ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ 50ರ ಹರೆಯ

Update: 2023-04-06 18:39 GMT

ಬಿಟಿಆರ್ ಜಗತ್ತಿನ ಪ್ರಮುಖ ಹುಲಿ ಆವಾಸಸ್ಥಾನ ಎಂಬ ಖ್ಯಾತಿಗೆ ಪಾತ್ರವಾಗಿದೆ. ಬಂಡೀಪುರವು ನಾಗರಹೊಳೆ, ಮುದುಮಲೈ ಮತ್ತು ವಯನಾಡ್ ಒಳಗೊಂಡ ನೀಲಗಿರಿ ಬಯೋಸ್ಪಿಯರ್ ಭಾಗ. ಹುಲಿ ಯೋಜನೆ ಆರಂಭಗೊಂಡ ಬಳಿಕ ದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಾ ಹೋಗಿದೆ. 2006ರ ಮೊದಲ ಅಂದಾಜಿನ ಪ್ರಕಾರ, ದೇಶದಲ್ಲಿ 1,411 ಹುಲಿಗಳು ಇದ್ದವು. 2010ರಲ್ಲಿ 1,706, 2014ರಲ್ಲಿ 2,226 ಮತ್ತು 2018ರಲ್ಲಿ 2,967ಕ್ಕೆ ಹೆಚ್ಚಳಗೊಂಡಿತು.



‘ಬಿಗ್ 5’ ಗುಂಪಿನಲ್ಲಿರುವ ಹುಲಿ, ಆನೆ, ಒಂಟಿಕೊಂಬಿನ ಘೇಂಡಾಮೃಗ, ಚಿರತೆ ಮತ್ತು ಸಿಂಹಗಳಲ್ಲಿ ಶಿಖರಪ್ರಾಯವಾಗಿರುವ ಪ್ರಾಣಿ ಹುಲಿ. ಉತ್ಕೃಷ್ಟ ಬೇಟೆಗಾರ(ಏಸ್ ಪ್ರಿಡೇಟರ್) ಆಗಿರುವ ಹುಲಿ ತನ್ನ ಮೈಮಾಟ, ಬೇಟೆಯಾಡುವ ರೀತಿ ಮತ್ತು ಗಾಂಭೀರ್ಯದಿಂದ ಸೆಳೆಯುತ್ತದೆ. ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ‘ನನ್ನ ಒಡಹುಟ್ಟಕ್ಕ ನೀನು, ನಿನ್ನ ಕೊಂದು ನಾನೇನ ಪಡೆಯಲಿ ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು..’ ಎನ್ನುತ್ತ ಪುಣ್ಯ ಕೋಟಿಯ ಕಥನದಲ್ಲೂ ಚಿರಸ್ಥಾಯಿಯಾಗಿದೆ. ಇಂಥ ಹುಲಿಯ ಸಂರಕ್ಷಣೆಗಾಗಿ ರೂಪುಗೊಂಡ ಬಂಡೀಪುರ ಸಂರಕ್ಷಿತ ಪ್ರದೇಶಕ್ಕೆ ಈಗ 50ರ ಹರೆಯ.

ದೇಶದಲ್ಲಿ 19ನೇ ಶತಮಾನದ ಅಂತ್ಯದಲ್ಲಿ 20,000-40,000 ಹುಲಿಗಳು ಇದ್ದವು. ತೀವ್ರ ಬೇಟೆಯಿಂದಾಗಿ 1970ರಲ್ಲಿ ಸಂಖ್ಯೆ 2,000ಕ್ಕೆ ಮುಟ್ಟಿತು. ಎಲ್ಲೆಡೆ ಕೋಲಾಹಲ ಸೃಷ್ಟಿಯಾಗಿ, ಆತಂಕದ ಧ್ವನಿಗಳು ಪ್ರಧಾನಮಂತ್ರಿಯವರ ಕಚೇರಿಯನ್ನು ಮುಟ್ಟಿದವು. ಪ್ರಧಾನಿ ಇಂದಿರಾ ಗಾಂಧಿ ಈ ಬಗ್ಗೆ ಸಲಹೆ ನೀಡಲು ಕರಣ್‌ಸಿಂಗ್ ನೇತೃತ್ವದ ಸಮಿತಿಯನ್ನು ನೇಮಿಸಿದರು. ಹುಲಿ ಯೋಜನೆಯ ನೀಲನಕ್ಷೆ ರಚಿಸಿದ ಗೌರವ ಕರಣ್‌ಸಿಂಗ್ ಅವರಿಗೆ ಸಲ್ಲಬೇಕು. ಅವರ ಶಿಫಾರಸಿನ ಪ್ರಕಾರ, ಮಾನಸ್, ಪಲಮೌವ್, ಸಿಮ್ಲಿಪಾಲ್, ಕಾರ್ಬೆಟ್, ರಣಥಂಬೋರ್, ಕನ್ಹಾ, ಮೇಲ್ಘಾಟ್, ಸುಂದರಬನ ಮತ್ತು ಬಂಡೀಪುರದಲ್ಲಿ ಹುಲಿ ಸಂರಕ್ಷಿತ ಅರಣ್ಯವನ್ನು ಸ್ಥಾಪಿಸಲಾಯಿತು. 1980ರ ಆರಂಭದಲ್ಲಿ 15 ಹುಲಿ ಸಂರಕ್ಷಿತ ಅರಣ್ಯಗಳಿದ್ದವು. 2005-06ಕ್ಕೆ 28ಕ್ಕೆ ಹೆಚ್ಚಳಗೊಂಡಿತು. ಆಗ ಎರಗಿದ್ದು ಸಾರಿಸ್ಕಾ ಆಘಾತ. ಸಾರಿಸ್ಕಾದಲ್ಲಿ ಹಿಂದಿನ ವರ್ಷ 17 ಹುಲಿಗಳಿವೆ ಎಂದು ಅಧಿಕಾರಿಗಳು ಲೆಕ್ಕ ನೀಡಿದ್ದರೂ, ಹುಲಿಗಳು ಕಣ್ಮರೆಯಾಗಿದ್ದವು. ಕೆಲವು ವರ್ಷಗಳ ಬಳಿಕ ಪನ್ನಾದಲ್ಲೂ ಇದು ಮರುಕಳಿಸಿತು. ಇದು ಇಡೀ ಹುಲಿ ಯೋಜನೆ ಬಗ್ಗೆ ಹಾಗೂ ಸಂರಕ್ಷಣೆ-ಲೆಕ್ಕ ಹಾಕುವ ವಿಧಾನದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತು ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್‌ಟಿಸಿಎ)ದ ರಚನೆಗೆ ದಾರಿ ಮಾಡಿಕೊಟ್ಟಿತು. ವೈಜ್ಞಾನಿಕ ವಿಧಾನಗಳ ಮೂಲಕ ಹುಲಿಗಣತಿ ಆರಂಭವಾಯಿತು. ಆನಂತರ ಸಾರಿಸ್ಕಾಕ್ಕೆ ರಣಥಂಬೋರ್‌ನಿಂದ ಎರಡು ಹುಲಿಗಳನ್ನು ಮರುಪರಿಚಯಿಸಲಾಯಿತು. ಇದರಲ್ಲಿ ಕರ್ನಾಟಕ ಮೂಲದ ಅರಣ್ಯಾಧಿಕಾರಿ ಎ.ಎಸ್. ಸೋಮಶೇಖರ್ ಪಾಲ್ಗೊಂಡಿದ್ದರು. ಅವರಿಗೆ 2015ರಲ್ಲಿ ಆರ್‌ಬಿಎಸ್ ಅರ್ಥ್ ಹೀರೊ ಪುರಸ್ಕಾರ ಪ್ರಾಪ್ತವಾಯಿತು. ಸದ್ಯ ಸಾರಿಸ್ಕಾದಲ್ಲಿ 28 ಹುಲಿಗಳಿವೆ.

ದೇಶದ 75,000 ಚದರ ಕಿ.ಮೀ. ಪ್ರದೇಶದಲ್ಲಿ 53 ಹುಲಿ ಸಂರಕ್ಷಿತ ಅರಣ್ಯಗಳಿದ್ದು, 3,000ಕ್ಕೂ ಅಧಿಕ ಹುಲಿಗಳಿವೆ. ಇದು ಜಗತ್ತಿನ ಶೇ.70. ಈ ಹಿನ್ನೆಲೆಯಲ್ಲಿ ಹುಲಿಗಳ ಸಂರಕ್ಷಣೆ ಜಾಗತಿಕ ಅಗತ್ಯ ಮತ್ತು ಆದ್ಯತೆ. ಎಪ್ರಿಲ್ 1, 1973ರಲ್ಲಿ ಇಂದಿರಾ ಗಾಂಧಿ ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ(ಬಿಟಿಆರ್)ಕ್ಕೆ ಚಾಲನೆ ನೀಡಿದರು. ಆಗ ಇದ್ದುದು 12 ಹುಲಿಗಳು. ಈಗ ಅಲ್ಲಿ 126 ಹುಲಿಗಳಿವೆ ಮತ್ತು ಈ ಅರಣ್ಯವನ್ನು 173 ಹುಲಿಗಳು ಬಳಸುತ್ತಿವೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ‘ಸ್ಟೇಟಸ್ ಆಫ್ ಟೈಗರ್ಸ್, ಕೋಪ್ರಿಡೇಟರ್ಸ್ ಆ್ಯಂಡ್ ಪ್ರೇ ಇನ್ ಇಂಡಿಯಾ’ ವರದಿ ಹೇಳಿದೆ. ವೇಣುಗೋಪಾಲ ವನ್ಯಜೀವಿ ಉದ್ಯಾನದ ಹೆಚ್ಚು ಭಾಗ ಯೋಜನೆಗೆ ಒಳಪಟ್ಟಿತು. ಆನಂತರ ರಾಷ್ಟ್ರೀಯ ಉದ್ಯಾನವಾಗಿ ಮೇಲ್ದರ್ಜೆಗೇರಿ, ವಿಸ್ತೀರ್ಣ 874 ಚದರ ಕಿ.ಮೀ.ಗೆ ಹೆಚ್ಚಳಗೊಂಡಿತು. ನುಗು ಅಭಯಾರಣ್ಯ ಕೂಡ ಬಂಡೀಪುರಕ್ಕೆ ಸೇರುತ್ತದೆ. ಬಿಟಿಆರ್ ಜಗತ್ತಿನ ಪ್ರಮುಖ ಹುಲಿ ಆವಾಸಸ್ಥಾನ ಎಂಬ ಖ್ಯಾತಿಗೆ ಪಾತ್ರವಾಗಿದೆ. ಬಂಡೀಪುರವು ನಾಗರಹೊಳೆ, ಮುದುಮಲೈ ಮತ್ತು ವಯನಾಡ್ ಒಳಗೊಂಡ ನೀಲಗಿರಿ ಬಯೋಸ್ಪಿಯರ್ ಭಾಗ. ಹುಲಿ ಯೋಜನೆ ಆರಂಭಗೊಂಡ ಬಳಿಕ ದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಾ ಹೋಗಿದೆ. 2006ರ ಮೊದಲ ಅಂದಾಜಿನ ಪ್ರಕಾರ, ದೇಶದಲ್ಲಿ 1,411 ಹುಲಿಗಳು ಇದ್ದವು. 2010ರಲ್ಲಿ 1,706, 2014ರಲ್ಲಿ 2,226 ಮತ್ತು 2018ರಲ್ಲಿ 2,967ಕ್ಕೆ ಹೆಚ್ಚಳಗೊಂಡಿತು.

ಪ್ರಗತಿಪರ ರಾಜ್ಯ
 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೆ ಮುನ್ನವೇ ಮೈಸೂರಿನ ಅರಸರು ರಾಜ್ಯದ ಸಸ್ಯ-ಪ್ರಾಣಿ ಸಂಪನ್ಮೂಲವನ್ನು ರಕ್ಷಿಸಲು ಮೈಸೂರು ಗೇಮ್ ಆ್ಯಂಡ್ ಕನ್ಸರ್ವೇಷನ್ ಆ್ಯಕ್ಟ್‌ನ್ನು 1901ರಲ್ಲಿ ಜಾರಿಗೊಳಿಸಿದ್ದರು. ಹಲವು ಅರಣ್ಯ ಪ್ರದೇಶಗಳನ್ನು ಬೇಟೆಗಾಗಿ ಕಾಯ್ದಿಟ್ಟಿದ್ದಲ್ಲದೆ, ಹುಲಿಗಳಿದ್ದ ಪ್ರದೇಶವನ್ನು ಗುರುತಿಸಿ ಅಲ್ಲಿ ಬೇಟೆಯನ್ನು ನಿಷೇಧಿಸಲಾಗಿತ್ತು ಎಂದು ಮೈಸೂರು ಗೆಜೆಟಿಯರ್‌ನಲ್ಲಿ ದಾಖಲಾಗಿದೆ. 1931ರಲ್ಲಿ ಚಾಮರಾಜನಗರ ಅರಣ್ಯದ 31 ಚದರ ಮೈಲಿ ಪ್ರದೇಶವನ್ನು ಬೇಟೆಗೆ ಮೀಸಲು ಎಂದು ಘೋಷಿಸಿ, 10 ವರ್ಷ ಸಂರಕ್ಷಿಸಲಾಗಿತ್ತು. ಆನಂತರ 1941ರಲ್ಲಿ 800 ಚದರ ಕಿ.ಮೀ. ವಿಸ್ತೀರ್ಣದ ವೇಣುಗೋಪಾಲ ವನ್ಯಜೀವಿ ಉದ್ಯಾನ ರೂಪುಗೊಂಡಿತು; ಇದರಲ್ಲಿ 82 ಚದರ ಮೈಲಿ ವಿಸ್ತೀರ್ಣದ ಬಂಡೀಪುರ ಸಂರಕ್ಷಿತ ಪ್ರದೇಶವೂ ಇತ್ತು. ಉದ್ಯಾನ ನೀಲಗಿರಿ ಕಡೆಯಲ್ಲಿ ಮೋಯಾರ್ ನದಿ ಮತ್ತು ಉತ್ತರದಲ್ಲಿ 1,450 ಮೀಟರ್ ಎತ್ತರದ ಹಿಮವದ್ ಗೋಪಾಲಸ್ವಾಮಿ ಬೆಟ್ಟವನ್ನು ಒಳಗೊಂಡಿತ್ತು.

ಸಂಖ್ಯೆ ಹೆಚ್ಚಳ ಎಲ್ಲವೂ ಅಲ್ಲ

ಹುಲಿಗಳ ಸಂಖ್ಯೆಗಳ ಹೆಚ್ಚಳದಿಂದ ಸಂರಕ್ಷಣೆ ಕ್ಷೇತ್ರದಲ್ಲಿ ಎಲ್ಲವೂ ಸಮರ್ಪಕವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಜೀವಾವಾಸಸ್ಥಳದ ಗುಣಮಟ್ಟ ಮತ್ತು ಅದು ಎಷ್ಟು ಅಖಂಡವಾಗಿದೆ ಎಂಬುದು ಮುಖ್ಯವಾಗಲಿದೆ. ಹುಲಿ ಸಂರಕ್ಷಿತ ಪ್ರದೇಶಗಳಾದ ಪಲಮೌವ್ ಮತ್ತು ಸಿಮ್ಲಿಪಾಲ್‌ನಲ್ಲಿ ಮೊದಲು ಸಾಕಷ್ಟು ಹುಲಿಗಳಿದ್ದವು. ಆದರೆ, ಈಗ ಪಲಮೌವ್‌ನಲ್ಲಿ ಒಂದೇ ಒಂದು ಹುಲಿ ಕೂಡ ಇಲ್ಲ. ಒಂದು ಅತಿಥಿ ಹುಲಿ ಮಾತ್ರವಿದೆ. ಸಿಮ್ಲಿಪಾಲ್‌ನಲ್ಲಿ 8 ಹುಲಿಗಳಿದ್ದು, 12 ಹುಲಿಗಳು ಈ ಅರಣ್ಯವನ್ನು ಸಂಚಾರ ಮಾರ್ಗವಾಗಿ ಬಳಸುತ್ತವೆ. ಸಟ್ಕೋಸಿಯಾ(ಒಡಿಶಾ), ಬುಕ್ಸಾ(ಪಶ್ಚಿಮ ಬಂಗಾಳ) ಮತ್ತು ಇಂದ್ರಾವತಿ(ಛತ್ತೀಸ್‌ಗಡ) ಸಂರಕ್ಷಿತ ಅರಣ್ಯಗಳಲ್ಲೂ ಹುಲಿಗಳ ಸಂಖ್ಯೆ ಕಡಿಮೆಯಾಗಿದೆ. ಪಶ್ಚಿಮ ಘಟ್ಟ, ಕುಮಾಂವ್(ಉತ್ತರಾಖಂಡ), ತೆರಾಯ್(ಹಿಮಾಲಯದ ಕೆಳಭಾಗ) ಮತ್ತು ಕೇಂದ್ರ ಭಾರತದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದೆ; ಅಸ್ಸಾಂ ಹೊರತುಪಡಿಸಿ ಈಶಾನ್ಯ ಭಾರತದಲ್ಲಿ ಸಂಖ್ಯೆ ಕಡಿಮೆಯಾಗುತ್ತಿದೆ. ಇಲ್ಲಿ ದೇಶದಲ್ಲಿರುವ ಒಟ್ಟು ಹುಲಿಗಳ ಅರ್ಧ ಭಾಗ ಇತ್ತು. ಪೂರ್ವ ಭಾಗದ ಹೆಚ್ಚಿನ ಕಾಡುಗಳಲ್ಲಿ ಹುಲಿಗಳ ಸಂತತಿಯನ್ನು ಸಲಹುವಷ್ಟು ಬೇಟೆ ಪ್ರಾಣಿಗಳಿಲ್ಲ. ಸ್ಥಳೀಯ ಶಿಕಾರಿ ಸಂಪ್ರದಾಯಗಳಿಂದಾಗಿ ಸಸ್ಯಾಹಾರಿ ಪ್ರಾಣಿಗಳು ಕಣ್ಮರೆಯಾಗಿವೆ. ಸಾರಿಸ್ಕಾದಲ್ಲಿ ಹುಲಿಗಳ ಕಣ್ಮರೆಯನ್ನು ಸ್ಥಳೀಯರ ಕುತ್ತಿಗೆಗೆ ಕಟ್ಟಲಾಗಿತ್ತು. ಹುಲಿ ಸಂರಕ್ಷಣೆಯಲ್ಲಿ ಸ್ಥಳೀಯರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯವಿದೆ. ಆದರೆ, ಈಗಿನ ಸಂರಕ್ಷಣಾ ಮಾದರಿಯಲ್ಲಿ ಅವರಿಗೆ ತಾವಿಲ್ಲ. ಅರಣ್ಯವೊಂದನ್ನು ಸಂರಕ್ಷಿತ ಎಂದು ಘೋಷಿಸಿದ ತಕ್ಷಣ ಅರಣ್ಯವಾಸಿಗಳ ಒಕ್ಕಲೆಬ್ಬಿಸುವಿಕೆ ಆರಂಭವಾಗುತ್ತದೆ. ಸಾರಿಸ್ಕಾ ಪ್ರಕರಣದ ಬಳಿಕ ನೇಮಕಗೊಂಡ ಹುಲಿ ಕಾರ್ಯಪಡೆಯ ಮುಖ್ಯ ಶಿಫಾರಸು-ಹುಲಿ ಉದ್ಯಾನಗಳ ಆದಾಯದಲ್ಲಿ ಶೇ.30ನ್ನು ಸ್ಥಳೀಯ ಸಮುದಾಯಗಳೊಟ್ಟಿಗೆ ಹಂಚಿಕೊಳ್ಳಬೇಕು. ಇದು ಜಾರಿಗೊಳ್ಳಲಿಲ್ಲ.

ದೇಶದ ಒಟ್ಟು ವಿಸ್ತೀರ್ಣಕ್ಕೆ ಹೋಲಿಸಿದರೆ, ಸಂರಕ್ಷಿತ ಪ್ರದೇಶಗಳ ವಿಸ್ತೀರ್ಣ ಕಡಿಮೆಯಿದೆ. ಹುಲಿಗಳ ಸಂಖ್ಯೆ ಹೆಚ್ಚಿದಂತೆ, ಅವುಗಳಿಗೆ ಅಧಿಕ ಸ್ಥಳಾವಕಾಶ ಬೇಕಾಗುತ್ತದೆ. ಇದಕ್ಕಾಗಿ ಅರಣ್ಯವಾಸಿಗಳನ್ನು ಸ್ಥಳಾಂತರಿಸಬೇಕಾಗುತ್ತದೆ. ಈ ಸ್ಥಳಾಂತರ ಒಂದು ಸಂಕೀರ್ಣ-ಸಮಸ್ಯಾತ್ಮಕ ಪ್ರಕ್ರಿಯೆ. ಪರಿಹಾರದ ಮೊತ್ತ ಸಮರ್ಪಕವಾಗಿರುವುದಿಲ್ಲ ಇಲ್ಲವೇ ತಮ್ಮೆಲ್ಲ ಅಗತ್ಯಗಳನ್ನು ಪೂರೈಸುವ, ಭಾವನಾತ್ಮಕ ಸಂಬಂಧ ಹೊಂದಿರುವ ಅರಣ್ಯವನ್ನು ಬಿಟ್ಟು ಬರಲು ಅರಣ್ಯವಾಸಿಗಳು ಸಿದ್ಧವಿರುವುದಿಲ್ಲ. ಒಂದು ವೇಳೆ ಸ್ಥಳಾಂತರಕ್ಕೆ ಒಪ್ಪಿದರೂ, ಮನೆ-ಕೃಷಿ ಭೂಮಿಯ ದಾಖಲೆಗಳು ಇಲ್ಲದೆ ಇರುವುದರಿಂದ, ಪರಿಹಾರ ಅವರ ಕೈಸೇರದೆ ಮಧ್ಯವರ್ತಿಗಳ ಪಾಲಾಗುತ್ತದೆ; ವಂಚನೆಗೆ ಒಳಗಾಗುತ್ತಾರೆ. ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಸ್ಥಳಾಂತರಕ್ಕೆ ಸಂಬಂಧಿಸಿದ ಸಂಘರ್ಷ ಇದಕ್ಕೊಂದು ಉದಾಹರಣೆ. ಒಂದುವೇಳೆ ಸರಕಾರ ಅರಣ್ಯವಾಸಿಗಳನ್ನು ಬಲವಂತವಾಗಿ ಒಕ್ಕಲೆಬ್ಬಿಸಲು ಮುಂದಾದರೆ, ಸಂಘರ್ಷ ತಪ್ಪುವುದಿಲ್ಲ.

ಒಕ್ಕಲೆಬ್ಬಿಸುವಿಕೆ
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯವು ಮಾಹಿತಿ ಹಕ್ಕು ಕಾಯ್ದೆಯಡಿ ನೀಡಿದ ಮಾಹಿತಿ ಪ್ರಕಾರ, ಹುಲಿ ಯೋಜನೆ ಆರಂಭವಾದ ಬಳಿಕ 215 ಗ್ರಾಮಗಳ 18,493 ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗಿದೆ (ಅಕ್ಟೋಬರ್ 2020ರ ಅಂಕಿಅಂಶ). 2005ರವರೆಗೆ 80 ಗ್ರಾಮಗಳ 2,900 ಕುಟುಂಬಗಳು ಹಾಗೂ 2005-2020 ಅವಧಿಯಲ್ಲಿ 135 ಗ್ರಾಮಗಳ 15,593 ಕುಟುಂಬಗಳು ಸ್ಥಳಾಂತರಗೊಂಡಿವೆ. 1972ರ ವನ್ಯಜೀವಿ ಸಂರಕ್ಷಣೆ ಕಾಯ್ದೆ(ಡಬ್ಲ್ಯುಎಲ್‌ಪಿಎ)ಯಡಿ ರಚನೆಯಾದ ಹುಲಿ ಅರಣ್ಯಗಳಲ್ಲಿ ಈ ಸ್ಥಳಾಂತರ ನಡೆದಿದೆ. ಕಾಯ್ದೆಯು ಸಂರಕ್ಷಿತ ಪ್ರದೇಶಗಳಲ್ಲಿ ನೆಲೆಸುವವರ ಹಕ್ಕುಗಳ ಶಾಸನಾತ್ಮಕ ಚೌಕಟ್ಟನ್ನು ಸೃಷ್ಟಿಸಿದರೂ, ಪುನರ್ವಸತಿಯ ಶಾಸನಾತ್ಮಕ ಇಲ್ಲವೇ ಕಾರ್ಯನೀತಿ ಚೌಕಟ್ಟುಗಳನ್ನು ರೂಪಿಸಿರಲಿಲ್ಲ. 2005ರ ಎರಡನೇ ಹುಲಿ ಕಾರ್ಯಪಡೆಯ ವರದಿಯನ್ವಯ ಡಬ್ಲ್ಯುಎಲ್‌ಪಿಎಗೆ 2006ರಲ್ಲಿ ತಿದ್ದುಪಡಿ ತಂದು, ಈ ಲೋಪವನ್ನು ಸರಿಪಡಿಸಲಾಯಿತು. ತಿದ್ದುಪಡಿಯು ಮೊದಲ ಬಾರಿಗೆ ಕಾನೂನಿನನ್ವಯ ಸ್ವಯಂ ಮರುಸ್ಥಾಪನೆಯ ಆಲೋಚನೆಯನ್ನು ಮುನ್ನೆಲೆಗೆ ತಂದಿತು.

ಉತ್ತರಾಖಂಡದ ರಾಜಾಜಿ ಹುಲಿ ಅರಣ್ಯದಿಂದ ಹಿಡಿದು ತಮಿಳುನಾಡಿನ ಮುದುಮಲೈವರೆಗೆ ಅರಣ್ಯವಾಸಿಗಳು ಹಾಗೂ ರಾಜ್ಯದ ನಡುವೆ ತಿಕ್ಕಾಟ ನಡೆದಿದೆ. ಪುಣೆಯ ಕಲ್ಪವೃಕ್ಷ್ ಮತ್ತು ಎನ್ವಿರಾನ್‌ಮೆಂಟ್ ಜಸ್ಟಿಸ್ ಅಟ್ಲಾಸ್ ದೇಶದ 26 ಸಂರಕ್ಷಿತ ಪ್ರದೇಶಗಳಲ್ಲಿ ಇಂಥ ಸಂಘರ್ಷವನ್ನು ದಾಖಲಿಸಿದೆ. ಆರ್‌ಟಿಐ ಮಾಹಿತಿ ಪ್ರಕಾರ, ಪ್ರಸಕ್ತ ದೇಶದ ಮುಖ್ಯ ಹುಲಿ ಕಾಡುಗಳಲ್ಲಿ 496 ಗ್ರಾಮಗಳು ಇದ್ದು, 41,086 ಕುಟುಂಬಗಳು ವಾಸಿಸುತ್ತಿವೆ. ಈ ಕುಟುಂಬಗಳನ್ನು ಸ್ಥಳಾಂತರಿಸಲು ಪರಿಹಾರ ನೀಡಬೇಕು. ಹುಲಿ ಯೋಜನೆಗೆ ಅನುದಾನ 2005-2006ರಲ್ಲಿ 38 ಕೋಟಿ ರೂ.ನಿಂದ 2019-2020ರಲ್ಲಿ 359 ಕೋಟಿ ರೂ.ಗೆ ಹೆಚ್ಚಳಗೊಂಡಿತು; ಆದರೆ, 2020-2023ರಲ್ಲಿ 188 ಕೋಟಿ ರೂ.ಗೆ ಕುಸಿದಿದೆ. ಸ್ಥಳಾಂತರಗೊಂಡವರಿಗೆ ನೀಡುವ ಪರಿಹಾರ 1986ರಲ್ಲಿ 1 ಲಕ್ಷ ರೂ. ಇದ್ದದ್ದು 2006ರಲ್ಲಿ 10 ಲಕ್ಷ ರೂ.ಗೆ ಹೆಚ್ಚಳಗೊಂಡಿದೆ. ಹುಲಿ ಸಂರಕ್ಷಣೆ ನೆಪದಲ್ಲಿ ಅರಣ್ಯವಾಸಿಗಳಿಗೆ ವಿಪರೀತ ಕಿರುಕುಳ ನೀಡಿದ್ದು, ಜನ ಮತ್ತು ವನ್ಯಜೀವಿಗಳ ನಡುವೆ ವೈರತ್ವ ಸೃಷ್ಟಿಯಾಗಿದೆ. ದಸರಾದ ಜಂಬೂ ಸವಾರಿಯಲ್ಲಿ 13 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಬಲರಾಮನಿಗೆ ವ್ಯಕ್ತಿಯೊಬ್ಬ ಇತ್ತೀಚೆಗೆ ಗುಂಡು ಹೊಡೆದಿದ್ದು ಇದಕ್ಕೆ ಒಂದು ಉದಾಹರಣೆ. ಬಲರಾಮನಿಗೆ ತರಚು ಗಾಯಗಳಾದವಷ್ಟೇ. ಆದರೆ, ಎಲ್ಲ ವನ್ಯಜೀವಿಗಳು ಇಷ್ಟು ಪುಣ್ಯ ಮಾಡಿರುವುದಿಲ್ಲ.

ವಂಶವಾಹಿ ರಕ್ಷಣೆ
ಹುಲಿ ಪ್ರಬುದ್ಧಾವಸ್ಥೆಗೆ ಬಂದ ಬಳಿಕ ಗುಂಪನ್ನು ತೊರೆಯುತ್ತದೆ. ಅರಣ್ಯನಾಶದಿಂದ ಆವಾಸಸ್ಥಾನಕ್ಕೆ ಧಕ್ಕೆಯಾಗುತ್ತಿರುವುದರಿಂದ, ಹೊಸ ನೆಲೆ ಹುಡುಕಿಕೊಂಡು ಕಾಡಿನ ಪಕ್ಕದ ಹಳ್ಳಿ-ನಗರಗಳಿಗೆ ನುಗ್ಗುತ್ತಿದೆ. ಸಾಕುಪ್ರಾಣಿಗಳ ಬೇಟೆಯಾಡುತ್ತಿದೆ. ಅರಣ್ಯಗಳ ನಡುವಿನ ಕಾರಿಡಾರ್‌ಗಳು ಭಗ್ನಗೊಳ್ಳದಂತೆ, ಪರಭಾರೆಯಾಗದಂತೆ, ರೆಸಾರ್ಟ್-ಹೋಂಸ್ಟೇಗಳು ತಲೆಯೆತ್ತದಂತೆ, ಕೃಷಿ, ಪ್ರವಾಸೋದ್ಯಮ, ಅಭಿವೃದ್ಧಿ ಯೋಜನೆಗಳಿಗೆ ಅರಣ್ಯಗಳು ಬಳಕೆಯಾಗದಂತೆ ನೋಡಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಕಾಡುಗಳು ದ್ವೀಪದಂತಾಗಿ, ಹುಲಿಗಳ ವಂಶವಾಹಿ ಗುಣಮಟ್ಟ ಕಡಿಮೆಯಾಗುತ್ತದೆ. ರೋಗನಿರೋಧಕತೆ ಕಡಿಮೆಯಾಗುತ್ತದೆ. ಅರಣ್ಯಗಳು ತುಂಡಾಗಿರುವುದರಿಂದ, ತಳಿ ವೈವಿಧ್ಯ ಕಡಿಮೆಯಾಗುತ್ತಿದೆ. ಸಾಂಕ್ರಾಮಿಕ ರೋಗಗಳ ಸಾಧ್ಯತೆ ಹೆಚ್ಚಿದೆ. ಲಂಟಾನ, ಯುಪಟೋರಿಯಂನಂಥ ಕಳೆ ಸಸ್ಯಗಳು ಅರಣ್ಯಗಳನ್ನು ಆವರಿಸಿದ್ದು, ಸಸ್ಯಾಹಾರಿ ಪ್ರಾಣಿ(ಜಿಂಕೆ, ಕಡವೆ, ಕಾಟಿ ಇತ್ಯಾದಿ)ಗಳಿಗೆ ಅರಣ್ಯದಲ್ಲಿ ಆಹಾರದ ಲಭ್ಯತೆ ಕಡಿಮೆಯಾಗುತ್ತಿದೆ. ಇದರಿಂದ ಅವುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಕಳೆ ಗಿಡಗಳು ಶೀಘ್ರವಾಗಿ ವ್ಯಾಪಿಸುವುದಲ್ಲದೆ, ಬೇಸಿಗೆಯಲ್ಲಿ ಕಾಡ್ಗಿಚ್ಚಿಗೂ ಕಾರಣವಾಗುತ್ತವೆ. ರಸ್ತೆ ನಿರ್ಮಾಣ/ವಿದ್ಯುತ್ ತಂತಿ ಎಳೆಯುವಿಕೆ, ಗಣಿಗಾರಿಕೆ/ಮರಳುಗಾರಿಕೆ, ಅರಣ್ಯೇತರ ಉದ್ದೇಶಗಳಿಗೆ ಅರಣ್ಯಗಳ ಬಳಕೆ ಹೆಚ್ಚಿದೆ. ಕರ್ನಾಟಕ ಒಂದರಲ್ಲೇ 83,092 ಹೆಕ್ಟೇರ್(ಸುಮಾರು 2 ಲಕ್ಷ ಎಕರೆ) ಅರಣ್ಯ ಒತ್ತುವರಿಯಾಗಿದೆ(ಶಿವಮೊಗ್ಗದಲ್ಲಿ ಗರಿಷ್ಠ; ಎರಡನೇ ಸ್ಥಾನ ಚಿಕ್ಕಮಗಳೂರಿಗೆ; 2021ರ ಅಂಕಿಅಂಶ). ಪಶ್ಚಿಮ ಘಟ್ಟದಲ್ಲಿ ಕಿರು ಜಲ ವಿದ್ಯುತ್ ಯೋಜನೆಗಳ ಪರಿಣಾಮ ಕುರಿತ 2017ರ ಅಧ್ಯಯನದ ಪ್ರಕಾರ, ಈ ಯೋಜನೆಗಳಿಂದ ನೇತ್ರಾವತಿಯ ಮೇಲಿನ ಹರಿವಿನಲ್ಲಿ ಆನೆ-ಮನುಷ್ಯರ ಸಂಘರ್ಷ ಹೆಚ್ಚಳಗೊಂಡಿತು. 1999-2004ರಲ್ಲಿ 248 ಇದ್ದ ನಷ್ಟ ಪರಿಹಾರ ವಿವಾದಗಳ ಸಂಖ್ಯೆ 2005-2013ರಲ್ಲಿ 2,030ಕ್ಕೆ ಹೆಚ್ಚಳಗೊಂಡಿತು.

ಹುಲಿ ಸಂರಕ್ಷಣಾ ಪ್ರಾಧಿಕಾರ ನವೆಂಬರ್ 2022ರಲ್ಲಿ ಬಿಟಿಆರ್ ಹುಲಿ ಕಾಡಿನಲ್ಲಿ ಹೋಂಸ್ಟೇಗಳು, ರೆಸಾರ್ಟ್‌ಗಳು ಅಕ್ರಮವಾಗಿ ಕಾರ್ಯನಿರ್ವ ಹಿಸುತ್ತಿದ್ದುದನ್ನು ಪತ್ತೆ ಹಚ್ಚಿತು. ರಾಜ್ಯ ಸರಕಾರ ಇಂಥ ಒತ್ತುವರಿಗಳನ್ನು ತೆರವುಗೊಳಿಸಬೇಕು ಮತ್ತು ಅರಣ್ಯ ಭೂಮಿಯ ಅಕ್ರಮ ಮಂಜೂರು ಹಾಗೂ ಅನಧಿಕೃತ ಕೃಷಿ ಕುರಿತು ಜಂಟಿ ಸಮೀಕ್ಷೆ ನಡೆಸಬೇಕು ಎಂದು ಲೋಕಾಯುಕ್ತ 2018ರಲ್ಲೇ ನಿರ್ದೇಶನ ನೀಡಿತ್ತು. ಆ ಸಮೀಕ್ಷೆ ಈವರೆಗೆ ಬೆಳಕು ಕಂಡಿಲ್ಲ.

ಸಂರಕ್ಷಣೆಯಷ್ಟೇ ಮುಖ್ಯವಾದುದು ನಿರ್ವಹಣೆ. ಮಾನವ-ವನ್ಯಜೀವಿ ಸಂಘರ್ಷ ಸಮಸ್ಯೆಯನ್ನು ಛಿದ್ರಗೊಂಡ ಆವಾಸಸ್ಥಾನದ ಕ್ರೋಡೀಕರಣ ಮತ್ತು ಸುಧಾರಣೆಯಿಂದ ನಿರ್ವಹಿಸಬಹುದು; ಆದರೆ, ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಿಲ್ಲ. ಇದಕ್ಕೆ ಹೆಚ್ಚು ಸಮಯ ಮತ್ತು ಆರ್ಥಿಕ-ಮಾನವ ಸಂಪನ್ಮೂಲ ಅಗತ್ಯವಿದೆ. ಇಂಥ ಉಪಕ್ರಮಗಳಿಂದ ವಿಜಯನಗರ ಜಿಲ್ಲೆಯ ಗುಡೆಕೋಟೆ ಕರಡಿಧಾಮದಲ್ಲಿ ಕರಡಿ-ಮಾನವ ಸಂಘರ್ಷ ಕಡಿಮೆಯಾಗಿದೆ. ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಸಮಸ್ಯೆ ತೀವ್ರಗೊಳ್ಳಲು ಒಂದು ಕಾರಣ. ನವೆಂಬರ್ 2021ರಲ್ಲಿ ಅರಣ್ಯ ಇಲಾಖೆಯಲ್ಲಿ 4,500 ಹುದ್ದೆಗಳು ಖಾಲಿ ಇದ್ದವು; ಗ್ರೂಪ್ ಎ 101, ಗ್ರೂಪ್ ಬಿ 145, ಗ್ರೂಪ್ ಸಿ 2,743 ಮತ್ತು ಗ್ರೂಪ್ ಡಿಯಲ್ಲಿ 1,445 ಹುದ್ದೆ(ವಿಧಾನಸಭೆಯಲ್ಲಿ ಅರಣ್ಯ ಸಚಿವರ ಹೇಳಿಕೆ). ಗಾರ್ಡ್ ಮತ್ತು ವಾಚರ್‌ಗಳಂಥ ಮುನ್ಪಡೆ ಪದಾತಿಗಳ ಕೊರತೆಯಿಂದ ಕ್ಷೇತ್ರಕಾರ್ಯ ಹಾಗೂ ಕಾಡ್ಗಿಚ್ಚು ತಡೆಯಂಥ ಪ್ರಮುಖ ಕಾರ್ಯಕ್ಕೆ ತೊಂದರೆಯಾಗುತ್ತದೆ. ಕಾಳಿ ಸಂರಕ್ಷಿತ ಅರಣ್ಯದಲ್ಲಿ ಹುಲಿಗಳ ಹೆಚ್ಚಳದೊಂದಿಗೆ ಹುಲಿ-ಮಾನವ ಸಂಘರ್ಷವೂ ಹೆಚ್ಚಿದೆ. 2020ರ ಬಳಿಕ ಸಾಕುಪ್ರಾಣಿಗಳ ಬೇಟೆ ದುಪ್ಪಟ್ಟಾಗಿದೆ.

ಭಾರತದಲ್ಲಿ ವನ್ಯಜೀವಿ-ಅರಣ್ಯ ಸಂರಕ್ಷಣೆಗೆ ಹಲವು ಪ್ರಗತಿಪರ ಕಾನೂನುಗಳು ಇವೆ. 1980ರ ಅರಣ್ಯ ಸಂರಕ್ಷಣೆ ಕಾಯ್ದೆ(ಎಫ್‌ಆರ್‌ಎ), ವನ್ಯಜೀವಿ ಸಂರಕ್ಷಣೆ ಕಾಯ್ದೆ(ಡಬ್ಲ್ಯುಪಿಎ)ಗಳನ್ನು ಕೈಗಾರಿಕೆಗಳು-ಉದ್ಯಮಗಳಿಗೆ ‘ವ್ಯವಹಾರ ಸುರಳೀತ’ಗೊಳಿಸಲು ದುರ್ಬಲಗೊಳಿಸಲಾಗುತ್ತಿದೆ. ಎಫ್‌ಆರ್‌ಎಗೆ ಉದ್ದೇಶಿತ ತಿದ್ದುಪಡಿಗಳಿಗೆ ಸಂಬಂಧಿಸಿದ ಕರಡನ್ನು ಪರಿಸರ ಮತ್ತು ಅರಣ್ಯ ಸಂಸದೀಯ ಮಂಡಳಿ(ಈ ಮಂಡಳಿ ಅಧ್ಯಕ್ಷ ಮಾಜಿ ಸಚಿವ ಜೈರಾಮ್ ರಮೇಶ್)ಗೆ ಕಳಿಸುವ ಬದಲು ಜಂಟಿ ಆಯ್ಕೆ ಸಮಿತಿಗೆ ಕಳಿಸಲಾಗಿದೆ. ಇದು ಶಿಷ್ಟಾಚಾರ ಉಲ್ಲಂಘನೆ ಮಾತ್ರವಲ್ಲದೆ, ಸಂಸದೀಯ ಸಂಸ್ಥೆಗಳನ್ನು ದುರ್ಬಲಗೊಳಿಸುವ ಪ್ರಯತ್ನ.

ಹವಾಮಾನ ಬದಲಾವಣೆಯಂಥ ಅನಿಶ್ಚಿತ ಪರಿಸ್ಥಿತಿ ಇರುವಾಗ ಹುಲಿ ಸೇರಿದಂತೆ ವನ್ಯಜೀವಿಗಳು-ಅರಣ್ಯಗಳನ್ನು ಕಾಪಾಡಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು. ಪ್ರಜ್ವಲಿಸುವ ಕಣ್ಣುಗಳ ಹುಲಿಯ ಸಂಖ್ಯೆ ಮುಂದಿನ 50 ವರ್ಷಗಳಲ್ಲಿ ಇನ್ನಷ್ಟು ಹೆಚ್ಚಬೇಕೆಂದರೆ, ವೈಜ್ಞಾನಿಕ ನಿರ್ವಹಣೆಯಲ್ಲದೆ, ಸಂರಕ್ಷಣೆಯನ್ನು ಎಲೈಟ್‌ಗಳ ಕೈಯಿಂದ ಬಿಡಿಸಿ ಜನರು-ಸಮುದಾಯವನ್ನು ಒಳಗೊಳ್ಳಬೇಕು.