ನನ್ನ ಮತ್ತು ಡಿ.ಕೆ.ಶಿವಕುಮಾರ್ ನಡುವೆ ವೈಮನಸ್ಸಿದೆ ಎನ್ನುವುದು ವಿರೋಧಿಗಳ ಆರೋಪವಷ್ಟೇ: ಸಿದ್ದರಾಮಯ್ಯ
"ಮೀಸಲಾತಿ ಮರುವಿಂಗಡಣೆ ಸಾಂವಿಧಾನಿಕವಲ್ಲ"
ಬೆಂಗಳೂರು: ನನ್ನ ಮತ್ತು ಡಿ.ಕೆ.ಶಿವಕುಮಾರ್ (DK Shivakumar) ನಡುವೆ ಸೌಹಾರ್ದಯುತ ಸಂಬಂಧವಿದೆಯೆ ಹೊರತು ಯಾವುದೆ ಭಿನ್ನಾಭಿಪ್ರಾಯಗಳಿಲ್ಲ. ಹಾಗೆಯೆ ಪ್ರಜಾಪ್ರಭುತ್ವದಲ್ಲಿ ಸಹಜವಾಗಿಯೆ ಭಿನ್ನಾಭಿಪ್ರಾಯಗಳಿರುತ್ತವೆ. ಆದರೆ, ಅದು ಪಕ್ಷದ ಹಿತಾಸಕ್ತಿಗೆ ಹಾನಿಕರವಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ನನ್ನ ಮತ್ತು ಡಿ.ಕೆ.ಶಿವಕುಮಾರ್ ನಡುವೆ ವೈಮನಸ್ಸಿದೆ ಎನ್ನುವುದು ವಿರೋಧಿಗಳ ಆರೋಪವಷ್ಟೇ. ಜನತೆ ಅದಕ್ಕೆ ಸೊಪ್ಪು ಹಾಕಬಾರದು. ಕಾಂಗ್ರೆಸ್ (Congress) ಒಗ್ಗಟ್ಟಿನಿಂದ ಕೂಡಿದ್ದು, ಈ ಸಲ ಅಧಿಕಾರಕ್ಕೆ ಬರುವುದು ಖಚಿತ ಎಂದರು.
ಇದು ನನ್ನ ಕೊನೆಯ ಚುನಾವಣೆಯಾಗಿದೆ. ಅಲ್ಲದೇ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಹೊರತು ರಾಜಕೀಯದಿಂದ ಅಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಮೀಸಲಾತಿ ಮರುವಿಂಗಡಣೆ ಸಾಂವಿಧಾನಿಕವಲ್ಲ. ಒಕ್ಕಲಿಗ ಮತ್ತು ಲಿಂಗಾಯತ ಮೀಸಲಾತಿಯನ್ನು ಹೆಚ್ಚಿಸಲು ನಮ್ಮ ವಿರೋಧವಿಲ್ಲ. ಆದರೆ, ಮುಸ್ಲಿಮರ ಮೀಸಲಾತಿಯನ್ನು ಏಕೆ ರದ್ದುಗೊಳಿಸಿದ್ದು, ಎಂದು ಪ್ರಶ್ನಿಸಿದ ಅವರು, ಇದು ದ್ವೇಷದ ರಾಜಕಾರಣವನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಬಿಜೆಪಿ ವಿರುದ್ಧ ಅವರು ಹರಿಹಾಯ್ದರು.
ಬಿಜೆಪಿ ಒಂದು ಮತೀಯ ಪಕ್ಷ, ನಮ್ಮದು ಸರ್ವ ಜನಾಂಗದ ಜಾತ್ಯತೀತ ಪಕ್ಷವಾಗಿದೆ. ಕರ್ನಾಟಕದ ಜನರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಬಾರದು. ನಾನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಅಥವಾ ಯಾವುದೇ ಇತರ ಸಮುದಾಯ ಅಥವಾ ಧರ್ಮದವರಾಗಿದ್ದರೂ ಸಮಾನವಾಗಿ ಕಾಣುತ್ತೇನೆ, ಎಲ್ಲರನ್ನೂ ಸಮಾನ ರೀತಿಯಲ್ಲಿ ನೋಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ವರುಣಾದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಘೋಷಣೆ ಬಳಿಕ ದಿಢೀರ್ ನಾಪತ್ತೆಯಾದ ಜೆಡಿಎಸ್ ಅಭ್ಯರ್ಥಿ!