ಮಾನಹಾನಿಕರ ಸುದ್ದಿಗಳನ್ನು ಪ್ರಕಟಿಸದಂತೆ ಕೋರ್ಟ್ ನಿಂದ ತಡೆಯಾಜ್ಞೆ ತಂದ ಶಾಸಕ ಸಂಜೀವ ಮಠಂದೂರು

Update: 2023-04-06 17:38 GMT

ಬೆಂಗಳೂರು, ಎ.6: ಮುದ್ರಣ, ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ತಮ್ಮ ಬಗ್ಗೆ ಯಾವುದೇ ಮಾನಹಾನಿಕರ ಸುದ್ದಿಗಳನ್ನು ಪ್ರಕಟಿಸದಂತೆ ಶಾಸಕ ಸಂಜೀವ ಮಠಂದೂರು ನಗರದ ಸಿಟಿ ಸಿವಿಲ್ ಕೋರ್ಟ್‍ನಿಂದ ತಡೆಯಾಜ್ಞೆ ತಂದಿದ್ದಾರೆ.

ಮಾಧ್ಯಮಗಳಲ್ಲಿ ತಮ್ಮ ಕುರಿತು ಮಾನಹಾನಿಕರ ವರದಿ ಪ್ರಸಾರ ಮಾಡುವುದು, ವೆಬ್ ಹೋಸ್ಟಿಂಗ್ ಮತ್ತು ಹಂಚಿಕೊಳ್ಳುವುದನ್ನು ನಿಷೇಧಿಸಲು ಶಾಶ್ವತ ತಡೆಯಾಜ್ಞೆ ನೀಡುವಂತೆ ಶಾಸಕ ಸಂಜೀವ ಮಠಂದೂರು ಅವರು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‍ನಲ್ಲಿ ಮೊಕದ್ದಮೆ ದಾಖಲಿಸಿದ್ದರು. 

ನಮ್ಮ ಪಕ್ಷವು ಪುತ್ತೂರು ಶಾಸಕರ ಕ್ಷೇತ್ರಕ್ಕೆ ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಿಸುತ್ತದೆ ಎಂದು ಅಂದುಕೊಂಡಿದ್ದೇನೆ. ಹೀಗಿರುವಾಗ ಕೆಲ ಕಿಡಿಗೇಡಿಗಳು ದುರುದ್ದೇಶದಿಂದ ಛಾಯಾಚಿತ್ರವನ್ನು ಕೆಲವು ಮಹಿಳೆಯರೊಂದಿಗೆ ಮಾರ್ಫ್ ಮಾಡಿ ಡಿಜಿಟಲ್ ಮಾಧ್ಯಮಗಳಲ್ಲಿ ಶೇರ್ ಮಾಡಲು ಆರಂಭಿಸಿದ್ದಾರೆ ಮತ್ತು ಅದನ್ನೇ ಲಾಭವಾಗಿಟ್ಟುಕೊಂಡು ಛಾಯಾಚಿತ್ರ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳಲು ಮುಂದಾಗಿದ್ದಾರೆಂದು ನ್ಯಾಯಾಲಯದಲ್ಲಿ ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಪೀಠವು ವಕೀಲರ ವಾದವನ್ನು ಆಲಿಸಿ ತಾತ್ಕಾಲಿಕ ತಡೆಯಾಜ್ಞೆ ನೀಡಿ, ವಿಚಾರಣೆಯನ್ನು ಮುಂದೂಡಿದೆ.
 

Similar News