ನಂದಿನಿ ಉತ್ಪನ್ನ ಯಾವುದೆ ಸ್ಪರ್ಧೆ ಎದುರಿಸಲು ಸಿದ್ಧವಿದೆ ಎಂದ ಸಚಿವ ಡಾ. ಕೆ. ಸುಧಾಕರ್

Update: 2023-04-08 13:04 GMT

ಬೆಂಗಳೂರು: ನಂದಿನಿ ಉತ್ಪನ್ನಗಳು ಬೇರೆ ರಾಜ್ಯ ಹಾಗೂ ದೇಶಗಳಲ್ಲೂ ಮಾರಾಟವಾಗುತ್ತಿದ್ದು, ಯಾವುದೆ ಸ್ಪರ್ಧೆ ಎದುರಿಸಲು ಸಿದ್ಧವಾಗಿವೆ. ಅಮುಲ್ ಉತ್ಪನ್ನಗಳ ಮಾರಾಟದ ವಿಚಾರವನ್ನು ಕಾಂಗ್ರೆಸ್‍ನವರು ರಾಜಕೀಯಗೊಳಿಸಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಶನಿವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂದಿನಿ ಉತ್ಪನ್ನಗಳು ನಮ್ಮ ರಾಜ್ಯದ ಹೆಮ್ಮೆಯಾಗಿದೆ. ಹಿಂದಿನ ಸಿಎಂ ಯಡಿಯೂರಪ್ಪ ಮೊದಲ ಬಾರಿಗೆ ರೈತರಿಗೆ 2 ರೂ. ಪ್ರೋತ್ಸಾಹ ಧನ ನೀಡಿದ್ದರು. ಈಗ 5 ರೂ. ನೀಡಲಾಗುತ್ತಿದೆ ಎಂದರು.

ನಂದಿನಿಗೆ ರಾಜ್ಯ ಬಿಜೆಪಿ ಸರಕಾರ ಸಂಪೂರ್ಣ ಬೆಂಬಲ ನೀಡಿದೆ. ಯಾವುದೆ ಉತ್ಪನ್ನ ಯಾವುದೆ ಭಾಗಗಳಲ್ಲಿ ಮಾರಾಟವಾಗಬಹುದು. ಆದರೆ ಕಾಂಗ್ರೆಸ್‍ನವರು ಇದನ್ನು ರಾಜಕೀಯವಾಗಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೆ 16 ರಿಂದ 18 ಕಂಪನಿಗಳು ತಮ್ಮ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಆಗ ಇವರಿಗೆ ಯಾವುದೆ ಸಮಸ್ಯೆ ಇರಲಿಲ್ಲ. ಆದರೆ ಅಮುಲ್ ಕಂಪನಿ ತನ್ನ ಉತ್ಪನ್ನ ಮಾರಾಟ ಮಾಡಲು ಮುಂದಾದಾಗ ಮಾತ್ರ ಸಮಸ್ಯೆ ಆರಂಭವಾಗಿದೆ ಎಂದು ಸುಧಾಕರ್ ಟೀಕಿಸಿದರು.

ನಂದಿನಿ ಯಾವುದೆ ಸ್ಪರ್ಧೆಯನ್ನು ಎದುರಿಸಲು ಸಿದ್ಧ ಎಂಬುದು ನಮ್ಮ ವಿಶ್ವಾಸ. ವಿದೇಶಗಳಲ್ಲೂ ನಂದಿನಿ ಉತ್ಪನ್ನ ಮಾರಾಟವಾಗುತ್ತಿದೆ. ತಮಿಳುನಾಡು, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲೂ ನಂದಿನಿ ಹಾಲು ಮಾರಾಟವಾಗುತ್ತಿದೆ. ಕಾಂಗ್ರೆಸ್‍ನವರು ಎಲ್ಲದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಹಾಗೆಯೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಇದರಿಂದ ಯಾವುದೆ ಪ್ರಯೋಜನವಿಲ್ಲ ಎಂದು ಅವರು ಹೇಳಿದರು.

Similar News