ಕಾಂಗ್ರೆಸ್ ನಲ್ಲಿ 60 ಮಂದಿ ಲಿಂಗಾಯತರು ಗೆದ್ದರೆ, ಅವರಲ್ಲೊಬ್ಬ ಸಿಎಂ ಆಗ್ತಾರೆ: ಶಾಸಕ ಶಾಮನೂರು ಶಿವಶಂಕರಪ್ಪ

Update: 2023-04-04 16:40 GMT

ದಾವಣಗೆರೆ ಎ. 4: 'ರಾಜ್ಯದಲ್ಲಿ ಮುಂಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ 60 ಮಂದಿ ಶಾಸಕರು ಗೆದ್ದರೆ, ಅವರಲ್ಲೊಬ್ಬ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿದ್ದಾರೆ' ಎಂದು ಕಾಂಗ್ರೆಸ್ ಹಿರಿಯ ನಾಯಕ, ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಈ ಹಿಂದೆ ರಾಜ್ಯದಲ್ಲಿ 90 ಲಿಂಗಾಯತ ಶಾಸಕರಿದ್ದರು. ಈ ಹಿನ್ನೆಲೆಯಲ್ಲಿ ನಾನು 60-70 ಜನರಿಗೆ ಟಿಕೆಟ್ ಕೊಡಿ ಎಂದು ಕೇಳಿದ್ದೇನೆ. ಕೊಟ್ಟರೆ, ಅವರೆಲ್ಲ ಗೆದ್ದರೆ ಈ ಬಾರಿ ಮುಖ್ಯಮಂತ್ರಿ ಲಿಂಗಾಯತರೇ ಆಗ್ತಾರೆ' ಎಂದು ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆದ ಶಾಮನೂರು ಶಿವಶಂಕರಪ್ಪ ತಿಳಿಸಿದರು.

ದಾವಣಗೆರೆಯ ದಕ್ಷಿಣ ಮತ್ತು ಉತ್ತರ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದ್ದು, ಇಲ್ಲಿ ಯಾರೇ ಬಂದು ನಿಂತರೂ ಅವರಿಗೆ ಸೋಲು ಖಚಿತ  ಎಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ 150 ಸ್ಥಾನ ಗೆಲ್ಲಲಿದೆ. ಚುನಾವಣೆ ಬಳಿಕ ರಾಜ್ಯದಲ್ಲಿ ಲಿಂಗಾಯತ ಸಮುದಾಯದ ನಾಯಕರೇ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿದ್ದಾರೆ ಎಂದರು.

ದಾವಣಗೆರೆ ಉತ್ತರಕ್ಕೆ ಸಿಎಂ ಬೊಮ್ಮಾಯಿ ಅಲ್ಲ, ಯಾರೇ ಬರಲಿ ದಾವಣಗೆರೆ ದಕ್ಷಿಣಕ್ಕೂ ಬರಲಿ. ಇಲ್ಲಿ ಬಂದವರು ಸೋಲುವುದು ಖಚಿತ. ಎರಡೂ ಕಡೆ ಕಾಂಗ್ರೆಸ್ ಗೆಲ್ಲಲಿದೆ ಎಂದರು. 

ನಾನು ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ. ಸಮುದಾಯದ ಹಿತ ಕಾಪಾಡಬೇಕಾದದ್ದು ನನ್ನ ಕರ್ತವ್ಯ. ಅದಕ್ಕಾಗಿ 70 ಮಂದಿ ಲಿಂಗಾಯತರಿಗೆ ಟಿಕೆಟ್ ಕೊಡಿ ಎಂದು ಹೈಕಮಾಂಡಗೆ ಕೇಳಿದ್ದೇನೆ. ಸಿಎಂ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತಾರೆ. ಅದರ ಜತೆ ಶಾಸಕರು ಸಿಎಂ ಆಯ್ಕೆ ಮಾಡ್ತಾರೆ. ಸದ್ಯ ಅವರಿಗೆ ಬೇಕಾದವರು ಸಿಎಂ ಎಂದು ಹೇಳುತ್ತಿದ್ದಾರೆ ಎಂದಿದ್ದಾರೆ.

Similar News