×
Ad

ದಿವಂಗತ ಆರ್​. ಧ್ರುವನಾರಾಯಣ ಪತ್ನಿ ವೀಣಾ ನಿಧನ

Update: 2023-04-07 11:12 IST

ಮೈಸೂರು,ಎ.7: ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿವಂಗತ ಆರ್.ಧ್ರುವನಾರಾಯಣ ಅವರ ಪತ್ನಿ ವೀಣಾ (51) ಶುಕ್ರವಾರ (ಎಪ್ರಿಲ್ 7) ರಂದು ವಿಜಯನಗರದ ರೇಡಿಯಂಟ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಳೆದ ತಿಂಗಳ ಮಾರ್ಚ್‌ 11 ರಂದು ಆರ್‌.ಧ್ರುವನಾರಾಯಣ ಅವರು ಹೃದಯಾಘಾತದಿಂದ ಮೃತಪಟ್ಟಿದ್ದು, ಪತಿ ನಿಧನದ ಒಂದು ತಿಂಗಳು ತುಂಬುವ ಮುನ್ನವೇ ಪತ್ನಿ ವೀಣಾ ಅವರು ಮೃತಪಟ್ಟಿದ್ದಾರೆ.

ದ್ರುವ ನಾರಾಯಣ ಮೃತರಾಗುವ ಒಂದು ವಾರದ ಮುಂಚೆಯೂ ಚೆನ್ನೈನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ವೀಣಾ ಅವರಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಅವರು ಆರೋಗ್ಯವಾಗಿದ್ದರು. ಆದರೆ, ಪತಿ ಧ್ರುವನಾರಾಯಣ ಅವರ ಅಕಾಲಿಕ ಸಾವು ಅವರನ್ನು ಚಿಂತೆಗೀಡು ಮಾಡಿತ್ತು. ಪತಿಯ ಅಗಲಿಕೆಯಿಂದ ಅವರು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಇವರಿಗೆ ದರ್ಶನ್‌ ಮತ್ತು ಧೀರನ್‌ ಇಬ್ಬರು ಪುತ್ರರಿದ್ದಾರೆ. ದರ್ಶನ್‌ ವಕೀಲರಾಗಿದ್ದು, ಧ್ರುವ ನಾರಾಯಣ ನಿಧನದ ನಂತರ ನಂಜನಗೂಡು ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಧೀರನ್‌ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ.

ಮೃತ ವೀಣಾ ಅವರ ಅಂತ್ಯಕ್ರಿಯೆ ನಾಳೆ ಎಪ್ರಿಲ್ 8 ರ ಶನಿವಾರ ಬೆಳಿಗ್ಗೆ 11 ಗಂಟೆ ಚಾಮರಾಜನಗರ ತಾಲ್ಲೂಕು  ಹೆಗ್ಗವಾಡಿ ಗ್ರಾಮದಲ್ಲಿ ಧ್ರುವನಾರಾಯಣ ಅವರ ಸಮಾಧಿ ಪಕ್ಕದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇಂದು ಮದ್ಯಾಹ್ನ 3 ಗಂಟೆ ತನಕ ವಿಜಯನಗರದಲ್ಲಿನ ಧ್ರುವ ನಾರಾಯಣ ಅವರ ನಿವಾಸದಲ್ಲಿ ವೀಣಾ ಅವರ ಪಾರ್ಥೀವ ಶರೀರದ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಮೃತ ದೇಹವನ್ನು ಹೆಗ್ಗವಾಡಿ ಗ್ರಾಮಕ್ಕೆ ಕೊಂಡೊಯ್ಯಲಾಗುವುದು ಎಂದು ತಿಳಿದು ಬಂದಿದೆ.


  

Similar News