ಶಿಗ್ಗಾಂವ್ ಅನ್ನು ಹರಿವಾಣದಲ್ಲಿಟ್ಟು ಬೊಮ್ಮಾಯಿಗೆ ಕೊಡುತ್ತಾ ಕಾಂಗ್ರೆಸ್?
ಹಾವೇರಿ: ಕಾಂಗ್ರೆಸ್ ಎರಡನೇ ಪಟ್ಟಿಯಲ್ಲೂ ಹಾವೇರಿ ಜಿಲ್ಲೆಯ ಶಿಗ್ಗಾಂವ್ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಆಗಿಲ್ಲ. ಇದು ಸಿಎಂ ಬೊಮ್ಮಾಯಿ ಅವರ ಕ್ಷೇತ್ರ. ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ವಿಳಂಬದ ಹಿಂದೆ ಹಿರಿಯ ಕಾಂಗ್ರೆಸ್ ಮುಖಂಡರ ನಡುವಿನ ತೀವ್ರ ತಿಕ್ಕಾಟ ಹಾಗು ಬೊಮ್ಮಾಯಿ ಜೊತೆಗಿನ ರಾಜಕೀಯ ಒಳಒಪ್ಪಂದವೇ ಕಾರಣ ಎಂದು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.
ಶಿಗ್ಗಾಂವ್ ನಲ್ಲಿ ಜಾತಿ ಲೆಕ್ಕಾಚಾರಕ್ಕೆ ಬಂದರೆ ಇಲ್ಲಿ ಲಿಂಗಾಯತರದ್ದೇ, ಅದರಲ್ಲೂ ಪಂಚಮಸಾಲಿಗಳದ್ದೇ ಪ್ರಾಬಲ್ಯ. ನಂತರದ ಸ್ಥಾನದಲ್ಲಿ ಬರುವ ಮುಸ್ಲಿಮ್ ಮತಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಲಿಂಗಾಯತ ಸಮುದಾಯದ ಹಲವಾರು ಒಳಪಂಗಡಗಳಲ್ಲಿ ಒಂದಾದ ಸಾದರ ಸಮುದಾಯಕ್ಕೆ ಸೇರಿದವರು. 50 ಸಾವಿರಕ್ಕೂ ಹೆಚ್ಚು ಮುಸ್ಲಿಂ ಮತದಾರರು ಇಲ್ಲಿದ್ದಾರೆ.
ಕಳೆದ ಬಾರಿ ಬೊಮ್ಮಾಯಿ ಎದುರು ಸ್ಪರ್ಧಿಸಿ 9 ಸಾವಿರಕ್ಕೂ ಅಧಕ ಮತಗಳ ಅಂತರದಿಂದ ಸೋತಿದ್ದ ಮಾಜಿ ಶಾಸಕ ಸಯ್ಯದ್ ಅಝೀಂ ಪೀರ್ ಖಾದ್ರಿ ಇಲ್ಲಿಂದ ಕಾಂಗ್ರೆಸ್ ಟಿಕೆಟ್ ಗೆ ಪ್ರಬಲ ಆಕಾಂಕ್ಷಿ. ಮುಸ್ಲಿಮರ ಬೆಂಬಲದೊಂದಿಗೆ ಇತರ ಸಮುದಾಯಗಳ ಜೊತೆಗೂ ಉತ್ತಮ ಬಾಂಧವ್ಯ ಅವರಿಗಿದೆ. ಈ ಬಾರಿಯೂ ಅವರಿಗೇ ಟಿಕೆಟ್ ಸಿಕ್ಕಿದರೆ ಬೊಮ್ಮಾಯಿಗೆ ಪ್ರಬಲ ಪ್ರತಿಸ್ಪರ್ಧೆ ನೀಡುತ್ತಾರೆ ಎನ್ನುವುದು ಕಾರ್ಯಕರ್ತರ ಅಭಿಪ್ರಾಯ. ಆದರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಏನೇ ಆದರೂ ಖಾದ್ರಿಗೆ ಟಿಕೆಟ್ ಕೊಡಬಾರದು ಎಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ತಮಗೆ ಹಾವೇರಿ ಟಿಕೆಟ್ ತಪ್ಪಿಸಿ ಡಿ ಆರ್ ಪಾಟೀಲ್ ಗೆ ಕೊಡಿಸಲು ಖಾದ್ರಿ ಲಾಬಿ ಮಾಡಿದ್ದಾರೆ ಎಂಬುದು ಅವರ ಮೇಲಿನ ಸಲೀಂ ಅಹ್ಮದ್ ಸಿಟ್ಟಿಗೆ ಕಾರಣ ಎನ್ನಲಾಗಿದೆ. ಹಾಗಾಗಿ ಯಾರಿಗೆ ಬೇಕಾದರೂ ಕೊಡಿ, ಖಾದ್ರಿಗೆ ಬೇಡ ಎಂದು ಸಲೀಂ ಅಹ್ಮದ್ ವರಿಷ್ಟರಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಹಾಗಾಗಿ ಶಿಗ್ಗಾಂವ್ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ.
ಖಾದ್ರಿ ಸಹ ಸಲೀಂ ಅಹ್ಮದ ಅವರೇ ಶಿಗ್ಗಾಂವ ದಿಂದ ಸ್ಪರ್ದಿಸಲಿ ನಾನು ಗೆಲ್ಲಿಸಿಕೊಂಡು ಬರುವೆ ಅಂತ ಬಹಿರಂಗವಾಗಿ ಹೇಳಿದ್ದರು. ಸಲೀಂ ಅಹ್ಮದ್ ಸ್ಪರ್ಧಿಸುವುದಿಲ್ಲವಾದರೆ ವಿನಯ ಕುಲಕರ್ಣಿಗೆ ಕೊಟ್ಟರೂ ನನ್ನ ಬೆಂಬಲ ಇದೆ ಅಂತ ಖಾದ್ರಿ ಹೇಳಿದ್ದರು.
ಖಾದ್ರಿ ಹೊರತುಪಡಿಸಿ ಇನ್ನಾರಿಗೇ ಕಾಂಗ್ರೆಸ್ ಟಿಕೆಟ್ ನೀಡಿದರೂ ಬೊಮ್ಮಾಯಿ ಸುಲಭವಾಗಿ ಗೆದ್ದು ಬರಲಿದ್ದಾರೆ ಎಂಬುದು ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗು ಕಾರ್ಯಕರ್ತರ ಮಾತು. ಅಲ್ಲೇನಾಗಲಿದೆ ಎಂಬುದು ಕಾಂಗ್ರೆಸ್ ಮುಂದಿನ ಪಟ್ಟಿಯಲ್ಲಿ ಗೊತ್ತಾಗಲಿದೆ.