ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಕಾರಣ ತಿಳಿಸಿದ ಸಚಿವ ಎಂ.ಟಿ.ಬಿ.ನಾಗರಾಜು
ಬೆಂಗಳೂರು, ಎ.7: ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ನಾನು ಸ್ಪರ್ಧಿಸುವುದಿಲ್ಲ. ನನ್ನ ಬದಲು ನನ್ನ ಪುತ್ರನಿಗೆ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ಬಿಜೆಪಿ ಹೈಕಮಾಂಡ್‍ಗೆ ಮನವಿ ಮಾಡಿದ್ದೇನೆ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜು ತಿಳಿಸಿದರು.
ಶುಕ್ರವಾರ ನಗರದಲ್ಲಿ ಮಾಜಿ ಸಿಎಂ ಯಡಿಯೂರಪ್ಪರನ್ನು ಅವರ ನಿವಾಸ ‘ಕಾವೇರಿ’ಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಗರಾಜು, ನನ್ನ ಪುತ್ರನಿಗೆ ಬಿಜೆಪಿ ಟಿಕೆಟ್ ನೀಡಿದರೆ ಆತನನ್ನು ಗೆಲ್ಲಿಸಿಕೊಂಡು ಬರುವ ಭರವಸೆ ನೀಡಿದ್ದೇನೆ. ನನ್ನ ಮನವಿಗೆ ಯಡಿಯೂರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಕೋರ್ ಕಮಿಟಿ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಇವತ್ತು ಯಡಿಯೂರಪ್ಪರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಯೂ ಮಾತನಾಡಿದ್ದೇನೆ. ಅದರ ಜೊತೆಗೆ, ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಕಡೆ ಕನಿಷ್ಠ ಎಂಟು ಮಂದಿ ಕುರುಬರಿಗೆ ಟಿಕೆಟ್ ನೀಡುವಂತೆಯೂ ಮನವಿ ಮಾಡಿದ್ದೇನೆ ಎಂದು ನಾಗರಾಜು ಹೇಳಿದರು.
ಪುತ್ರನಿಗೆ ಬಿಜೆಪಿ ಟಿಕೆಟ್‍ಗಾಗಿ ಬೇಗ್ ಮನವಿ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನಕ್ಕೆ ಕಾರಣವಾಗಿದ್ದ 17 ಶಾಸಕರ ಪೈಕಿ ಒಬ್ಬರಾಗಿದ್ದ ರೋಷನ್ ಬೇಗ್, ಬಿಜೆಪಿ ಸೇರ್ಪಡೆಗೆ ಯತ್ನಿಸಿ ವಿಫಲರಾಗಿದ್ದರು. ಇದೀಗ ವಿಧಾನಸಭಾ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಿಂದ ತಮ್ಮ ಮಗನಿಗೆ ಟಿಕೆಟ್ ನೀಡುವಂತೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.