×
Ad

ನಟರು ರಾಜಕೀಯ ಪಕ್ಷಕ್ಕೆ ಬೆಂಬಲ ನೀಡುವುದು ಹೊಸದೇನಲ್ಲ: ಸಿಎಂ ಬೊಮ್ಮಾಯಿ

Update: 2023-04-07 14:39 IST

ಹುಬ್ಬಳ್ಳಿ, ಏಪ್ರಿಲ್ 7: ನಟರು ರಾಜಕೀಯ ಪಕ್ಷಕ್ಕೆ ಬೆಂಬಲ ನೀಡುವುದು  ಹೊಸದೇನಲ್ಲ. ಎಲ್ಲಾ ಪಕ್ಷಗಳಿಗೂ ಬೆಂಬಲ ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ನಟ ಸುದೀಪ್ ಬೆಂಬಲ ನೀಡಿರುವ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಾಡಿರುವ ಟೀಕೆಗೆ ತಿರುಗೇಟು ನೀಡಿದ ಅವರು, ಕುಮಾರಸ್ವಾಮಿ ಹಿಂದೆ ಸ್ಟಾರ್ ನಟರನ್ನು ನಿಲ್ಲಿಸಿರಲಿಲ್ವಾ..? 1996 ರಾಮನಗರ ಉಪಚುನಾವಣೆಯಲ್ಲಿ ಅಂಬರೀಶ್ ಕರೆದುಕೊಂಡು ಬಂದು ಪ್ರಚಾರ ಮಾಡಿದ್ದು ಮರೆತಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.

ನಾನೇ ಅಂಬರೀಶ್ ಕರೆದುಕೊಂಡು ಬಂದು ಪ್ರಚಾರ ಮಾಡಿದ್ದೇನೆ.. ನಟರು ರಾಜಕೀಯ ಪಕ್ಷಕ್ಕೆ ಬೆಂಬಲ ನೀಡುವುದು  ಹೊಸದೇನಲ್ಲ. ಎಲ್ಲ ಪಕ್ಷಗಳಿಗೂ ಬೆಂಬಲ ಕೊಟ್ಟಿದ್ದಾರೆ. ಇಡೀ ದೇಶದಲ್ಲಿ ಇದೆ, ಹಾಗೆ ಕರ್ನಾಟಕದಲ್ಲೂ ಇದೆ. ನಮ್ಮ ಜೊತೆಗೆ ಸೂಪರ್ ಸ್ಟಾರ್ ಬಂದರೆ  ಇವರಿಗೆ ಯಾಕೆ ತಳವಳ. ಅವರಿಗೆ ಆತಂಕ ಇದೆ ಹಾಗಾಗಿ ಟೀಕೆ ಮಾಡುತ್ತಿದ್ದಾರೆ ಎಂದರು. 

ಗೋಡೆ ಮೇಲಿನ ಬರಹದ ರೀತಿ ಅವರಿಗೆ ಸೋಲು ಕಾಣುತ್ತಿದೆ. ನಮ್ಮ ಗೆಲುವಿನ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ನಾಳೆ  ಸಂಸದೀಯ ಮಂಡಳಿ‌ ಸಭೆ ಜರುಗಲಿದ್ದು,  ದೆಹಲಿಗೆ ತೆರಳುತ್ತಿರುವುದಾಗಿ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಈಗಾಗಲೇ ಕ್ಷೇತ್ರ ಹಾಗೂ ಜಿಲ್ಲಾ ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹವಾಗಿದೆ. ರಾಜ್ಯ ಮಟ್ಟದಲ್ಲಿ ಚರ್ಚೆ ನಡೆದಿದೆ. ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಪ್ರತಿ ಕ್ಷೇತ್ರಕ್ಕೆ ಎರಡು-ಮೂರು ಜನರ ಹೆಸರು ಶಾರ್ಟ್ ಲಿಸ್ಟ್ ಮಾಡಲಾಗಿದ್ದು, ಅಂತಿಮವಾಗಿ ಸಂಸದೀಯ ಮಂಡಳಿ ಸಭೆಯಲ್ಲಿ  ತೀರ್ಮಾನವಾಗಲಿದೆ ಎಂದರು. 

Similar News