ಮೋದಿ, ಅಮಿತ್ ಶಾ ನಿರಂತರ ರಾಜ್ಯ ಪ್ರವಾಸ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದಕ್ಕೆ ಸಾಕ್ಷಿ: ಡಿಕೆಶಿ
ಬೆಂಗಳೂರು: ಚುನಾವಣೆಯಲ್ಲಿ ಬಿಜೆಪಿ ಸರಕಾರವನ್ನು ಕಿತ್ತೊಗೆಯಬೇಕೆಂದು ಜನರು ತೀರ್ಮಾನಿಸಿದ್ದು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲವೆಂದು ಅವರ ಪಕ್ಷದ ನಾಯಕರಿಗೇ ಅರಿವಾಗಿದೆ. ಇದೇ ಕಾರಣಕ್ಕೆ ಪದೇ ಪದೆ ಪ್ರಧಾನಿ ನರೆಂದ್ರ ಮೋದಿ, ಅಮಿತ್ ಶಾ ಸಹಿತ ಕೇಂದ್ರದ ನಾಯಕರು ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಶನಿವಾರ ಸದಾಶಿವನಗರ ನಿವಾಸದ ಬಳಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಕರ್ನಾಟಕದ ಚುನಾವಣೆ ಸಮಯದಲ್ಲಿ ಪಕ್ಷದ ಪ್ರಚಾರಕ್ಕೆ ಹೆಚ್ಚು ಆಗಮಿಸುತ್ತಿದ್ದು, ಅವರ ಪಕ್ಷ ರಾಜ್ಯದಲ್ಲಿ ಎಷ್ಟು ದುರ್ಬಲವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.
ಅವರು ಈ ರೀತಿ ಎಲ್ಲ ಪ್ರಯತ್ನ ಮಾಡುತ್ತಾ ಪರೋಕ್ಷವಾಗಿ ಸೋಲನ್ನು ಒಪ್ಪಿಕೊಳ್ಳುತ್ತಿದ್ದಾರೆ. ರಾಜ್ಯದ ಜನರು ಪ್ರಜ್ಞಾವಂತರು. ಮೋದಿ ಎಷ್ಟು ಬಾರಿ ಬಂದರೂ ಜನ ಈಗಾಗಲೇ ಈ ಸರಕಾರವನ್ನು ಕಿತ್ತೊಗೆಯಲು ತೀರ್ಮಾನಿಸಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಚುನಾವಣೆ ಸಮಯದಲ್ಲಿ ಆಟೊ ಚಾಲಕರು ತಮಗೆ ಬೇಕಾದ ಪಕ್ಷದ ಅಭ್ಯರ್ಥಿ ಹಾಗೂ ಕಾರ್ಯಕ್ರಮಗಳನ್ನು ತಮ್ಮ ಆಟೊ ಮೇಲೆ ಹಾಕಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಅದರಲ್ಲೂ ಬಹುತೇಕ ಆಟೊ ಚಾಲಕರು ಕಾಂಗ್ರೆಸ್ ಪಕ್ಷದ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಇಂತಹ ಆಟೊಗಳ ಮೇಲೆ 5 ಸಾವಿರ ದಂಡ ಹಾಕಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಆಟೊಗಳ ಮೇಲೆ ಪಕ್ಷದ ಪರ ಹಾಕಿಕೊಳ್ಳಬಾರದು ಎಂದು ಯಾವ ಕಾನೂನಿನಲ್ಲಿದೆ. ಆಯೋಗದವರು ಈ ಬಗ್ಗೆ ಬಾಯಿ ಮಾತಲ್ಲಿ ತಿಳುವಳಿಕೆ ಹೇಳಲಿ. ಆದರೆ, ಬಿಜೆಪಿಯ ಕುಮ್ಮಕ್ಕಿನಿಂದ ಪೊಲೀಸರು ಮೂರ್ನಾಲ್ಕು ದಿನ ಆಟೊ ಮುಟ್ಟುಗೋಲು ಹಾಕಿಕೊಂಡು ದಂಡ ವಿಧಿಸುತ್ತಿರುವುದೇಕೆ ಎಂದು ಶಿವಕುಮಾರ್ ಪ್ರಶ್ನಿಸಿದರು.
ಆಟೊ ಚಾಲಕರು ಯಾವುದೆ ಪಕ್ಷದ ಪರವಾಗಿ ಬೇಕಾದರೂ ಪ್ರಚಾರ ಮಾಡಲಿ. ಅವರಿಗೆ ಕಿರುಕುಳ ನೀಡಿದರೆ ಅವರ ಪರವಾಗಿ ನಾವು ನಿಲ್ಲುತ್ತೇವೆ. ಆಟೊ ಚಾಲಕರು ಸಾರ್ವಜನಿಕರ ಸೇವೆ ಸಲ್ಲಿಸುತ್ತಿದ್ದು, ಅವರು ಧೈರ್ಯವಾಗಿರಬೇಕು. ತಮ್ಮ ಹಕ್ಕು, ವಿಚಾರವನ್ನು ಅವರು ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಪೊಲೀಸ್ ಆಯುಕ್ತರು ಹಾಗೂ ಚುನಾವಣಾ ಆಯೋಗಕ್ಕೆ ನಿರ್ಬಂಧ ಹೇರುವ ಕಾನೂನು ಇಲ್ಲ. ಆಟೊ ಚಾಲಕರಿಗೆ ಕಿರುಕುಳ ನೀಡಬಾರದು ಎಂದು ಪತ್ರ ಬರೆಯುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.
ಅಮುಲ್ ವಿವಾದದ ಕುರಿತು ಮಾತನಾಡಿದ ಅವರು, ನಂದಿನಿ ನಮ್ಮ ರೈತರ ಸಂಸ್ಥೆ. ರಾಜ್ಯದ 80 ಲಕ್ಷ ರೈತರು ಅಧಿಕೃತವಾಗಿ ಸಹಕಾರ ಸಂಸ್ಥೆ ಸದಸ್ಯತ್ವ ಪಡೆದು ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಈಗ ಅವರಿಗೆ ಕಡಿಮೆ ಬೆಲೆ ನೀಡುತ್ತಿದ್ದಾರೆ. ಜಾನುವಾರುಗಳ ಮೇವಿನ ಬೆಲೆ ಹೆಚ್ಚಾಗಿದ್ದರೂ ಹಾಲಿನ ದರ ಹೆಚ್ಚಳ ಮಾಡಿ ಅವರಿಗೆ ನೆರವು ನೀಡಲು ಆಗಿಲ್ಲ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ಹೇಳಿದ್ದ ಬಿಜೆಪಿ ಅದನ್ನು ಮಾಡುತ್ತಿಲ್ಲ. ನಮ್ಮ ರೈತರಿಗೆ ಬೆಂಬಲ ಬೆಲೆ ನೀಡಿ ರಕ್ಷಣೆ ಮಾಡಬೇಕಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೇಲೆ ಈ.ಡಿ ದುರ್ಬಳಕೆ ಮಾಡಿಕೊಳ್ಳಲು ಪಿತೂರಿ ನಡೆಯುತ್ತಿದೆ. ಚುನಾವಣೆ ಸಮಯದಲ್ಲಿ ನೇಮಕ ಮಾಡಿರುವ ಪೊಲೀಸ್ ಅಧಿಕಾರಿಗಳು ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರನ್ನು ಬೆದರಿಸುತ್ತಿದ್ದಾರೆ. ಇಂತಹ ಪೆÇಲೀಸ್ ಅಧಿಕಾರಿಗಳ ಪಟ್ಟಿ ಮಾಡುವಂತೆ ತಿಳಿಸಿದ್ದೇನೆ. ಇನ್ನು 40 ದಿನಗಳು ಮಾತ್ರ ಈ ರೀತಿ ಮಾಡಲು ಸಾಧ್ಯ.
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ.