ಚಾಮುಂಡೇಶ್ವರಿ ಕ್ಷೇತ್ರ: ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ವಿರುದ್ಧ ಆಪ್ತನನ್ನೇ ಕಣಕ್ಕಿಳಿಸಿದ ಕಾಂಗ್ರೆಸ್
ಅರ್ಜಿ ಸಲ್ಲಿಸದೇ ಟಿಕೆಟ್ ಪಡೆದ ಸಿದ್ದೇಗೌಡ
ಮೈಸೂರು: ತೀವ್ರ ಕುತೂಹಲ ಮೂಡಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಸಲ್ಲಿದೇ ಇದ್ದರೂ ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಇತ್ತೀಚೆಗೆ ಸೇರಿದ್ದ ಮಾವಿನಹಳ್ಳಿ ಸಿದ್ದೇಗೌಡರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದೆ.
ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ತವರು ಎಂದೇ ಹೇಳಲಾಗುತ್ತಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಜಿ.ಟಿ.ದೇವೇಗೌಡರನ್ನು ಮಣಿಸಲು ಜಿ.ಟಿ.ದೇವೇಗೌಡರ ಆಪ್ತರಾಗಿದ್ದ ಮಾವಿನಹಳ್ಳಿ ಸಿದ್ದೇಗೌಡರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಮೂಲಕ ರಾಜಕೀಯ ದಾಳ ಉದುರಿಸಿದೆ.
ಶಾಸಕ ಜಿ.ಟಿ.ದೇವೇಗೌಡರ ವಿರುದ್ಧ ಬಂಡಾಯ ಎದ್ದು ಜೆಡಿಎಸ್ ಪ್ರಭಾವಿ ಮುಖಂಡರುಗಳಾದ ಮಾವಿನಹಳ್ಳಿ ಸಿದ್ದೇಗೌಡ, ಬೀರಿಹುಂಡಿ ಬಸವಣ್ಣ, ಮಾದೇಗೌಡ, ಕೆಂಪನಾಯಕ ಕಾಂಗ್ರೆಸ್ ಪಕ್ಷ ಸೇರಿದ್ದರು. ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಸಂಘಟನೆಗಾಗಿ ಹಾಗೂ ಜಿ.ಟಿ.ದೇವೇಗೌಡರನ್ನು ಸೋಲಿಸಲೇಬೇಕು ಎಂದು ಈ ಮುಖಂಡರುಗಳು ಪಣ ತೊಟ್ಟಿದ್ದಾರೆನ್ನಲಾಗಿದೆ.
ಇದರ ಪರಿಣಾಮವಾಗಿ ಚಾಮುಂಡೇಶ್ವರಿ ಕ್ಷೇತ್ರದಿಂದ ಒಕ್ಕಲಿಗ ಸಮುದಾಯದ ಪ್ರಭಾವಿ ಮುಖಂಡ ಮಾವಿನಹಳ್ಳಿ ಸಿದ್ದೇಗೌಡರನ್ನು ಕಾಂಗ್ರೆಸ್ ಪಕ್ಷ ಕಣಕ್ಕಿಳಿಸುವ ಮೂಲಕ ಜೆಡಿಎಸ್ ಪಕ್ಷಕ್ಕೆ ಸವಾಲೊಡ್ಡಿದೆ.
ಮಾವಿನಹಳ್ಳಿ ಸಿದ್ದೇಗೌಡ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಒಳಪಟ್ಟವರು. ಗ್ರಾ.ಪಂ.ಸದಸ್ಯರಾಗಿ, ಅಧ್ಯಕ್ಷರಾಗಿ ರಾಜಕೀಯ ಪ್ರಾರಂಭ ಮಾಡಿದ್ದಾರೆ. ಮೈಮುಲ್ ಅಧ್ಯಕ್ಷರಾಗಿ, ಟಿಎಪಿಸಿಎಂಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಕ್ಷೇತ್ರದಾದ್ಯಂತ ತಮ್ಮ ವರ್ಷಸ್ಸನ್ನು ಉಳಿಸಿಕೊಂಡಿದ್ದಾರೆ.