ವರುಣಾದಲ್ಲಿ ಸಿದ್ದರಾಮಯ್ಯ ಗೆಲುವಿಗೆ ಬಿಜೆಪಿ ನೆರವು: ಎಚ್.ಡಿ.ಕುಮಾರಸ್ವಾಮಿ ಆರೋಪ
ಮೈಸೂರು,ಎ.6: ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರನ್ನ ಗೆಲ್ಲಿಸಲು ಕಾಂಗ್ರೆಸ್-ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಕಂಪಲಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ -ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಸಿದ್ದರಾಮಯ್ಯರನ್ನ ಗೆಲ್ಲಿಸಲು ಬಿಜೆಪಿ ಅನುಕೂಲ ಮಾಡಿಕೊಡುತ್ತಿದೆ. ವರುಣಾ ಕ್ಷೇತ್ರದಲ್ಲಿ ಬಿಜೆಪಿಯವರು ಸಮರ್ಥ ಅಭ್ಯರ್ಥಿ ಹಾಕುತ್ತಿಲ್ಲ. ಬಿಜೆಪಿ-ಜೆಡಿಎಸ್ ಒಳ್ಳ ಒಪ್ಪಂದ ಅಲ್ಲ, ಕಾಂಗ್ರೆಸ್-ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ. ಜೆಡಿಎಸ್ 123ಸ್ಥಾನ ಗೆಲ್ಲಲು ಹೋರಾಟ ಮಾಡುತ್ತಿದೆ' ಎಂದು ಹೇಳಿದರು.
'ಬಿಜೆಪಿಯಲ್ಲಿ ನರೇಂದ್ರ ಮೋದಿಯಂತ ಸ್ಟಾರ್ ನಟರೇ ಇದ್ದಾರೆ . ಮೋದಿ ಕೈಯಲ್ಲೇ ಜನರನ್ನ ಸೆಳೆಯಲು ಆಗಿಲ್ಲ. ಇನ್ನು ಈ ಸ್ಟಾರ್ ನಟರು ಏನು ಮಾಡುತ್ತಾರೆ ನೋಡೋಣಾ' ಎಂದು ನಟ ಸುದೀಪ್ ಬೆಂಬಲಕ್ಕೆ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.
'ಹಾಸನದಿಂದ ಕಾರ್ಯಕರ್ತನಿಗೆ ಟಿಕೆಟ್ ಎಂದು ಹೇಳಿದ್ದೇನೆ. ನಮ್ಮ ಕುಟುಂಬದಿಂದ ಯಾರೂ ಸ್ಪರ್ಧಿಸಲ್ಲ ಕಾರ್ಯಕರ್ತರಿಗೆ ಟಿಕೆಟ್ ಕೊಡುತ್ತೇವೆ' ಎಂದರು.
ಇನ್ನು ಅನಿತಾ ಕುಮಾರಸ್ವಾಮಿ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ಎಚ್.ಡಿ.ಕುಮಾರಸ್ವಾಮಿ, ಅಭ್ಯರ್ಥಿ ಇಲ್ಲದ್ದಕ್ಕೆ ಅನಿತಾ ಅವರು 2ಬಾರಿ ಸ್ಪರ್ಧಿಸಿದ್ದರು. ಈ ಬಾರಿ ಅನಿತಾ ಸ್ಪರ್ಧಿಸಲ್ಲ. ಅಗತ್ಯ ವಿದ್ದರೇ ಪಕ್ಷ ಸಂಘಟನೆಗೆ ಓಡಾಡುತ್ತಾರೆ ಎಂದರು.