ಚುನಾವಣಾ ಪ್ರಚಾರದ ಮೊದಲ ದಿನವೇ ಬಿಜೆಪಿ ಶಾಸಕ ಹರ್ಷವರ್ಧನ್ ಗೆ ಗ್ರಾಮಸ್ಥರ ತರಾಟೆ
5 ವರ್ಷಗಳ ನಂತರ ನಮ್ಮ ಗ್ರಾಮ ನೆನಪಿಗೆ ಬಂತೇ ಎಂದು ಆಕ್ರೋಶ
ಮೈಸೂರು,ಎ.3: ಐದು ವರ್ಷಗಳ ನಂತರ ಗ್ರಾಮಕ್ಕೆ ಭೇಟಿ ಕೊಟ್ಟ ನಂಜನಗೂಡು ಕ್ಷೇತ್ರದ ಬಿಜೆಪಿ ಶಾಸಕ ಹರ್ಷವರ್ಧನ್ ಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಂಜನಗೂಡು ತಾಲೂಕು ದೇವನೂರು ಗ್ರಾಮದಲ್ಲಿ ನಡೆದಿದೆ.
ಸಾರ್ವತ್ರಿಕ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ಚುನಾವಣಾ ಪ್ರಚಾರ ಕೈಗೊಂಡ ಮೊದಲ ದಿನವೇ ಶಾಸಕ ಹರ್ಷವರ್ಧನ್ ದೇವನೂರು ಗ್ರಾಮಸ್ಥರ ವಿರೋಧ ಎದುರಿಸಬೇಕಾಯಿತು. ಶಾಸಕ ಹರ್ಷವರ್ಧನ್ ಅವರ ನೆರವಿಗೆ ಬಂದ ಇತರ ಮುಖಂಡರುಗಳಿಗೂ ಗ್ರಾಮಸ್ಥರು ಚೀಮಾರಿ ಹಾಕಿದ್ದಾರೆ.
ದೇವನೂರು ಗ್ರಾಮದ ಗುರುಮಲ್ಲೇಶ್ವರ ಮಠಕ್ಕೆ ಸೋಮವಾರ ತೆರಳಿ ಪೂಜೆ ಸಲ್ಲಿಸಿ ಶಾಸಕ ಹರ್ಷವರ್ಧನ್ ಪ್ರಚಾರ ಆರಂಭಿಸಿದರು. ಇದೇ ವೇಳೆ ಗ್ರಾಮದ ನೂರಕ್ಕೂ ಹೆಚ್ಚು ಯುವಕರು ಸುತ್ತುವರಿದು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಐದು ವರ್ಷಗಳ ಆಡಳಿತಾವಧಿಯಲ್ಲಿ ದೇವನೂರು ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ದೇವನೂರು ಗ್ರಾಮದ ಪ್ರಸಿದ್ಧ ಮಠದ ಮುಂಭಾಗದಲ್ಲಿರುವ ಒಂದು ಬೀದಿ ದೀಪ ಸರಿಪಡಿಸಲು ನಿಮ್ಮ ಕೈಯಲ್ಲಿ ಆಗಿಲ್ಲ. ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಕೂಡ ಕಲ್ಪಿಸಲು ನಿಮಗೆ ಸಾಧ್ಯವಾಗಿಲ್ಲ. ಅಂದ ಮೇಲೆ ನಮ್ಮ ಮತ ನಿಮಗೆ ಯಾಕೆ ನೀಡಬೇಕು? ನೀವು ನಮ್ಮನ್ನು ಯಾತಕ್ಕಾಗಿ ಮತ ಕೇಳುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ಶ್ವೇತಪತ್ರ ಹೊರಡಿಸುತ್ತೇನೆ ಎಂದ ಶಾಸಕರ ವಿರುದ್ಧ ಮತ್ತಷ್ಟು ಕೆರಳಿದ ಗ್ರಾಮಸ್ಥರು, ''ರೀ ಶಾಸಕರೇ ನಿಮ್ಮ ಶ್ವೇತಪತ್ರ ಯಾಕೆ ಬೇಕು, ಐದು ವರ್ಷಗಳು ಕಳೆದ ಮೇಲೆ ನಿಮಗೆ ದೇವನೂರು ಗ್ರಾಮ ನೆನಪಿಗೆ ಬಂತೆ? ಕೇವಲ ದುರಸ್ಥಿ ಕಾಮಗಾರಿಗಳಿಗೆ ಅನುದಾನ ಬಿಸುಗಡೆ ಮಾಡಿ ನಿಮಗೆ ಬೇಕಾದವರ ಹೆಸರಿಗೆ ಕೆಲಸ ಹಾಗಿ ಈಗ ಅಭಿವೃದ್ಧಿ ಅಂತ ಹೆಸರೇಳುತ್ತೀರಿ'' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುವಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಶಾಸಕ ಹರ್ಷವರ್ಧನ್ ತಬ್ಬಿಬ್ಬಾದರು. ನಂತರ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂದಿರುಗಿ ಹೊರಟು ಹೋದರು.