ಅರಕಲಗೂಡು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪುತ್ರನಿಗೆ ಮಡಿಕೇರಿ ಕ್ಷೇತ್ರದಿಂದ 'ಕೈ' ಟಿಕೆಟ್

Update: 2023-04-06 19:01 GMT

ಮಡಿಕೇರಿ,ಎ.6 : ಕೊಡಗು ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ಮೂಡಿದ್ದ ತೀವ್ರ ಕುತೂಹಲಕ್ಕೆ ಕೊನೆಗೂ ಪಕ್ಷದ ವರಿಷ್ಠರು ಅಂತ್ಯ ಹಾಡಿದ್ದಾರೆ. ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಡಾ.ಮಂತರ್ ಗೌಡ ಅವರನ್ನು ಘೋಷಿಸಿದ್ದಾರೆ. ವಿಶೇಷ ಏನೆಂದರೆ ಇವರ ತಂದೆ ಎ.ಮಂಜು ಅವರು ಅರಕಲಗೂಡು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. 

ಟಿಕೆಟ್‍ಗಾಗಿ ಮಾಜಿ ಸಚಿವ ಬಿ.ಎ.ಜೀವಿಜಯ, ಕೆಪಿಸಿಸಿ ಪ್ರಮುಖ ಹೆಚ್.ಎಸ್.ಚಂದ್ರಮೌಳಿ ಹಾಗೂ ಹರಪಳ್ಳಿ ರವೀಂದ್ರ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಆದರೆ ಪಕ್ಷದ ಆಂತರಿಕ ಸಮೀಕ್ಷೆಯ ಮೂಲಕ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಒಲವು ಡಾ.ಮಂತರ್ ಗೌಡ ಅವರ ಪರ ಇದ್ದ ಕಾರಣ ಇವರ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸಿದೆ. ಅಲ್ಲದೆ ಮಂತರ್ ಗೆ ಟಿಕೆಟ್ ನೀಡಿದರೆ ಮಾತ್ರ ಪಕ್ಷದ ಪರ ಕೆಲಸ ಮಾಡುವುದಾಗಿ ಪದಾಧಿಕಾರಿಗಳು ಸಂದೇಶವನ್ನು ರವಾನೆ ಮಾಡಿದ್ದರು ಎಂದು ತಿಳಿದು ಬಂದಿದೆ. 

ಸ್ಥಳೀಯ ಸಂಸ್ಥೆಗಳಿಂದ 2022 ರಲ್ಲಿ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಎಂ.ಪಿ.ಸುಜಾ ಕುಶಾಲಪ್ಪ ವಿರುದ್ಧ ಮಂತರ್ ಗೌಡ ಸ್ಪರ್ಧಿಸಿ 603 ಮತ ಪಡೆದು ಗಮನ ಸೆಳೆದಿದ್ದರು. ಸುಜಾ ಕುಸಾಲಪ್ಪ ಅವರು 705 ಮತಗಳನ್ನು ಪಡೆದು ಜಯಗಳಿಸಿದ್ದರು. ಕೊಡಗಿನಲ್ಲಿ ರಾಜಕೀಯವಾಗಿ ಗುರುತಿಸಿಕೊಂಡ ಸ್ವಲ್ಪ ಸಮಯದಲ್ಲೇ ಚಿರಪರಿಚಿತರಾದ ಮಂತರ್ ಗೌಡ ವಿಧಾನ ಪರಿಷತ್ ಚುನಾವಣೆ ಸಂದರ್ಭ ಬಿಜೆಪಿ ಬೆಂಬಲಿಗರಿಂದಲೂ ಮತ ಸೆಳೆಯುವ ಮೂಲಕ ಜಿಲ್ಲಾ ಕಾಂಗ್ರೆಸ್ ನಲ್ಲಿ ಹೊಸ ವಿಶ್ವಾಸವನ್ನು ಮೂಡಿಸಿದ್ದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಸಮರ್ಥವಾಗಿ ಸ್ಪರ್ಧಿಸಿ ಬಿಜೆಪಿಯ ಭದ್ರಕೋಟೆಯಲ್ಲೇ ಯುದ್ಧ ಮಾಡಿ ಗೆಲ್ಲುವ ಹಂತಕ್ಕೆ ತಲುಪಿದ್ದರು. ಇವರ ವೇಗವನ್ನು ಕಂಡು ಕಾಂಗ್ರೆಸ್ ಮಾತ್ರವಲ್ಲ ಇತರ ಪಕ್ಷಗಳ ಯುವ ಕಾರ್ಯಕರ್ತರು ಕೂಡ ಮೂಗಿನ ಮೇಲೆ ಬೆರಳಿಟ್ಟಿದ್ದರು. ಕೊಡಗಿನ ಅಳಿಯನೆಂದೇ ಕರೆಯಿಸಿಕೊಂಡು ಹಾಸನದಿಂದ ಬಂದು ತಾವೂ ಒಬ್ಬ ಸಮರ್ಥ ರಾಜಕಾರಣಿ ಎಂದು ಕೆಲವೇ ತಿಂಗಳುಗಳಲ್ಲಿ ಸಾಬೀತು ಪಡಿಸಿದರು. 

ಇದೀಗ ಅವರು ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿದ್ದಾರೆ. ಮಂತರ್ ತಂದೆ ಮಂಜು ಅವರು ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿ, ಇದೀಗ ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಅರಕಲಗೋಡು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿಯೂ ಕಣಕ್ಕಿಳಿಯುತ್ತಿದ್ದಾರೆ. ಅಪ್ಪ ಬಿಜೆಪಿಗೆ ಹೋದಾಗಲೂ ಕಾಂಗ್ರೆಸ್ ಪಕ್ಷ ಬಿಡದ ಮಂತರ್ ಇದೀಗ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದು, ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿದೆ. 

ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಅರೆಭಾಷೆ ಮತ್ತು ಒಕ್ಕಲಿಗರ ಮತಗಳು ಇವರಿಗೆ ಶ್ರೀರಕ್ಷೆಯಾಗಲಿದೆ. ಮುಸಲ್ಮಾನರು, ಕ್ರೈಸ್ತರು ಸೇರಿದಂತೆ ಹಲವು ಸಮುದಾಯಗಳ ಮಂದಿ ಇವರಿಗೆ ಸಮೀಪವಾಗಿದ್ದಾರೆ. ಬಿಜೆಪಿ ಶಾಸಕರುಗಳು ಸಾಕು ಎನ್ನುವವರು ಕೂಡ ಮಂತರ್ ಪರವಾಗಿದ್ದಾರೆ ಎನ್ನುವುದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಲೆಕ್ಕಾಚಾರ.

ಯುವ ರಾಜಕಾರಣಿ ಡಾ.ಮಂತರ್ ಗೌಡ ಬಿಜೆಪಿಯ ಭದ್ರಕೋಟೆಯನ್ನು ಭೇದಿಸಲಿದ್ದಾರೆಯೇ ಎಂಬುವುದನ್ನು ಕಾದು ನೋಡಬೇಕಷ್ಟೆ. 

Similar News