ವೈಎಸ್‍ವಿ ದತ್ತ ಯಾರೆಂದು ನನಗೆ ಗೊತ್ತಿಲ್ಲ ಎಂದ ಎಚ್.ಡಿ.ಕುಮಾರಸ್ವಾಮಿ

''ನನ್ನದು ಸಣ್ಣ ಪಕ್ಷ, ಈ ಪಕ್ಷಕ್ಕೆ ಅವರೇಕೆ ಬರುತ್ತಾರೆ...''

Update: 2023-04-07 13:47 GMT

ಚಿಕ್ಕಮಗಳೂರು, ಎ.7: ವೈಎಸ್‍ವಿ ದತ್ತ ಯಾರೆಂದು ನನಗೆ ಗೊತ್ತೇ ಇಲ್ಲ, ಅವರು ತುಂಬಾ ದೊಡ್ಡವರು, ಅವರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಶುಕ್ರವಾರ ಪಂಚರತ್ನ ಯಾತ್ರೆ ಹಿನ್ನೆಲೆಯಲ್ಲಿ ಕಡೂರು ತಾಲೂಕಿನ ಬೀರೂರು ಪಟ್ಟಣಕ್ಕೆ ಆಗಮಿಸಿದ್ದ ವೇಳೆ, ವೈಎಸ್‍ವಿ ದತ್ತ ಅವರನ್ನು ಮತ್ತೆ ಪಕ್ಷಕ್ಕೆ ಆಹ್ವಾನಿಸುತ್ತೀರ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ವೈಎಸ್‍ವಿ ದತ್ತ ಯಾರೆಂದು ನನಗೆ ಗೊತ್ತಿಲ್ಲ. ಅವರು ತುಂಬಾ ದೊಡ್ಡವರು, ಅವರ ಬಗ್ಗೆ ನಾನೇಕೆ ಚರ್ಚೆ ಮಾಡಲಿ. ಅವರು ದೊಡ್ಡ ಪಕ್ಷಕ್ಕೆ ಹೋಗಿದ್ದಾರೆ. ನನ್ನದು ಸಣ್ಣ ಪಕ್ಷ, ಈ ಪಕ್ಷಕ್ಕೆ ಅವರೇಕೆ ಬರುತ್ತಾರೆ. ಅವರು ಇಂಟರ್ ನ್ಯಾಷನಲ್ ಪಕ್ಷ ಸೇರಲು ಹೊರಟಿರುವವರು. ನನ್ನ ಪಕ್ಷದಲ್ಲಿ ಅವರಿಗೆ ಏನು ಸಿಗುತ್ತೆ ಎಂದು ಬರುತ್ತಾರೆ? ಅವರು ದೊಡ್ಡ ಪಕ್ಷದಲ್ಲೇ ಇರಲಿ ಎಂದು ವ್ಯಂಗ್ಯವಾಡಿದ ಅವರು, ಕಡೂರು ಕ್ಷೇತ್ರದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗುವುದು ಎಂದರು.

2013ರಲ್ಲಿ ಕಡೂರಿನ ಜನ ಅಚ್ಚರಿ ಫಲಿತಾಂಶ ನೀಡಿದ್ದರು. ಆಗ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದವರು ಶಾಸಕರಾದರು, ಅವರ ಹೆಸರು ಹೇಳಲು ನಾನು ಸಿದ್ಧನಿಲ್ಲ, ಅದರ ಅಗತ್ಯವೂ ನನಗಿಲ್ಲ. ಅವರ ಹೆಸರನ್ನು ಸಿಎಂ ಇಬ್ರಾಹೀಂ ಹೇಳಿರುವುದರಿಂದ ನಾನು ಅವರ ಹೆಸರು ಹೇಳಲ್ಲ ಎಂದ ಅವರು, ನಾನಿಲ್ಲಿ 2 ಲಕ್ಷ, 5 ಲಕ್ಷ ರೂ.ನ ಚೆಕ್ ಪಡೆದುಕೊಳ್ಳಲು ಬಂದಿಲ್ಲ. ಆ ಚೆಕ್‍ಗಳು ಎಷ್ಟು ಮನೆಯಲ್ಲಿ, ಎಲ್ಲೆಲ್ಲಿ ಇವೆಯೋ ಗೊತ್ತಿಲ್ಲ, ಹಣ ನೀಡಿ ಚೆಕ್ ಪಡೆದವರ ಹಣ ಹಿಂದಕ್ಕೆ ಬರಲ್ಲ ಎಂದು ಪರೋಕ್ಷವಾಗಿ ವೈಎಸ್‍ವಿ ದತ್ತ ವಿರುದ್ಧ ಎಚ್ಡಿಕೆ ವ್ಯಂಗ್ಯವಾಡಿದರು.

ನಮ್ಮ ಹಳೇ ಲೀಡರ್ ನನ್ನ ಬಗ್ಗೆ ಬಹಳ ಚಾರ್ಜ್ ಮಾಡಿದ್ದಾರೆ, ಈಗ ಅದು ಬೇಡ, ಈಗ ಅವರ ನಮ್ಮ ಪಕ್ಷಕ್ಕೆ ದೋಖಾ ಮಾಡಿ ಹೋಗಿದ್ದಾರೆ. ಅವರನ್ನು ಮಾಜಿ ಪ್ರಧಾನಿ ದೇವೇಗೌಡ ಅವರು ಸ್ವಂತ ಮಗನಿಗಿಂತ ಹೆಚ್ಚಾಗಿ ನೋಡಿಕೊಂಡರು, ಮಾನಸ ಪುತ್ರ ಎಂದು ಕರೆದರು. ಆದರೆ ಅವರು, ಬಿಜೆಪಿ ಜೊತೆ ಕುಮಾರಸ್ವಾಮಿ ಹೊಂದಾಣಿಕೆ ಇದೆ ಎಂದು ಎಲ್ಲ ಕಡೆ ಹೇಳಿದ್ದಾರೆ ಎಂದ ಅವರು, ದತ್ತ ಅವರನ್ನು ಎಂ.ಎಲ್.ಸಿ. ಮಾಡಿದ್ಯಾರು?, ಎಂ.ಎಲ್.ಸಿ ಮಾಡದಿದ್ರೆ ಕಡೂರು ಜನ ಅವರನ್ನು ಗುರುತಿಸುತ್ತಿದ್ದರಾ?, ಅವರಿಗೆ ನಾನು ಮಾಡಿದ ಅನ್ಯಾಯ ಏನು?, ವಿಧಾನಸೌಧದಲ್ಲಿ 2ನೇ ಸೀಟಲ್ಲಿ ನನ್ನ ಪಕ್ಕ ಕೂರುತ್ತಿದ್ದವರು ನಮಗೆ ದೋಖಾ ಮಾಡಿ ಹೋಗಿದ್ದಾರೆ. ಕಡೂರಿನಲ್ಲಿ ಯಾರು ಇಲ್ಲದಿದ್ದಾಗ ಪಕ್ಷದ ಗೌರವ ಉಳಿಸಲು ಧನಂಜಯ್ ಬಂದಿದ್ದಾರೆ ಎಂದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ಮೋದಿ ಅವರ ನಾಟಕ ಎಲ್ಲರಿಗೂ ಗೊತ್ತಿದೆ. ಚುನಾವಣೆ ಬಂದಾಗ ಪೆಟ್ರೋಲ್ ಬೆಲೆಯನ್ನು 10 ರೂ. ಕಡಿಮೆ ಮಾಡುತ್ತಾರೆ. ಚುನಾವಣೆ ಮುಗಿದ ಮೇಲೆ 20 ರೂ. ಜಾಸ್ತಿ ಮಾಡುತ್ತಾರೆ. ಜನರ ಮೊದಲು ದುಡಿಯೋಕೆ ಪೆಟ್ರೋಲ್ ಹಾಕಿಸ್ತಿದ್ರು. ಈಗ ಪೆಟ್ರೋಲ್ ಹಾಕಿಸೋಕೆ ದುಡಿಯುತ್ತಿದ್ದಾರೆ. ರಾಜ್ಯದಲ್ಲಿ ಜೆಡಿಎಸ್‍ಗೆ ಬಹುಮತ ನೀಡಿ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದರೇ ಜನರ ಸಮಸ್ಯೆ ನೀಗಲಿದೆ ಎಂದರು.

Similar News