ಕರ್ನಾಟಕ ರಾಜಕೀಯ: ಮೌಲ್ಯಾಧಾರಿತ ಕಾಲದಿಂದ ಆಪರೇಷನ್ ಕಮಲದವರೆಗೆ

Update: 2023-04-03 18:39 GMT

ಕರ್ನಾಟಕ ರಾಜಕೀಯದ ಏರುಪೇರುಗಳನ್ನು ನೋಡಿಕೊಂಡರೆ, ರಾಜ್ಯ 60ರ ದಶಕದಿಂದ ಕನಿಷ್ಠ ಮೂರು ಪ್ರಮುಖ ರಾಜಕೀಯ ಪಲ್ಲಟಗಳನ್ನು ಕಂಡಿದೆ.
ಮೊದಲನೆಯದಾಗಿ, 1952ರ ಚುನಾವಣೆಯಿಂದ 1980ರ ದಶಕದವರೆಗಿನ ಕಾಂಗ್ರೆಸ್ ಆಧಿಪತ್ಯ. ಎರಡನೆಯದಾಗಿ, 1980ರ ದಶಕದ ಮಧ್ಯಭಾಗದಲ್ಲಿ ಜನತಾ ಪಕ್ಷದ ನೇತೃತ್ವದಲ್ಲಿ ಮೊತ್ತಮೊದಲ ಮೈತ್ರಿ ಸರಕಾರ ರಚನೆಯೊಂದಿಗೆ ಕೊನೆಯಾದ ಕಾಂಗ್ರೆಸ್ ಏಕಸ್ವಾಮ್ಯ. ಮೂರು, ಜನತಾ ಪಕ್ಷವು ಜನತಾ ದಳ ಎಂದಾಗಿ, 1990ರ ದಶಕದ ಉತ್ತರಾರ್ಧದಲ್ಲಿ ಜನತಾದಳದಲ್ಲಿ ಉಂಟಾದ ಒಡಕು, ಕರ್ನಾಟಕ ದಕ್ಷಿಣದಲ್ಲಿ ಬಿಜೆಪಿ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟ ಮೊದಲ ರಾಜ್ಯವಾಗಲು ಕಾರಣವಾದದ್ದು.
ಮೊದಲನೆಯದು ಅರಸು ಯುಗವಾದರೆ, ಎರಡನೆಯದು ಜನತಾ ಪರಿವಾರದ ಕಾಲ. ಮೂರನೆಯದು ಬಿಜೆಪಿ ಪ್ರಾಬಲ್ಯಕ್ಕೆ ಎಡಮಾಡಿಕೊಟ್ಟ ಸಂದರ್ಭ.

ಬದಲಾವಣೆಯ ಕಾಲ
ಕರ್ನಾಟಕ ರಾಜಕೀಯ ಕೆಲವು ಮೂಲಭೂತ ಬದಲಾವಣೆ ಗಳಿಗೆ ಸಾಕ್ಷಿಯಾಗಲು ಶುರುವಾದದ್ದು ಸುಮಾರು 50 ವರ್ಷಗಳ ಹಿಂದೆ. 1970ರ ದಶಕದ ಆರಂಭದಲ್ಲಿ ಕಾಣಿಸಿಕೊಂಡ ಈ ಪರಿವರ್ತನೆ ಅಧಿಕಾರ ರಾಜಕಾರಣದ ಸ್ವರೂಪವನ್ನು ಬದಲಿಸಿತು.
ಆವರೆಗಿನ ಲಿಂಗಾಯತ ಮತ್ತು ಒಕ್ಕಲಿಗ ಎರಡೇ ಜಾತಿಗಳ ಪ್ರಾಬಲ್ಯವನ್ನು ಮೀರಿ, ಇತರ ಸಾಮಾಜಿಕ ವರ್ಗಗಳು ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವಂತಾಯಿತು.
 
ರಾಜಕೀಯದಲ್ಲಿ ಎರಡು ಪ್ರಬಲ ಜಾತಿಗಳ ನಡುವೆ ಆರ್ಥಿಕವಾಗಿ ದುರ್ಬಲ ವರ್ಗಗಳು ಮತ್ತು ಸಾಂಪ್ರದಾಯಿಕವಾಗಿ ಹಿಂದುಳಿದ ಸಾಮಾಜಿಕ ಗುಂಪುಗಳಾದ ಒಬಿಸಿ, ಎಸ್‌ಸಿ/ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಒಟ್ಟಿಗೆ ತಂದವರು ಡಿ. ದೇವರಾಜ ಅರಸು. ಈ ಸಾಮಾಜಿಕ ಸೂತ್ರ 1972ರ ವಿಧಾನಸಭಾ ಚುನಾವಣೆಯಲ್ಲಿ ಯಶಸ್ವಿಯಾಗಿ ಕೆಲಸ ಮಾಡಿತು. ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನು ಧಿಕ್ಕರಿಸಿ, ಕಾಂಗ್ರೆಸ್ (ಐ) ಅಂದರೆ ಇಂದಿರಾ ಗಾಂಧಿ ಬಣ 216 ಸ್ಥಾನಗಳಲ್ಲಿ 165 ಸ್ಥಾನಗಳನ್ನು ಗಳಿಸಿತು. 1978ರ ವಿಧಾನಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ (ಐ) 224 ಸ್ಥಾನಗಳಲ್ಲಿ 149 ಸ್ಥಾನಗಳನ್ನು ಗೆದ್ದಿತ್ತು. ಅಸೆಂಬ್ಲಿಯಲ್ಲಿ 1967 ರಲ್ಲಿ ಕೇವಲ 18ರಷ್ಟಿದ್ದ ಒಬಿಸಿ ಪ್ರಾತಿನಿಧ್ಯ 1972ರಲ್ಲಿ 36 ಮತ್ತು 1978ರಲ್ಲಿ 45ಕ್ಕೆ ಏರಿತು. ಹೀಗೆ ದುರ್ಬಲ ವರ್ಗಗಳನ್ನು ಪ್ರಬಲ ರಾಜಕೀಯ ಶಕ್ತಿಯಾಗಿ ರೂಪಿಸಿದ್ದು ಅರಸು ಯುಗ.

ಜನತಾ ಪರಿವಾರದ ಜಯ
ಕರ್ನಾಟಕದ ರಾಜಕಾರಣದಲ್ಲಿ ಎರಡನೇ ಪಲ್ಲಟ ಕಂಡದ್ದು 1983ರಲ್ಲಿ. ಆ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೊದಲ ಬಾರಿಗೆ ಅಧಿಕಾರ ಕಳೆದುಕೊಂಡಿತು. ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಜನತಾ ದಳ 18 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಯ ಬಾಹ್ಯ ಬೆಂಬಲದೊಂದಿಗೆ ಮೊದಲ ಕಾಂಗ್ರೆಸೇತರ ಸರಕಾರವನ್ನು ರಚಿಸಿತು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದರು.

ಆನಂತರ ಮಾರ್ಚ್ 1985ರಲ್ಲಿ ನಡೆದ ಮಧ್ಯಂತರ ವಿಧಾನಸಭೆ ಚುನಾವಣೆಯಲ್ಲಿ, ಜನತಾ ಪಕ್ಷ ಸ್ಪಷ್ಟ ಬಹುಮತ ಪಡೆಯಿತು. ಆ ಚುನಾವಣೆಯಲ್ಲಿ ಬಿಜೆಪಿ 2 ಸೀಟುಗಳನ್ನು ಮಾತ್ರ ಗೆದ್ದಿತ್ತು. ಆದರೆ ಪ್ರಬಲ ಶಕ್ತಿಯಾಗಬೇಕಿದ್ದ ಜನತಾ ದಳ ಬಣ ರಾಜಕಾರಣದ ಪರಿಣಾಮವಾಗಿ ಸೊರಗಿತು. ಸರಕಾರ ಹಗರಣಗಳಲ್ಲಿ ಸಿಲುಕಿ ರಾಮಕೃಷ್ಣ ಹೆಗಡೆ ರಾಜೀನಾಮೆ ನೀಡಬೇಕಾಯಿತು. ಅವರ ಜಾಗಕ್ಕೆ ಉತ್ತರ ಕರ್ನಾಟಕದ ಲಿಂಗಾಯತ ನಾಯಕ ಎಸ್.ಆರ್.ಬೊಮ್ಮಾಯಿ ಬಂದರು. ಲಿಂಗಾಯತ, ಒಕ್ಕಲಿಗ ಸಂಘರ್ಷ ಹೆಚ್ಚಾಯಿತು.
 
1989ರ ಚುನಾವಣೆಯಲ್ಲಿ ಜನತಾ ದಳ ಹೀನಾಯ ಸೋಲು ಕಂಡಿತು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂತು. 1994ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಜನತಾ ದಳ ಅಧಿಕಾರಕ್ಕೆ ಬಂದಿತು. ಎಚ್.ಡಿ. ದೇವೇಗೌಡ ಮುಖ್ಯಮಂತ್ರಿಯಾದರು. ಅವರು ಪ್ರಧಾನಿಯಾದ ಹೊತ್ತಲ್ಲಿ ಜೆ.ಎಚ್. ಪಟೇಲರು ಸಿಎಂ ಸ್ಥಾನಕ್ಕೆ ಬಂದರು. 1999ರ ಹೊತ್ತಿಗೆ ಜಾತಿಯ ಆಧಾರದ ಮೇಲೆ ದಳ ವಿಭಜನೆಯಾಯಿತು. ಗೌಡರ ಬಣ ಜೆಡಿಎಸ್ ಆಯಿತು, ಪಟೇಲರ ಬಣ ಜೆಡಿಯು ಆಯಿತು. ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾದರು.

ಬಿಜೆಪಿಗೆ ತೆರೆಯಿತು ಬಾಗಿಲು
2004ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ರಾಜ್ಯ ರಾಜಕಾರಣ ಬಲಪಂಥೀಯ ತಿರುವು ಪಡೆದುಕೊಂಡಿತು. ಅದಕ್ಕೂ ಮೊದಲಿನ ಚುನಾವಣೆಗಳಲ್ಲಿ ಬಿಜೆಪಿ ಕರ್ನಾಟಕದಲ್ಲಿ ನೆಲೆಕಂಡುಕೊಂಡ ಹಾದಿಯನ್ನೊಮ್ಮೆ ನೋಡುವುದಾದರೆ, 1980ರಲ್ಲಿ ಸ್ಥಾಪನೆಯಾದ ಬಳಿಕ ರಾಜ್ಯದಲ್ಲಿ ಬಿಜೆಪಿ ಮೊದಲು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದು 1983ರಲ್ಲಿ. ಆಗ ಸ್ಪರ್ಧಿಸಿದ 110 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆದ್ದಿತ್ತು.
1985ರಲ್ಲಿ 116 ಸ್ಥಾನಗಳಲ್ಲಿ ಸ್ಪರ್ಧಿಸಿತು. ಗೆದ್ದಿದ್ದು ಮಾತ್ರ 2 ಸ್ಥಾನಗಳಲ್ಲಿ. 1989ರಲ್ಲಿಯೂ ಬಿಜೆಪಿಯ ಸಾಧನೆ ನೀರಸವಾಗಿತ್ತು. 4 ಸ್ಥಾನಗಳಲ್ಲಿ ಮಾತ್ರ ಗೆದ್ದಿತ್ತು.

ಆದರೆ ತೊಂಬತ್ತರ ದಶಕದ ಮಧ್ಯಭಾಗದಲ್ಲಿ, ಅಯೋಧ್ಯೆ ವಿಚಾರ ಮುನ್ನೆಲೆಗೆ ಬಂದ ಬಳಿಕ ಅದರ ಸಾಧನೆಯ ಗ್ರಾಫ್ ಏರುತ್ತಲೇ ಹೋಯಿತು. 1994ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನಗಳನ್ನು ಗೆದ್ದಿತು. 1999ರಲ್ಲಿ 44 ಸ್ಥಾನಗಳನ್ನು ಗಳಿಸಿತು. 2004ರಲ್ಲಿ 79 ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. 2006-07ರ ಅವಧಿಯಲ್ಲಿ 20 ತಿಂಗಳ ಕಾಲ ಜೆಡಿಎಸ್ ಜೊತೆ ಮೈತ್ರಿಕೂಟದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. 2008ರ ಚುನಾವಣೆಯಲ್ಲಿ 110 ಸ್ಥಾನಗಳಲ್ಲಿ ಗೆದ್ದು, ಸರಕಾರ ರಚಿಸಿತು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಒಟ್ಟು 108 ಸಂಖ್ಯಾಬಲ ಬಿಜೆಪಿಯಲ್ಲಿ ಅಸ್ಥಿರತೆಯ ಭಾವನೆಗೆ ಕಾರಣವಾಗಿತ್ತು. ಆರು ಪಕ್ಷೇತರರ ಬೆಂಬಲವನ್ನೇ ನೆಚ್ಚಿ ಕೂರಲಾರದ ಅಭದ್ರತೆ ಕಾಡುತ್ತಿದ್ದಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರನ್ನು ಸೆಳೆವ ಆಪರೇಷನ್ ಕಮಲ ಶುರುಮಾಡಿದ್ದರು ಬಿಎಸ್‌ವೈ. ಅದು ದೇಶದಲ್ಲೇ ಮೊದಲ ‘ಆಪರೇಷನ್ ಕಮಲ’.
2013ರಲ್ಲಿ ಕಾಂಗ್ರೆಸ್ ಎದುರು ಬಿಜೆಪಿ ಸೋತಿತು.
2018ರ ಚುನಾವಣೆಯ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವನ್ನು ಉರುಳಿಸಿ 2019ರಲ್ಲಿ ಮತ್ತೆ ಬಿಜೆಪಿ ಸರಕಾರ ರಚಿಸಿತು. ಆಗಲೂ ಮೈತ್ರಿ ಸರಕಾರ ಉರುಳಿಸಲು, ತಾನು ಸರಕಾರ ರಚಿಸಲು ಬಿಜೆಪಿ ಬಳಸಿದ್ದು ಅದೇ ‘ಆಪರೇಶನ್ ಕಮಲ’ ತಂತ್ರವನ್ನು. ಎರಡನೇ ಬಾರಿಯ ‘ಆಪರೇಷನ್ ಕಮಲ’ಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್‌ನ 17 ಶಾಸಕರು ಒಳಗಾಗಿದ್ದರು.
ಪ್ರಬಲ ಜಾತಿಗಳನ್ನು ಮಾತ್ರವಲ್ಲದೆ ಅಂಚಿನಲ್ಲಿರುವ ಸಮುದಾಯಗಳನ್ನೂ ಜೊತೆಗೆ ಕರೆದುಕೊಂಡು ರಾಜಕೀಯಕ್ಕೆ ಹೊಸ ಸಾಧ್ಯತೆಯನ್ನು ತಂದುಕೊಟ್ಟ ಅರಸು, ಮೌಲ್ಯಾಧಾರಿತ ರಾಜಕಾರಣವೇ ಮುಖ್ಯವಾಗಿ, ಅಧಿಕಾರವನ್ನು ಮುಖ್ಯವೆಂದು ನೋಡದ ಹೆಗಡೆ ಅವರುಗಳ ರಾಜಕೀಯದ ಮಾದರಿಯ ಮುಂದೆ ಇಂದು ಎಂಥ ಅಡ್ಡ ದಾರಿಯನ್ನಾದರೂ ಹಿಡಿದು ಅಧಿಕಾರಕ್ಕೇರುವುದು ಮುಖ್ಯ ಎಂಬ ‘ಆಪರೇಷನ್ ಕಮಲ’ ಮಾದರಿ, ರಾಜ್ಯದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಪ್ರಬಲವಾಗಿ ಬೆಳೆಯುತ್ತಿದೆ.

ಚುನಾವಣೆಗೆ ಮೊದಲು ಮತ ಸೆಳೆಯಲು ಕೋಮು ಧ್ರುವೀಕರಣ ಮಾಡುವ ಯಾವ ಕ್ರಮಕ್ಕೂ ಹಿಂಜರಿಯದ ಬಿಜೆಪಿ ಚುನಾವಣೆ ಬಳಿಕ ಕಡಿಮೆ ಬೀಳುವ ಸಂಖ್ಯೆ ಹೊಂದಿಸಿಕೊಳ್ಳಲು ಮತ್ತೆ ಏನನ್ನು ಬೇಕಾದರೂ ಮಾಡಲು ಸಿದ್ಧವಿದೆ. ಈ ನಡುವೆ ಕಾಂಗ್ರೆಸ್ ಹಿಂದಿನ ಶಕ್ತಿ ಕಳೆದುಕೊಂಡಿದೆ. ಒಂದು ಕಾಲದಲ್ಲಿ ಜನತಾದಳದ ಶಕ್ತಿಗುಂದಿಸಿದ್ದ ಬಣ ರಾಜಕೀಯದ ದುರ್ದೆಸೆ ಈಗ ಕಾಂಗ್ರೆಸನ್ನು ಕಾಡುತ್ತಿದೆ. ಅದರಿಂದ ಹೊರಬಂದು, ಜಾತ್ಯತೀತತೆ ಹಾಗೂ ಸಾಮಾಜಿಕ ನ್ಯಾಯದ ತನ್ನ ತತ್ವವನ್ನು ಮತ್ತೆ ಹೊಳೆಯಿಸುವತ್ತ ಅದು ನಡೆಯಬೇಕಿದೆ. ಶಕ್ತಿಯುತ ಪ್ರಾದೇಶಿಕ ಪಕ್ಷವಾಗಿ ಬೆಳೆಯಬಹುದಾಗಿದ್ದ ಜೆಡಿಎಸ್, ಅವಕಾಶವಾದಿ ರಾಜಕಾರಣ ಮತ್ತು ಕುಟುಂಬ ರಾಜಕಾರಣದ ಕಳಂಕ ಹೊತ್ತಿದೆ. ಇವೆರಡನ್ನೂ ತೊಡೆದುಹಾಕುವ ತಾತ್ವಿಕ ಸ್ಥೈರ್ಯವನ್ನು ತೋರದೆ ಅದಕ್ಕೆ ಇನ್ನಷ್ಟು ಬೆಳೆವ ಅವಕಾಶವಿಲ್ಲ.
ಇಂಥ ವಿಲಕ್ಷಣ ರಾಜಕೀಯ ಘಟ್ಟದಲ್ಲಿ ಮತ್ತೊಂದು ವಿಧಾನಸಭೆ ಚುನಾವಣೆ ಬಂದಿದೆ. ಕರ್ನಾಟಕದ ಮತದಾರರು ಯಾವ ಸಾಧ್ಯತೆಗೆ ಶಕ್ತಿ ತುಂಬಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.


ಪ್ರಾದೇಶಿಕ ಪಕ್ಷಗಳು

 ರಾಜ್ಯ ರಾಜಕಾರಣದ ಉದ್ದಕ್ಕೂ ಕಾಣಿಸಿ ಕೊಂಡ ಪ್ರಾದೇಶಿಕ ಪಕ್ಷಗಳ ಕಡೆಗೂ ಒಮ್ಮೆ ಹೊರಳಿ ನೋಡುವುದು ಕರ್ನಾಟಕದ ಚುನಾವಣಾ ರಾಜಕಾರಣದ ಹಿನ್ನೆಲೆಯಲ್ಲಿ ಮುಖ್ಯ. ಅನೇಕ ಪ್ರಾದೇಶಿಕ ಪಕ್ಷಗಳ ಹಿಂದೆ ಇದ್ದವರು ಕರ್ನಾಟಕದ ರಾಜಕಾರಣದಲ್ಲಿ ಮಹತ್ವದ ಛಾಪು ಮೂಡಿಸಿದ್ದವರಾಗಿದ್ದರೂ ಅವರು ಕಟ್ಟಿದ ಪ್ರಾದೇಶಿಕ ಪಕ್ಷಗಳು ಯಶಸ್ಸು ಕಾಣದೇ ಹೋದವು ಎಂಬುದು ಇಲ್ಲಿನ ಚುನಾವಣಾ ರಾಜಕಾರಣದ ಸ್ವರೂಪವನ್ನು ತೋರಿಸುತ್ತದೆ.
 ಕರ್ನಾಟಕ ರಾಜಕಾರಣದ ಮೊದಲ ಪ್ರಾದೇಶಿಕ ಪಕ್ಷ ಎಂಬ ಖ್ಯಾತಿ ಹೊಂದಿರುವುದು ಪ್ರಜಾ ಮಿತ್ರ ಮಂಡಳಿ. 1917ರಷ್ಟು ಹಿಂದೆಯೇ ಸ್ಥಾಪಿತವಾಗಿದ್ದ ಇದು ಬ್ರಾಹ್ಮಣೇತರರನ್ನು ರಾಜಕೀಯಕ್ಕೆ ತರುವ ಉದ್ದೇಶದ್ದಾಗಿತ್ತು. ಎಸ್.ಚನ್ನಯ್ಯ ಎಂಬವರು ಅದರ ಸ್ಥಾಪಕ ಅಧ್ಯಕ್ಷರಾಗಿದ್ದರು.
 ಎಂಬತ್ತರ ದಶಕದಲ್ಲಿ ಕೆಂಗಲ್ ಹನುಮಂತಯ್ಯ ನವರು ಕಾಂಗ್ರೆಸ್‌ನಿಂದ ಹೊರಬಂದು ಕಟ್ಟಿದ್ದು ‘ಸುರಾಜ್ ಪಕ್ಷ’.
 ದೇವರಾಜ ಅರಸು ಅವರು ಸ್ಥಾಪಿಸಿದ್ದ ಪ್ರಾದೇಶಿಕ ಪಕ್ಷ ‘ಕರ್ನಾಟಕ ಕ್ರಾಂತಿರಂಗ’.
ರಾಮಕೃಷ್ಣ ಹೆಗಡೆಯವರು ಸ್ಥಾಪಿಸಿದ್ದು ‘ಲೋಕಶಕ್ತಿ’ ಪಕ್ಷ.
 ಬಂಗಾರಪ್ಪಕಾಂಗ್ರೆಸ್‌ನಿಂದ ಉಚ್ಚಾಟನೆಯಾದ ಬಳಿಕ 1994ರಲ್ಲಿ ಸ್ಥಾಪಿಸಿದ್ದು ‘ಕರ್ನಾಟಕ ಕಾಂಗ್ರೆಸ್ ಪಾರ್ಟಿ’.

 ಈ ನಾಲ್ವರೂ ನಾಯಕರ ಪ್ರಾದೇಶಿಕ ಪಕ್ಷಗಳು ಏನೂ ಮಾಡದೆ ಹೋದವು. ಯಡಿಯೂರಪ್ಪಬಿಜೆಪಿ ವಿರುದ್ಧ ಬಂಡೆದ್ದು ‘ಕೆಜೆಪಿ’ಯನ್ನು ಮುನ್ನೆಲೆಗೆ ತಂದರು. ಬಿಜೆಪಿಗೆ ಬಿಎಸ್‌ವೈ ಎಂದರೇನೆಂಬುದು ಅದರಿಂದ ಗೊತ್ತಾಗಿತ್ತು.
 ಬಿಎಸ್‌ವೈ ರೀತಿಯಲ್ಲಿಯೇ ಬಿಜೆಪಿ ವಿರುದ್ಧ ಮುನಿಸಿಕೊಂಡ ಶ್ರೀರಾಮುಲು ಸ್ಥಾಪಿಸಿದ್ದ ‘ಬಿಎಸ್‌ಆರ್ ಕಾಂಗ್ರೆಸ್’ ಹೇಳಿಕೊಳ್ಳುವಂಥದ್ದೇನನ್ನೂ ಮಾಡಲಿಲ್ಲ.
 ರೈತನಾಯಕ ಎಂ.ಡಿ.ನಂಜುಂಡಸ್ವಾಮಿಯವರ ಕಾಲದಲ್ಲಿ ಹುಟ್ಟಿದ್ದು ‘ಕರ್ನಾಟಕ ರೈತಸಂಘ’. ಅವರೂ ಸೇರಿದಂತೆ ಇಬ್ಬರು ವಿಧಾನಸಭೆಗೆ ಆಯ್ಕೆಯಾಗಿದ್ದರು.
 ವಾಟಾಳ್ ನಾಗರಾಜ್ ಅವರ ‘ಕನ್ನಡ ಚಳವಳಿ ವಾಟಾಳ್ ಪಕ್ಷ’ ಕೂಡ ಜನರ ಮನಸ್ಸು ಗೆಲ್ಲದೇ ಹೋಯಿತು.