ಕೈ ತಪ್ಪಿದ ಟಿಕೆಟ್: ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲು ಮುಂದಾದ MLC ರಘು ಆಚಾರ್

Update: 2023-04-07 14:48 GMT

ಚಿತ್ರದುರ್ಗ: ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ.ಎಲ್.ಸಿ. ರಘು ಆಚಾರ್ ಅವರಿಗೆ ಟಿಕೆಟ್ ಕೈತಪ್ಪಿದ್ದರಿಂದ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷ ಸೇರುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬರುತ್ತಿದೆ.

ಜಾತ್ಯಾತೀತ ಜನತಾದಳದ ಮುಖಂಡರು ಹಾಗೂ ಎಂ.ಎಲ್.ಸಿ. ಶರವಣ ಅವರು ರಘು ಆಚಾರ್ ಅವರ ಮನೆಗೆ ಭೇಟಿನೀಡಿ, ಜೆಡಿಎಸ್ ಗೆ ಸೇರುವಂತೆ ಮಾಡಿಕೊಂಡ ಮನವಿ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಬೇಷರತ್ತಾಗಿ ಜೆಡಿಎಸ್ ಸೇರುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದು, ವಿಧಾನ ಸಭಾ ಚುನಾವಣೆಗೆ ಜಾತ್ಯಾತೀತ ಜನತಾದಳದಿಂದ ಚಿತ್ರದುರ್ಗ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಖಚಿತಪಡಿಸಿದ್ದಾರೆ. ಶರವಣ ಅವರು ಮಾತನಾಡಿ, ವಿಶ್ವಕರ್ಮ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ನಿರಂತವಾಗಿ ನಿರ್ಲಕ್ಷ್ಯ ವಹಿಸಿದ್ದು, ಆ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡುವ ಉದ್ದೇಶದಿಂದ ಜೆಡಿಎಸ್ ಗೆ ಆಹ್ವಾನಿಸಲಾಗಿದ್ದು, ಪಕ್ಷದ ವತಿಯಿಂದ ಟಿಕೆಟ್ ನೀಡುವ ಬಗ್ಗೆ ಪಕ್ಷದ ವರಿಷ್ಟರ ಜೊತೆ ಮಾತನಾಡಿ, ತೀರ್ಮಾನಿಸಲಾಗುತ್ತದೆ ಎಂದು ಹೇಳಿದರು.

ರಘು ಆಚಾರ್ ಅವರು ಎಂ.ಎಲ್.ಸಿ. ಆಗಿ ಚಿತ್ರದುರ್ಗ ಭಾಗದಲ್ಲಿ ಪ್ರಗತಿಪರ ಕೆಲಸ ಕಾರ್ಯಗಳನ್ನು ಮಾಡಿದ್ದು, ಅವರು ಗೆಲ್ಲುವ ಅರ್ಹತೆಯನ್ನು ಹೊಂದಿದ್ದಾರೆ. ಆದರೂ ಕೂಡ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡದೇ ಅವರನ್ನು ನಿರ್ಲಕ್ಷ್ಯಿಸಿರುವುದು ಸಮುದಾಯೊಂದನ್ನು ಕಡೆಗಣ ಸಿದಂತಾಗಿದೆ ಎಂದು ಶರವಣ ಹೇಳಿದರು.

 ರಘು ಆಚಾರ್ ಮನೆಗೆ ವಿರೇಂದ್ರ ಪಪ್ಪಿ ಭೇಟಿ;

ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದು ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ವಿರೇಂದ್ರ ಪಪ್ಪಿ ಮತ್ತು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್ ಅವರು ರಘು ಆಚಾರ್ ಅವರ ಮನೆಗೆ ಭೇಟಿ ನೀಡಿ, ಪಕ್ಷ ಟಿಕೆಟ್ ನೀಡಿದ್ದು, ತಾವು ಚುನಾವಣೆಗೆ ಬೆಂಬಲಿಸುವಂತೆ ಮಾಡಿಕೊಂಡ ಮನವಿಯ ಹಿನ್ನೆಲೆಯಲ್ಲಿ ವಿನಯವಾಗಿಯೇ ನಿರಾಕರಿಸಿರುವ ರಘು ಆಚಾರ್ ವಿಧಾನಸಭಾ ಚುನಾವಣೆಗೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ತಾವು ಕೂಡ ಅಭ್ಯರ್ಥಿಯಾಗಿದ್ದು, ಏಪ್ರಿಲ್ 17 ರಂದು ನಾಮ ಪತ್ರ ಸಲ್ಲಿಸುವುದಾಗಿ ಹೇಳುವ ಮೂಲಕ ವಿರೇಂದ್ರ ಪಪ್ಪಿ ಮತ್ತು ಎಂ.ಕೆ.ತಾಜ್ ಪೀರ್ ಅವರಿಗೆ ಇರಿಸುಮುರಿಸು ಉಂಟಾಗುವಂತೆ ರಘು ಆಚಾರ್ ನಡೆದುಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ವಿರೇಂದ್ರ ಪಪ್ಪಿ ಅವರು ರಘು ಆಚಾರ್ ಮತ್ತು ನಾನು ಸ್ನೇಹಿತರಾಗಿದ್ದು, ಸೌಹಾರ್ದ ಭೇಟಿಗಾಗಿ ಇಲ್ಲಿಗೆ ಬಂದಿರುವೆ. ಹಾಗೆಯೇ ಕಾಂಗ್ರೆಸ್ ಹಿರಿಯ ಮುಖಂಡರಾದ ಎಸ್.ಕೆ.ಬಸವರಾಜನ್ ಅವರ ಮನೆಗೂ ಭೇಟಿಮಾಡಿ, ಅವರೊಂದಿಗೆ ಮಾತುಕತೆ ನಡೆಸಲಿದ್ದೇನೆ ಎಂದು ವಿರೇಂದ್ರ ಪಪ್ಪಿ ಹೇಳಿದರು.

Similar News