×
Ad

ವರುಣಾದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಘೋಷಣೆ ಬಳಿಕ ದಿಢೀರ್ ನಾಪತ್ತೆಯಾದ ಜೆಡಿಎಸ್ ಅಭ್ಯರ್ಥಿ!

Update: 2023-04-08 14:41 IST

ಮೈಸೂರು: ಮುಂಬರುವ ವಿಧಾನಸಭೆ ಚುನಾವಣೆಗೆ ವರುಣಾ ಕ್ಷೇತ್ರದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಇಲ್ಲಿನ ಜೆಡಿಎಸ್ ಅಭ್ಯರ್ಥಿ ಕಾಣೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ವರುಣಾದಲ್ಲಿ ಈಗಾಗಲೇ ಸಿದ್ದರಾಮಯ್ಯ ಪರ ಪುತ್ರ ಹಾಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಪ್ರಚಾರ ಕಾರ್ಯಗಳನ್ನು ನಡೆಸುತ್ತಿದ್ದು, ಸಿದ್ದರಾಮಯ್ಯ ಅವರು ಕೂಡ ಇಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. 

ಇನ್ನು ಜೆಡಿಎಸ್​ ತನ್ನ ಮೊದಲ ಪಟ್ಟಿಯಲ್ಲಿಯೇ ವರುಣಾ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡಿತ್ತು. ಜೆಡಿಎಸ್​ ಅಭ್ಯರ್ಥಿ ಅಭಿಷೇಕ್​ ತಮಗೆ ಟಿಕೆಟ್​ ಘೋಷಣೆಯಾದ ಬಳಿಕ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಆದರೆ, ಸಿದ್ದರಾಮಯ್ಯ ಅವರು ಸ್ಪರ್ಧೆ ಘೋಷಣೆ ಬಳಿಕ ಜಿಲ್ಲೆಯ ಯಾವುದೇ ಜೆಡಿಎಸ್ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಅಭ್ಯರ್ಥಿಯ ಈ ನಡೆಯಿಂದ ಇಕ್ಕಟ್ಟಿಗೆ ಸಿಲುಕಿರುವ ಜೆಡಿಎಸ್ ಕಾರ್ಯಕರ್ತರು ಈ ವಿಚಾರವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಗಮನಕ್ಕೂ ತಂದಿದ್ದಾರೆ ಎನ್ನಲಾಗುತ್ತಿದೆ. 

ಅಭ್ಯರ್ಥಿ ಬದಲಾವಣೆ? 

'ಪಕ್ಷದ ಘೋಷಿತ ಅಭ್ಯರ್ಥಿಗಳು ವೇಗವಾಗಿ ಜನರನ್ನು ತಲುಪುವ ಕೆಲಸ ಮಾಡಬೇಕು. ಕೆಲಸದಲ್ಲಿ ಉದಾಸೀನ ತೋರಿದರೆ ಅಂಥ ಅಭ್ಯರ್ಥಿಗಳನ್ನು ಯಾವುದೇ ಮುಲಾಜಿಲ್ಲದೆ ಬದಲಾವಣೆ ಮಾಡಲಾಗುವುದು' ಎಂದು ಈ ಹಿಂದೆಯೇ ಕುಮಾರಸ್ವಾಮಿ ಅವರು ಎಚ್ಚರಿಸಿದ್ದರು. 

ಇದನ್ನೂ ಓದಿ: ವರುಣಾದಲ್ಲಿ ನಾನು ಮತಯಾಚನೆಗೆ ಬರಲ್ಲ...: ಸಿದ್ದರಾಮಯ್ಯ

Similar News