×
Ad

ರಾಜ್ಯದಲ್ಲಿ ಅಮುಲ್ ಮಾರುಕಟ್ಟೆ ವಿಸ್ತರಣೆಯನ್ನು ಬಲವಾಗಿ ಸಮರ್ಥಿಸಿಕೊಂಡ ಸಿ.ಟಿ. ರವಿ

"ಎಂತಾ ಲಜ್ಜೆಗೆಟ್ಟ ಬದುಕು ನಿಮ್ಮದು" ಎಂದು ಬಿಜೆಪಿಗೆ ನಾಯಕನಿಗೆ ನೆಟ್ಟಿಗರ ತರಾಟೆ

Update: 2023-04-08 17:34 IST

ಬೆಂಗಳೂರು: ತನ್ನ ಹಾಲು ಉತ್ಪನ್ನಗಳನ್ನು ಕರ್ನಾಟಕದ ಮಾರುಕಟ್ಟೆಯಲ್ಲಿ ವಿಸ್ತರಿಸಿಕೊಳ್ಳುತ್ತಿರುವ ಅಮುಲ್‌ಗೆ (Amul) ವಿಪಕ್ಷ ನಾಯಕರು, ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬೆನ್ನಿಗೆ, ಇದಕ್ಕೆ ಬಿಜೆಪಿ ಸರಕಾರದ ನಾಯಕರು ಪ್ರತಿಕ್ರಿಯೆ ನೀಡಿ ಅಮುಲ್  ಮಾರಾಟವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಶನಿವಾರ ಬಿಜೆಪಿ ನಾಯಕ ಸಿ.ಟಿ. ರವಿ ಟ್ವೀಟ್ ಮಾಡಿ, ಕರ್ನಾಟಕದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿರುವ ಅಮುಲ್‌ ನಡೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

"ಗುಲಾಮರಿಗೆ ಇಟಲಿಯನ್ನರಿಂದ ಆಳ್ವಿಕೆಗೊಳಪಡುವುದರಲ್ಲಿ ಯಾವ ತೊಂದರೆಯೂ ಇಲ್ಲ, ಆದರೆ, ಭಾರತೀಯ ಬ್ರ್ಯಾಂಡ್ ಅಮುಲ್ ಅದರ ಉತ್ಪನ್ನಗಳನ್ನು ಕರ್ನಾಟಕದಲ್ಲಿ ಮಾರಾಟ ಮಾಡುವುದು ತೊಂದರೆಯಾಗುತ್ತದೆ, 'ವಾಟ್ ಎ ಬಂಚ್ ಆಫ್ ಲೂಸರ್ಸ್'" ಎಂದು ಸಿಟಿ ರವಿ ಅಮುಲ್ ಬಗ್ಗೆ ಸಮರ್ಥಿಸಿಕೊಂಡು ವಿರೋಧ ವ್ಯಕ್ತಪಡಿಸುತ್ತಿರುವವರಿಗೆ ತಿರುಗೇಟು ನೀಡಿದ್ದಾರೆ.

ನಾಡಿನ ಲಕ್ಷಾಂತರ ಹೈನುಗಾರಿಕೆ ಕುಟುಂಬಗಳ ಜೀವನಾಧಾರವಾಗಿರುವ ಕೆಎಂಎಫ್ ಅನ್ನು ಬಲಿಪಡೆದು ಅಮುಲ್ ಗೆ ಬೆಳೆಸಲು ರಾಜ್ಯ ಸರಕಾರ ಸಹರಿಸುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆ ಬಿಜೆಪಿ ನಾಯಕನ ಸಮರ್ಥನೆ ಬಂದಿದೆ. ಇನ್ನು ಸಿ.ಟಿ. ರವಿ ಟ್ವೀಟ್ ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಸಿ.ಟಿ. ರವಿ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು "ಎಂತಾ ಲಜ್ಜೆಗೆಟ್ಟ ಬದುಕು ಸಾರ್ ನಿಮ್ಮದು. ನಿಮ್ಮಂತ ನಾಯಕರು ನಮ್ಮ ನಾಡಿನಲ್ಲಿ ಹತ್ತು ಮಂದಿ ಇದ್ದರೆ ಸಾಕು, ತಾಯ್ನಾಡನ್ನೇ ಗುಜ್ಜುಗಳಿಗೆ ಮಾರಿ ಬಿಡ್ತೀರಾ. ಧಿಕ್ಕಾರವಿರಲಿ ನಾಡದ್ರೋಹಿಗಳಿಗೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಕನ್ನಡ ನಾಡಿನ ರೈತರು ಕಟ್ಟಿ ಬೆಳೆಸಿದ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟವನ್ನ ಮುಚ್ಚಿಸಿ ಗುಜರಾತಿಗಳ ಸಂಸ್ಥೆ ಬೆಳೆಸಲು ಹೊರಟಿದ್ದಾರೆ , ಅದನ್ನು ಖಂಡಿಸುವ ನೈತಿಕತೆ ಅಂತೂ ನಿಮಗಿಲ್ಲ , ಕಡೆ ಪಕ್ಷ ಕನ್ನಡ ರೈತರ ಬಗ್ಗೆ ಕಾಳಜಿ ಆದರೂ ಬೇಡವೇ ? ಗುಲಾಮಗಿರಿಯಲ್ಲಿ ಮುಳುಗಿಹೋಗಿದ್ದೀರಾ. ಈ ವ್ಯಾಧಿಗೆ ಪರಿಹಾರವಿಲ್ಲ" ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

Similar News