×
Ad

ಅಮುಲ್‍ ವಿರುದ್ಧ ಕನ್ನಡಿಗರು ಸಿಡಿದೇಳಬೇಕು: ಎಚ್‍.ಡಿ. ಕುಮಾರಸ್ವಾಮಿ

Update: 2023-04-08 19:09 IST

ಬೆಂಗಳೂರು: ಕೆಎಂಎಫ್‍ ಮತ್ತು ರೈತರ ಕುತ್ತಿಗೆಗೆ ಕುಣಿಕೆ ಬಿಗಿಯುತ್ತಿರುವ ಅಮುಲ್‍ ವಿರುದ್ಧ ಕನ್ನಡಿಗರು ಸಿಡಿದೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ.

ಶನಿವಾರ ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕನ್ನಡಿಗರಾದ ನಾವು ತಕ್ಷಣ ಎಚ್ಚೆತ್ತು ನಂದಿನಿಯನ್ನೆ ಅವಲಂಬಿಸಿರುವ ರಾಜ್ಯದ ರೈತರ ಹಿತವನ್ನು ಆದ್ಯತೆಯಲ್ಲಿ ರಕ್ಷಿಸಿ ಉಳಿಸಿಕೊಳ್ಳಬೇಕು. ನಮ್ಮ ಜನತೆ -ಗ್ರಾಹಕರು ನಂದಿನಿ ಉತ್ಪನ್ನಗಳನ್ನಷ್ಟೇ ಆದ್ಯತೆಯ ಮೇರೆಗೆ ಬಳಸಿ ರಾಜ್ಯದ ರೈತರ ಬದುಕನ್ನು ಕಾಪಾಡಬೇಕು. ಇಲ್ಲಿನ ಡಬಲ್ ಎಂಜಿನ್ ಬಿಜೆಪಿ ಸರಕಾರ ಈಗಲಾದರೂ ಎಚ್ಚೆತ್ತು ತಕ್ಷಣ ರಾಜ್ಯದಲ್ಲಿ ಅಮುಲ್‍ನ ಪ್ಯಾಕೆಟ್‍ ಹಾಲಿನ ಮಾರಾಟಕ್ಕೆ ತಡೆ ಒಡ್ಡಬೇಕು ಎಂದು ಹೇಳಿದ್ದಾರೆ.

ಗುಜರಾತಿನ ಅಮುಲ್ ರಾಜ್ಯದ ಹಾಲು ಉತ್ಪಾದಕರ ಅನ್ನ ಕಸಿದುಕೊಳ್ಳುತಿದೆ, ನಂದಿನಿ ಹೆಸರನ್ನು ಹಾಳುಗೆಡವಲು ವ್ಯವಸ್ಥಿತ ಸಂಚು ನಡೆಸುತ್ತಿದೆ. ಅಲ್ಲದೆ, ಕನ್ನಡಿಗರ ಜೀವನಾಡಿ ನಂದಿನಿಯನ್ನು ಮುಗಿಸಲು 3ನೆ ಸಂಚು ನಡೆದಿದೆ. ಅಮುಲ್ ಜತೆ ನಂದಿನಿ ವಿಲೀನ ಮಾಡುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಮೊದಲ ಸಂಚು, ಮೊಸರು ಪಾಕೆಟ್ ಮೇಲೆ ಹಿಂದಿಯ "ದಹಿ' ಪದ ಮುದ್ರಣ ಎರಡನೆ ಸಂಚು. ಕನ್ನಡಿಗರ ತೀವ್ರ ವಿರೋಧದಿಂದ ಎರಡೂ ಸಂಚುಗಳು ವಿಫಲವಾಗಿವೆ. 3ನೇ ಸಂಚು ಸಫಲಗೊಳಿಸಲು ಅಮುಲ್ ಮೂಲಕ ಕೇಂದ್ರ ಸರಕಾರ ಹೊರಟಿದೆ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.

ಒಂದು ದೇಶ, ಒಂದು ಅಮುಲ್, ಒಂದೇ ಹಾಲು, ಒಂದೇ ಗುಜರಾತ್‍ ಎನ್ನುವುದು ಕೇಂದ್ರ ಸರಕಾರದ ಅಧಿಕೃತ ನೀತಿಯಂತಿದೆ. ಅದಕ್ಕೆ ಅಮುಲ್‍ಗೆ ಒತ್ತಾಸೆಯಾಗಿ ನಿಂತು ಕೆಎಂಎಫ್ ಕತ್ತು ಹಿಚುಕುತ್ತಿದೆ. ಈಗ ಅಮುಲ್‍ ಹಿಂಬಾಗಿಲ ಮೂಲಕ ಒಳನುಗ್ಗುತ್ತಿದೆ. ಹೈನುಗಾರಿಕೆಯ ಮೂಲ ಉತ್ಪನ್ನ ಹಾಲನ್ನು ತನ್ನ ಬ್ರ್ಯಾಂಡ್‍ನಲ್ಲಿಯೇ ಕರ್ನಾಟಕದಲ್ಲಿಯೇ ಮಾರಲು ಹೊರಟಿರುವ ಅಮುಲ್, ನಂದಿನಿಯನ್ನು ಆಪೋಶನ ತೆಗೆದುಕೊಳ್ಳುವುದು ಖಚಿತ. ವಿಲೀನಕ್ಕೆ, ಹಿಂದಿ ಹೇರಿಕೆಗೆ ಪ್ರಬಲ ಪ್ರತಿರೋಧ ಒಡ್ಡುತ್ತಿರುವ ಕನ್ನಡಿಗರು ಮತ್ತು ಕೆಎಂಎಫ್‍ನ ಕತೆ ಮುಗಿಸಲೇಬೇಕು ಎಂದು ಅಮುಲ್‍ಪಣ ತೊಟ್ಟಂತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಕೆಎಂಎಫ್ ಜತೆ ಅಮುಲ್ ಅನಗತ್ಯ ಸ್ಪರ್ಧೆ ನಡೆಸಿ ದಿನದಿಂದ ದಿನಕ್ಕೆ ನಂದಿನಿಯನ್ನು ತುಳಿಯುವ ಹುನ್ನಾರ ನಡೆಸುತ್ತಿದೆ. ಸಹಕಾರಿ ಕ್ಷೇತ್ರದ ಪ್ರಸಿದ್ಧ ಸೋದರ ಸಂಸ್ಥೆಗಳ ನಡುವೆ ಅನಾರೋಗ್ಯಕರ ಪೈಪೋಟಿ ಯಾರಿಗೂ ಹಿತವಲ್ಲ.ಕೆಎಂಎಫ್ ರಾಜ್ಯದ ಸಾವಿರಾರು ಗ್ರಾಮಗಳ ಸಹಕಾರ ಸಂಘಗಳ ಮೂಲಕ ರೈತರಿಂದಲೇ ಹಾಲನ್ನು ನೇರವಾಗಿ ಖರೀದಿಸುತ್ತದೆ. ಬಿಜೆಪಿ ಡಬಲ್ ಎಂಜನ್ ಸರಕಾರ ನಮ್ಮ ರಾಜ್ಯದ ಹಾಲು ಉತ್ಪಾದಕರನ್ನು ಬೀದಿಗೆ ತಳ್ಳಿ ಗುಜರಾತಿಗಳ ಗುಲಾಮರನ್ನಾಗಿ ಮಾಡುವ ಹುನ್ನಾರ ನಡೆಸಿರುವುದು ಸ್ಪಷ್ಟ. ಇದುವರೆಗೂ ಇಷ್ಟೆಲ್ಲಾ ಆದರೂ ರಾಜ್ಯ ಬಿಜೆಪಿ ಸರಕಾರದ ದಿವ್ಯಮೌನ, ಕೆಎಂಎಫ್ ನಿಷ್ಕ್ರಿಯತೆ ಹಲವು ಅನುಮಾನಗಳಿಗೆ ಕಾರಣವಾಗಿದೆ ಅವರು ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಅಮುಲ್ ಮಾರುಕಟ್ಟೆ ವಿಸ್ತರಣೆಯನ್ನು ಬಲವಾಗಿ ಸಮರ್ಥಿಸಿಕೊಂಡ ಸಿ.ಟಿ. ರವಿ

Similar News