ಮಂಡ್ಯ: ಇದ್ರೀಸ್ ಪಾಷಾ ಹತ್ಯೆ ಖಂಡಿಸಿ ಸಿಪಿಎಂ ಪ್ರತಿಭಟನೆ
ಮಂಡ್ಯ, ಎ.6: ಗೋರಕ್ಷಣೆಯ ಮುಖವಾಡದ ಗೂಂಡಾಗಳಿಂದ ಕನಕಪುರ ಸಮೀಪದ ಸಾತನೂರು ಬಳಿ ಹತ್ಯೆಯಾದ ನಗರದ ಗುತ್ತಲು ಬಡಾವಣೆ ನಿವಾಸಿ ಇದ್ರೀಸ್ ಪಾಷಾ ಅವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಮತ್ತು ಆತನ ಅವಲಂಬಿತರಿಗೆ ಸರಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಮಾಕ್ರ್ಸ್ ವಾದಿ) ಜಿಲ್ಲಾ ಸಮಿತಿ ಕಾರ್ಯಕರ್ತರು ಗುರವಾರ ನಗರದ ಸಂಜಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಗೋರಕ್ಷಣೆ ಹೆಸರಿನಲ್ಲಿ ಕಾನೂನನ್ನು ಕೆತ್ತಿಕೊಂಡು ಬಡ ಮುಸಲ್ಮಾನರ ಮೇಲೆ ಹಲ್ಲೆ ನಡೆಸುವ, ಕೊಲ್ಲುವ ಕೆಲಸವನ್ನು ಮಾಡುತ್ತಿರುವ ಆರೆಸ್ಸೆಸ್ ಸಂಘ ಪರಿವಾರದ ಹಿನ್ನೆಲೆಯ ಗೂಂಡಾ ಪಡೆಗಳ ವಿರುದ್ಧ ಸರಕಾರ ನಿರ್ದಾಕ್ಷೀಣ್ಯವಾಗಿ ಕಠಿಣ ಕ್ರಮ ಕೈಗೊಂಡು ಮತ್ತೆ ಇಂತಹ ದುಷ್ಕೃತ್ಯಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರಾಜ್ಯ ಸರಕಾರ ಒಂದೆಡೆ ಬಡ ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ ಶೇ.4ರಷ್ಟು ಮೀಸಲಾತಿಯನ್ನು ಕಿತ್ತುಕೊಂಡು ತಾರತಮ್ಯ ಮೆರೆದಿದ್ದರೆ, ಇನ್ನೊಂದೆಡೆ ಕೊಲೆಗಡುಕ ಮತಾಂಧರು ಕಾನೂನನ್ನು ಕೈಗೆತ್ತಿಕೊಂಡು ಅಮಾಯಕ ಬಡ ಮುಸ್ಲಿಂ ವ್ಯಕ್ತಿಯ ಕೊಲೆಗೆ ಮುಂದಾಗಿದ್ದಾರೆ. ಈ ಎರಡು ಘಟನೆಗಳು ನಾಗರಿಕ ಸಮಾಜ ನಾಚಿಕೆಯಿಂದ ತಲೆ ತಗ್ಗಿಸುವಂಹ ಹೇಯ ದುಷ್ಕೃತ್ಯಗಳಾಗಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಗೋರಕ್ಷಣೆ, ನೈತಿಕ ಪೊಲೀಸ್‍ಗಿರಿ, ಧರ್ಮ ರಕ್ಷಣೆ ಹೆಸರಿನಲ್ಲಿ ದುಷ್ಕೃತ್ಯವೆಸಗುವವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು, ರಾಜ್ಯ ಸರಕಾರವ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದೆ. ನರಗುಂದ, ದಕ್ಷಿಣ ಕನ್ನಡ, ಮುಂತಾದೆಡೆ ಕೊಲ್ಲಲ್ಪಟ್ಟ ಮುಸ್ಲಿಂ ಯುವಜನರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ಒದಗಿಸಲಿಲ್ಲ ಮಾತ್ರವಲ್ಲ ಕೊಲೆಗಡುಕರ ಮೇಲೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂದು ಅವರು ಆರೋಪಿಸಿದರು.
ಜಿಲ್ಲೆಯ ನಾಗರಿಕನೊಬ್ಬ ತನ್ನದಲ್ಲದ ತಪ್ಪಿಗೆ ದಾರುಣವಾಗಿ ಕೊಲ್ಲಲ್ಪಟ್ಟು ಆತನ ಹೆಂಡತಿ ಮತ್ತು ಸಣ್ಣ ಮಕ್ಕಳು ಬೀದಿ ಪಾಲಾಗಿದ್ದರೂ ಜಿಲ್ಲಾಡಳಿತ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಹೇಳಿಲ್ಲವೆಂದು ಕಿಡಿಕಾರಿದರ ಅವರು, ಕೂಡಲೇ ಜಿಲ್ಲಾಡಳಿತ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯ ಪ್ರವೃತ್ತರಾಗಿ ನೊಂದವರ ಜೊತೆ ನಿಲ್ಲಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ಸಿಐಟಿಯು ಕಾರ್ಯದರ್ಶಿ ಸಿ.ಕುಮಾರಿ, ಕೃಷ್ಣ ಆರ್., ಬಿ.ಹನುಮೇಶ್, ಶೋಭಾ, ರಿಜ್ವಾನ್, ಶಿವಲಿಂಗಯ್ಯ, ದಲಿತ ಮುಖಂಡ ಪೂರ್ಣಚಂದ್ರ, ಮುಸ್ಲಿಂ ಮುಖಂಡ ಮುಜಾಹಿದ ಅಲಿಖಾನ್, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.