ಶಿಗ್ಗಾವ್ ಕಣಕ್ಕೆ ಯಾರೂ ಬೇಕಾದರೂ ಬರಬಹುದು: ಕಾಂಗ್ರೆಸ್ ನಾಯಕರಿಗೆ ಸಿಎಂ ಬೊಮ್ಮಾಯಿ ಸವಾಲು
ಹಾವೇರಿ, ಎ.7: ನನಗೆ ಅವಿರೋಧ ಆಯ್ಕೆ ಬೇಡ, ಕುಸ್ತಿನೆ ಬೇಕು. ಆಗಲೆ ಯಾರ ಶಕ್ತಿ ಏನು ಎಂಬುದು ತಿಳಿಯುತ್ತದೆ ಎಂದು ಕಾಂಗ್ರೆಸ್ ನಾಯಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಹಿರಂಗವಾಗಿ ಸವಾಲು ಹಾಕಿದರು.
ಶುಕ್ರವಾರ ಹಾವೇರಿಯಲ್ಲಿ ಬಿಜೆಪಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಕಣಕ್ಕೆ ಯಾರೂ ಬೇಕಾದರೂ ಬರಬಹುದು, ಸೆಡ್ಡು ಹೊಡೆದೆ ಬಿಡೋದು, ಬೇರೆ ಪ್ರಶ್ನೆಯೇ ಇಲ್ಲ. ಕುಸ್ತಿ ಪಟ್ಟು ಅಭ್ಯಾಸ ಮಾಡಿಕೊಂಡು ಬರಬೇಕು ಏಕೆಂದರೆ ಹೊಸ ಕುಸ್ತಿ ಹೊಸ ಪಟ್ಟು ಇರಲಿದೆ ಎಂದರು.
ಮೀಸಲಾತಿ ನಿರ್ಣಯ ಮಾಡಿದಾಗ ತಲೆ ಮೇಲೆ ಕೈ ಇಟ್ಟುಕೊಂಡ ವಿರೋಧ ಪಕ್ಷಗಳು ಇನ್ನೂ ತಲೆ ಮೇಲಿನ ಕೈ ತೆಗೆದಿಲ್ಲ. ದೇಶದಲ್ಲಿಯೆ ಯಾರೂ ಮಾಡಿರದ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ ಸಾಹಸವನ್ನು ನಾವು ಮಾಡಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ದ್ವಿಮುಖ ನೀತಿ: ದಿಲ್ಲಿಯಿಂದ ಬಂದ ವಿರೋಧ ಪಕ್ಷದ ನಾಯಕ ಇದನ್ನು ಸಂವಿಧಾನ ವಿರೋಧಿ ಎಂದರು. ಕಾಂಗ್ರೆಸ್ ನದ್ದು ದ್ವಿಮುಖ ನೀತಿ. ಸದಾಶಿವ ಆಯೋಗದ ವರದಿ ಅನುಷ್ಠಾನ ಮಾಡುವುದಾಗಿ ಒಂದೆಡೆ, ಮಾಡುವುದಿಲ್ಲ ಎಂದು ಮತ್ತೊಂದೆಡೆ ಹೇಳುತ್ತಾರೆ. ಇದು ದ್ವಿಮುಖ ನೀತಿ ಅಲ್ಲವಾ? ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸಿ ಆಡಳಿತ ಮಾಡಿದವರು ಇವರು ಎಂದು ಮುಖ್ಯಮಂತ್ರಿ ವಾಗ್ದಾಳಿ ನಡೆಸಿದರು.
ಶಿಗ್ಗಾಂವಿ ಕ್ಷೇತ್ರದಲ್ಲೆ ಸ್ಪರ್ಧೆ: ಶಿಗ್ಗಾಂವಿ ನನ್ನ ಆತ್ಮವಿಶ್ವಾಸ ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಪ್ರಶ್ನೆಯೆ ಇಲ್ಲ ಎಂದು ತಿಳಿಸಿದ ಬಸವರಾಜ ಬೊಮ್ಮಾಯಿ, ಬರುವ 5 ವರ್ಷಗಳಲ್ಲಿ 15 ವರ್ಷಗಳಲ್ಲಿ ಮಾಡಿದಷ್ಟು ಕೆಲಸ ಮಾಡಿ ತೋರಿಸುತ್ತೇನೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಆಹ್ವಾನ ಇದ್ದರೂ ನನಗೆ ಪ್ರೀತಿ ವಿಶ್ವಾಸ ಇರುವ ಶಿಗ್ಗಾಂವಿಯಲ್ಲಿ ಪರೀಕ್ಷೆಗೆ ಇಳಿಯುವುದಾಗಿ ಸ್ಪಷ್ಟಪಡಿಸಿದರು.
ಶಿಗ್ಗಾವಿ ಬಂಧುಗಳು ಒಳ್ಳೆಯದನ್ನು ಗುರುತಿಸಿ, ಬೆಂಬಲಿಸುತ್ತಾರೆ. ಎಂಥ ಅಪಪ್ರಚಾರ ಆದರೂ ಆತ್ಮ ಸಾಕ್ಷಿಯಿಂದ ಬೆಂಬಲಿಸುತ್ತಾರೆ. ನನ್ನ ವಿರುದ್ದ ಬಹಳ ದೊಡ್ಡ ಅಪಪ್ರಚಾರ ನಡೆದು ಅಂದು ಪ್ರಮುಖ ಪತ್ರಿಕೆಯಲ್ಲಿ ಬೊಮ್ಮಾಯಿ ಗೆಲ್ಲೋದು ಸಾಧ್ಯವಿಲ್ಲ ಎಂದು ಬರೆದಿದ್ದರು. ಫಲಿತಾಂಶ ಬಂದ ದಿನ ವಿಜಯೋತ್ಸವ ಆಚರಣೆ ನೋಡುವಂತೆ ನಾನು ಆ ಪತ್ರಕರ್ತನಿಗೆ ಹೇಳಿದ್ದೆ ಎಂದು ಅವರು ಸ್ಮರಿಸಿದರು.
ಈಗಲೂ ಅಪಪ್ರಚಾರ ಮಾಡುತ್ತಾರೆ. ಬೆಂಗಳೂರು, ದಿಲ್ಲಿಯಲ್ಲಿ ಕುಳಿತು ಬೊಮ್ಮಾಯಿ ಹೇಗೆ ಸೋಲಿಸಬೇಕು ಎಂದು ಯೋಜನೆ ಹಾಕುತ್ತಾರೆ. ಈ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ ಎಂದು ಮುಖ್ಯಮಂತ್ರಿ, ಇಲ್ಲಿನ ತಾಯಂದಿರು, ಜನತೆ ಹಾಗೂ ಯುವಕ ಮಿತ್ರರ ಮೇಲೆ ವಿಶ್ವಾಸವಿದೆ ಎಂದರು.