ವಿವೇಕಾನಂದ ಬಡಾವಣೆಗೆ ಮೂಲ ಸೌಕರ್ಯ ನಿರ್ಲಕ್ಷ್ಯ: ಬಡಾವಣೆ ನಿವಾಸಿಗಳಿಂದ ಮತದಾನ ಬಹಿಷ್ಕಾರ

Update: 2023-04-08 16:34 GMT

ಮಂಡ್ಯ: ನಗರದ ಕೆರೆಯಂಗಣದ ವಿವೇಕಾನಂದ ಬಡಾವಣೆಗೆ ಮೂಲ ಸೌಲಭ್ಯಗಳನ್ನು ಕಲ್ಪಿಸದ ಹಿನ್ನೆಲೆಯಲ್ಲಿ ಬಡಾವಣೆಯ ನಿವಾಸಿಗಳು ಈ ಬಾರಿಯ ವಿಧಾನಸಭೆ ಚುನಾವಣಾಯಲ್ಲಿ ಮತದಾನವನ್ನು ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.

ಶನಿವಾರ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿವೇಕಾನಂದ ನಗರದ ಬಡಾವಣೆ ಹಿತರಕ್ಷಣಾ ಸಮಿತಿ ಮುಖಂಡ ಕೀಲಾರ ಕೃಷ್ಣ, ಕಳೆದ 20 ವರ್ಷದಿಂದ ಬಡಾವಣೆಗೆ ಮೂಲಸೌಲಭ್ಯಕ್ಕೆ ನಡೆಸಿದ ಹೋರಾಟಕ್ಕೆ ಸ್ಪಂದಿಸಿಲ್ಲದ ಕಾರಣ ಮತದಾನ ಬಹಿಷ್ಕರಿಸಲು ತೀರ್ಮಾನಿಸಿದ್ದೇವೆ ಎಂದರು.

ಬಡಾವಣೆಯಲ್ಲಿ ಕುಡಿಯುವ ನೀರು, ಚರಂಡಿ, ಯುಜಿಡಿ, ರಸ್ತೆ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. ಚಿರತೆ, ನಾಯಿಗಳ ಹಾವಳಿ ಹೆಚ್ಚಾಗಿದೆ. ಕಸವನ್ನು ಸಂಗ್ರಹಿಸಲು ನಗರಸಭೆ ವಾಹನಗಳು ಬರುತ್ತಿಲ್ಲ. ಇಲ್ಲಿನ ವಾಸ ನರಕಸದೃಶವಾಗಿದೆ ಎಂದು ಅವರು ಅಳಲು ತೋಡಿಕೊಂಡರು.

1998ರಲ್ಲಿ ಸರಕಾರದ ನಿರ್ದೇಶನದಂತೆ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದವರು ವಿವೇಕಾನಂದ ನಗರ ಬಡಾವಣೆ ನಿರ್ಮಿಸಿ ಸಾರ್ವಜನಿಕರಿಗೆ ಸುಮಾರು 2,800 ನಿವೇಶನವನ್ನು ನೀಡಿದೆ. ಪ್ರಸ್ತುತ 500 ದಿಂದ 600 ಮನೆಗಳಿವೆ. ಆದರೆ, ಮುಡಾವಾಗಲಿ, ನಗರಸಭೆಯಾಗಲಿ ಮೂಲ ಸೌಕರ್ಯ ಒದಗಿಸಿಲ್ಲ. ಜನಪ್ರತಿನಿಧಿಗಳಿಗೂ ಮನವಿ ಕೊಟ್ಟು ಸಾಕಾಗಿದೆ ಎಂದು ಅವರು ಕಿಡಿಕಾರಿದರು.

ಈ ಸಂಬಂಧ ಹೋರಾಟ ಮುಂದುವರಿದಿದೆ. ಪ್ರಸ್ತುತ ಚುನಾವಣೆ ಬಂದಿರುವುದರಿಂದ ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದೇವೆ. ಬಡಾವಣೆಯ ಸುಮಾರು 15 ಸಾವಿರ ಮತದಾರರು ಮತದಾನವನ್ನು ಬಹಿಷ್ಕರಿಸಲು ಒಮ್ಮತದಿಂದ ತೀರ್ಮಾನಿಸಿದ್ದೇವೆ ಎಂದು ಅವರು ತಿಳಿಸಿದರು.

ಗೋಷ್ಠಿಯಲ್ಲಿ ಮುಖಂಡರಾದ ವಕೀಲ ಎಂ.ವಿ.ರಾಜು, ಭೀಮೇಶ್, ಶಿವಪ್ರಕಾಶ್, ಚಂದ್ರು, ಪುಟ್ಟಗೌಡ, ಶ್ರೀನಿವಾಸ್, ರಾಜ ಹಾಗೂ ಇತರರು ಉಪಸ್ಥಿತರಿದ್ದರು.

Similar News