ಆರೋಪಿಯ ವಿವಾಹ: ಪೆರೋಲ್ ಮೇಲೆ ಬಿಡುಗಡೆಗೆ ಹೈಕೋರ್ಟ್ ಸೂಚನೆ
ಬೆಂಗಳೂರು, ಎ.3: ಕೊಲೆ ಪ್ರಕರಣಯೊಂದರಲ್ಲಿ 10 ವರ್ಷಗಳ ಕಾಲ ಶಿಕ್ಷೆಗೆ ಗುರಿಯಾಗಿರುವ ಆರೋಪಿಗೆ ಪ್ರೀತಿಸಿದವಳನ್ನು ಮದುವೆಯಾಗುವುದಕ್ಕಾಗಿ 15 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಹೈಕೋರ್ಟ್ ಕಾರಾಗೃಹ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಆರೋಪಿ ಯುವತಿಯೊಬ್ಬಳನ್ನ ಕಳೆದ 9 ವರ್ಷಗಳಿಂದ ಪ್ರೀತಿಸುತ್ತಿದ್ದ, ಹೀಗಾಗಿ ಅವಳನ್ನೇ ವಿವಾಹವಾಗಲು ಪೆರೋಲ್ ಮೇಲೆ ಬಿಡುಗಡೆ ಮಾಡಬೇಕು ಎಂದು ಕೋರಿ ಆತನ ಪ್ರಿಯತಮೆ ಮತ್ತು ಆತನ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪಪೀಠ, ಈ ಸೂಚನೆ ನೀಡಿದೆ.
ಆರೊಪಿಯನ್ನು ಬಿಡುಗಡೆ ಮಾಡಬೇಕು ಎಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಬಂಧಿಖಾನೆ ಡಿಐಜಿ ಹಾಗೂ ಪರಪ್ಪನ ಅಗ್ರಹಾರ ಕಾರಾಗೃಹದ ಮುಖ್ಯ ಸೂಪರಿಂಟೆಂಡೆಂಟ್ ಅವರಿಗೆ ಆದೇಶಿಸಲಾಗಿದೆ.
ವಕೀಲರ ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ಬೇಡುವಿಕೆಯನ್ನು ಪುಷ್ಟೀಕರಿಸಬಹುದಾದ ಬಾಂಬೆ ಹೈಕೋರ್ಟ್, ರಾಜಸ್ಥಾನ ಹೈಕೋರ್ಟ್ ಮತ್ತು ರಾಜ್ಯ ಹೈಕೋರ್ಟ್‍ನ ವಿಭಾಗೀಯ ನ್ಯಾಯಪೀಠಗಳ ಹಲವು ಆದೇಶಗಳನ್ನು ಉಲ್ಲೇಖಿಸಿ, 15 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆಗೆ ಸೂಚನೆ ನೀಡಿದ್ದಾರೆ.