದಲ್ಲಿ ತಮ್ಮ ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಸ್ವಲ್ಪ ಜಾಸ್ತಿ ಹುಮ್ಮಸಿನಲ್ಲಿದ್ದ ಹಿನ್ನೆಲೆ ಸೋಲಾಗಿದೆ. ಈ ಸಲ ಹಾಗೇ ಆಗಲು ಸಾಧ್ಯವಿಲ್ಲ. ನಾವು ತಂದ ಕಾಮಗಾರಿಗಳೇ ಈಗ ನಡೆಯುತ್ತಿವೆ. ರಾಜ್ಯದಲ್ಲಿ ಹೇಗೆ 40 ಪರ್ಸೆಂಟ್ ಸರ್ಕಾರ ಇದೆ. ದಾವಣಗೆರೆಯಲ್ಲಿ ಸಹ ಇದೆ. ಇದರಿಂದ ಜನ ಬೇಸತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಹಿಟ್ಲರ್ ರೀತಿ ನಡೆಸಲಾಗುತ್ತಿದೆ ಎಂದರು.
ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಜನರೇ ಈ ಬಾರಿ ಒತ್ತಾಯ ಮಾಡಿದ್ದರು. ಆ ಕಾರಣಕ್ಕಾಗಿಯೇ ನಾನು ಸ್ಪರ್ಧಿಸುತ್ತಿದ್ದೇನೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರವೇ ಜನರ ಒಲವು ಇದೆ. ಈ ಬಾರಿ ನನ್ನ ಎದುರು ಯಾರೇ ನಿಂತರೂ ಗೆಲ್ಲುತ್ತೇನೆ ಎಂದು ಮಲ್ಲಿಕಾರ್ಜುನ್ ವಿಶ್ವಾಸ ವ್ಯಕ್ತ ಪಡಿಸಿದರು.
ಈ ವೇಳೆ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಮುಖಂಡರು, ಶಾಮನೂರು ಗ್ರಾಮಸ್ಥರು ಇದ್ದರು.