ಬೇಸಿಗೆಯನ್ನು ತಂಪಾಗಿಸುವ ಸಾಂಪ್ರದಾಯಿಕ ತಂತ್ರಗಳು

Update: 2023-04-09 03:44 GMT

ಮೊನ್ನೆ ಹತ್ತನೇ ತರಗತಿ ಪರೀಕ್ಷಾ ಕಾರ್ಯ ಮುಗಿಸಿಕೊಂಡು ಮಧ್ಯಾಹ್ನ ಮನೆ ಕಡೆಗೆ ಹೊರಟೆ. ಸುಮಾರು 15 ಕಿ.ಮೀ. ಪಯಣ ಸಾಗಬೇಕಿತ್ತು. ಎಪ್ರಿಲ್ ತಿಂಗಳಾದ್ದರಿಂದ ಬೈಕ್ ಓಡಿಸಲು ಆಗದಷ್ಟು ಝಳ. ನಾಲ್ಕಾರು ಕಿ.ಮೀ. ಸಾಗಿದ ತಕ್ಷಣ ಯಾವುದಾದರೂ ಒಂದು ಮರ ಹುಡುಕಿಕೊಂಡು ನಿಲ್ಲುವುದು, ಸ್ವಲ್ಪ ಹೊತ್ತು ಬೈಕ್ ಮತ್ತು ದೇಹವನ್ನು ತಂಪಾಗಿಸಿಕೊಂಡು ಮತ್ತೆ ಚಲಿಸುವುದು. ಹದಿನೈದು ಕಿ.ಮೀ. ಪ್ರಯಾಣಕ್ಕೆ ಒಂದು ಗಂಟೆ ಬೇಕಾಗಿತ್ತು. ಇನ್ನು ಮನೆ ತಲುಪಿದ ಕೂಡಲೇ ಮತ್ತಷ್ಟು ಬಿಸಿಲ ಬೇಗೆ ಅನುಭವಿಸುವಂತಾಯಿತು. ಬಿಸಿಲಿನಿಂದ ಬಸವಳಿದು ಮನೆಗೆ ಬಂದ ಕೂಡಲೇ ದೇಹದ ತಾಪಮಾನ ಇದ್ದಕ್ಕಿದ್ದಂತೆ ಬದಲಾಗುತ್ತದೆ. ಯಾರೊಡನೆಯೂ ಮಾತು ಬೇಡ ಎನಿಸುತ್ತದೆ. ದೇಹ ಮತ್ತು ಮನಸ್ಸು ಏಕಾಂಗಿತನ ಬಯಸುತ್ತದೆ. ಮನೆಗಿಂತ ಬಯಲೇ ಚೆನ್ನಾಗಿತ್ತು ಎಂಬಂತಾಗುತ್ತದೆ. ಬೇಸಿಗೆಯಲ್ಲಿ ಇಂತಹ ಅನುಭವ ಬಹುತೇಕರಿಗೆ ಆಗುವುದು ಸಹಜ. ''ಯಪ್ಪಾ, ಈ ವರ್ಷ ಭಾರೀ ಬಿಸಿಲು ಐತಿ'' ಇದು ಪ್ರತಿವರ್ಷ ಕೇಳಿಬರುವ ಸಾಮಾನ್ಯ ಹೇಳಿಕೆ. ವರ್ಷದಿಂದ ವರ್ಷಕ್ಕೆ ಬೇಸಿಗೆಯ ತಾಪಮಾನ ಏರುತ್ತಲೇ ಇದೆ. ಇದನ್ನು ಕೂಲಾಗಿಸುವ ಮಾತುಗಳು ಕೇಳಿಬರುತ್ತವೆಯೇ ವಿನಹ ಅನುಸರಿಸಲು ಯಾರೂ ಮುಂದೆ ಬರುತ್ತಿಲ್ಲ. ಬೇಸಿಗೆಯಲ್ಲಿ ವಾಹನ ನಿಲ್ಲಿಸಲು ಮರದ ನೆರಳು ಹುಡುಕುತ್ತೇವೆಯೇ ಹೊರತು, ಮಳೆಗಾಲದಲ್ಲಿ ಮರ ಬೆಳೆಸುವ ಪ್ರಯತ್ನ ಯಾರೂ ಮಾಡುತ್ತಿಲ್ಲ.

ನಮ್ಮ ಸಣ್ಣ ಪ್ರಯತ್ನದಿಂದ ಬೇಸಿಗೆಯಲ್ಲೂ ಮನೆ ಅಥವಾ ಇನ್ನಿತರ ಸ್ಥಳಗಳನ್ನು ಕೂಲಾಗಿ ಇಡಬಹುದು. ಅದಕ್ಕೆಲ್ಲಾ ಅನ್ಯ ತಂತ್ರಗಳಿಗಿಂತ ಸಾಂಪ್ರದಾಯಿಕ ತಂತ್ರಗಳೇ ಹೆಚ್ಚು ಪರಿಣಾಮಕಾರಿ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ನಾವೆಲ್ಲ ಚಿಕ್ಕವರಿದ್ದಾಗ ಬಹುತೇಕ ಮನೆಗಳು ಗುಡಿಸಲು ಮನೆಗಳಾಗಿದ್ದವು. ಬೇಸಿಗೆಯಲ್ಲಿ ಹೆಚ್ಚು ತಂಪಾಗಿರುತ್ತಿದ್ದವು. ಅವು ಸೂರ್ಯನ ಶಾಖವನ್ನು ಹೀರಿಕೊಳ್ಳುತ್ತಿದ್ದವು. ವಾತಾವರಣಕ್ಕೆ ಶಾಖವನ್ನು ಬಿಟ್ಟು ಕೊಡುತ್ತಿರಲಿಲ್ಲ. ಆದರೆ ಈಗಿನ ಸಿಮೆಂಟ್ ಮನೆಗಳು ಶಾಖವನ್ನು ಹೀರಿಕೊಳ್ಳದೆ ವಾಪಸು ಬಿಡುತ್ತವೆ. ಹಾಗಾಗಿ ವಾತಾವರಣ ಬಿಸಿಯಾಗಿರುತ್ತದೆ. ಅಲ್ಲದೆ ಅಂದಿನ ಕಾಲದಲ್ಲಿ ಮನೆಯ ಸುತ್ತಮುತ್ತಲಿನ ಪರಿಸರವೂ ಬಿಸಿಲನ್ನು ಹೀರಿಕೊಳ್ಳಲು ಅವಕಾಶವಿತ್ತು. ನೆಲವು ಮಣ್ಣಿನಿಂದ ಕೂಡಿರುತ್ತಿತ್ತು. ಅಲ್ಲದೆ ಮನೆಯ ಅಕ್ಕಪಕ್ಕ ಗಿಡಗಳನ್ನು ಬೆಳೆಸಲು ಅವಕಾಶವಿರುತ್ತಿತ್ತು. ಇದರಿಂದ ಶಾಖವು ಹೀರಲ್ಪಡುತ್ತಿತ್ತು.

ಇಂದು ರಸ್ತೆ, ಚರಂಡಿ ಸೇರಿದಂತೆ ಎಲ್ಲವೂ ಸಿಮೆಂಟ್ ಹಾಗೂ ಡಾಂಬರ್‌ನ ಹೊದಿಕೆ ಪಡೆದಿರುವುದರಿಂದ ಶಾಖ ಹೀರಿಕೊಳ್ಳಲು ಅವಕಾಶವೇ ಇಲ್ಲ. ಸೂರ್ಯನಿಂದ ಹೊರಸೂಸಲ್ಪಟ್ಟ ಎಲ್ಲಾ ಶಾಖವೂ ವಾತಾವರಣಕ್ಕೆ ವಾಪಸು ಬಿಡುಗಡೆಯಾಗುತ್ತದೆ. ಹಾಗಾಗಿ ತಾಪಮಾನ ಹೆಚ್ಚುತ್ತಲೇ ಇದೆ. ಇನ್ನು ಮನೆಯ ಮೇಲ್ಛಾವಣಿಯು ಕೂಡಾ ಶಾಖವನ್ನು ಹೊರದೂಡುತ್ತದೆ. ಬಹುತೇಕ ಮನೆಗಳ ಮೇಲ್ಛಾವಣಿಯು ಸಿಮೆಂಟ್ ಅಥವಾ ಶೀಟ್‌ಗಳಿಂದ ಆಗಿದ್ದು ಇವೆಲ್ಲವೂ ಶಾಖವನ್ನು ಹೀರಿಕೊಳ್ಳದೆ ವಾತಾವರಣಕ್ಕೆ ಬಿಟ್ಟುಕೊಡುತ್ತವೆ. ಇದರಿಂದ ವಾತಾವರಣ ಮತ್ತಷ್ಟು ಬಿಸಿಯಾಗುತ್ತದೆ. ಜನಜೀವನ ಅಭಿವೃದ್ಧಿ ಪಥದತ್ತ ಸಾಗಿದಂತೆಲ್ಲಾ ಪರಿಸರದ ಮೇಲಿನ ದಬ್ಬಾಳಿಕೆ ಹೆಚ್ಚುತ್ತಲೇ ಇದೆ. ಇದರ ಪರಿಣಾಮವಾಗಿ ತಾಪಮಾನದಲ್ಲಿ ಏರಿಕೆಯಾಗುತ್ತಿದೆ. ಭೂಮಿಯ ಬಿಸಿ ಹೆಚ್ಚಾಗಾಗುತ್ತಿದ್ದಂತೆ ಜನರನ್ನು ತಂಪಾಗಿರಿಸಲು ಮಾರ್ಗಗಳನ್ನು ಹುಡುಕುವ ತುರ್ತು ಅಗತ್ಯವಿದೆ. ಕಳೆದ ಬೇಸಿಗೆಯಲ್ಲಿ ದಿಲ್ಲಿಯ ತಾಪಮಾನ 44 ಡಿಗ್ರಿ ಸೆಲ್ಸಿಯಸ್ ಇತ್ತು. ಈ ವರ್ಷ ಅದನ್ನು ದಾಟುವ ನಿರೀಕ್ಷೆ ಇದೆ. ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ನಿಯಂತ್ರಿಸುವ ಪ್ರತಿಜ್ಞೆಗಳ ಹೊರತಾಗಿಯೂ, ವಿಜ್ಞಾನಿಗಳು ತಾಪಮಾನ ಏರಿಕೆಯನ್ನು ತಗ್ಗಿಸಲು ಪ್ರಯತ್ನಿಸುತ್ತಲೇ ಇದ್ದಾರೆ. ವಾತಾವರಣದ ಬಿಸಿಯನ್ನು ಕಡಿಮೆ ಮಾಡದ ಹೊರತು ನಮಗೆ ಭವಿಷ್ಯವಿಲ್ಲ. ಉತ್ತಮ ಭವಿಷ್ಯಕ್ಕಾಗಿ ಮನೆ ಸೇರಿದಂತೆ ನಮ್ಮ ಸುತ್ತಲಿನ ವಾತಾವರಣವನ್ನು ತಂಪಾಗಿಡಲು ಪ್ರಯತ್ನ ಮಾಡಲೇಬೇಕಿದೆ. ಅದಕ್ಕಾಗಿ ಕೆಲವು ಕಡೆಗಳಲ್ಲಿ ಅನುಷ್ಠಾನಕ್ಕೆ ತಂದ ಸಾಂಪ್ರದಾಯಿಕ ತಂತ್ರಗಳೇ ಸಾಕ್ಷಿಯಾಗಿವೆ.

ಅಹಮದಾಬಾದ್‌ನ 'ಮಹಿಳಾ ಹೌಸಿಂಗ್ ಟ್ರಸ್ಟ್'ನ ವಿಭಿನ್ನ ಪ್ರಯತ್ನದ ಫಲವಾಗಿ ಒಳಾಂಗಣದ ತಾಪಮಾನ 4 ರಿಂದ 5 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ಈ ಸಂಸ್ಥೆಯು ಭಾರತದ 10 ನಗರಗಳ 1,600ಕ್ಕೂ ಹೆಚ್ಚು ಮಹಿಳೆಯರಿಗೆ ಹವಾಮಾನ ಬದಲಾವಣೆಯ ಕುರಿತು ಶಿಕ್ಷಣ ನೀಡಿ ತಾಪಮಾನ ತಗ್ಗಿಸುವ ಪುಟ್ಟ ಪ್ರಯೋಗವನ್ನು ಅನುಸರಿಸಿದೆ. ಅದೇನೆಂದರೆ ಮನೆಯ ಮೇಲ್ಛಾವಣಿಗೆ (ಕಾಂಕ್ರಿಟ್ ಅಥವಾ ಶೀಟ್) ಸೌರ ಪ್ರತಿಫಲಿತ ಬಣ್ಣವನ್ನು ಲೇಪಿಸುವ ಮೂಲಕ ಒಳಾಂಗಣ ತಾಪಮಾನವನ್ನು ಕಡಿಮೆ ಮಾಡಿದೆ. ಗ್ಲೋಬಲ್ ಕೂಲ್ ಸಿಟೀಸ್ ಅಲೈಯನ್ಸ್ ಪ್ರಕಾರ, ಸೂರ್ಯನ ಬೆಳಕು ತಿಳಿ ಬಣ್ಣದ ಮೇಲ್ಛಾವಣಿಯ ಮೇಲೆ ಬಿದ್ದಾಗ ಅದರ ಶಕ್ತಿಯ ಶೇ. 80 ಪ್ರತಿಫಲಿಸುತ್ತದೆ. ಹಾಗಾಗಿ ಮನೆಯ ಒಳಾಂಗಣವು ತಂಪಾಗಿರುತ್ತದೆ. ಇದರಿಂದ ಪ್ರೇರಿತಗೊಂಡು ಮುನ್ಸಿಪಲ್ ಕಾರ್ಪೊರೇಶನ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಮತ್ತು ನ್ಯಾಚುರಲ್ ರಿಸೋರ್ಸ್ ಡಿಫೆನ್ಸ್ ಕೌನ್ಸಿಲ್ ನಡುವಿನ ಸಹಭಾಗಿತ್ವದಲ್ಲಿ 7,000ಕ್ಕೂ ಅಧಿಕ ಕಡಿಮೆ ಆದಾಯದ ಕುಟುಂಬಗಳ ಮೇಲ್ಛಾವಣಿಗೆ ಬಿಳಿ ಬಣ್ಣ ಬಳಿಯಲಾಗಿದೆ. ಈ ಟ್ರಸ್ಟ್‌ನ ಇನ್ನೊಂದು ಸಲಹೆ ಏನೆಂದರೆ ಮನೆಯ ಮೇಲ್ಛಾವಣಿಯ ಮೇಲೆ ಕುಂಡದಲ್ಲಿ ಸಸ್ಯಗಳು ಮತ್ತು ಬಳ್ಳಿಗಳನ್ನು ಬೆಳೆಸುವುದು. ಇದು ಒಳಾಂಗಣ ತಾಪಮಾನವನ್ನು 2.5 ಡಿಗ್ರಿ ಸೆಲ್ಸಿಯಸ್ ಕಡಿಮೆ ಮಾಡುತ್ತದೆ ಎಂದು ಟ್ರಸ್ಟ್ ಹೇಳುತ್ತದೆ.

ಮೇಲ್ಛಾವಣಿಯಲ್ಲಿನ ಸಸ್ಯಗಳು ನೆರಳು ಮತ್ತು ಬಾಷ್ಪೀಕರಣದ ಮೂಲಕ ಮನೆಯನ್ನು ತಂಪಾಗಿಸುತ್ತವೆ ಎಂದು ಸಾಬೀತಾಗಿದೆ. ಟ್ರಸ್ಟ್ ಶಾಖದ ಒತ್ತಡವನ್ನು ಕಡಿಮೆ ಮಾಡುವ ತತ್ವಗಳ ಮೇಲೆ ಮಹಿಳೆಯರಿಗೆ ತರಬೇತಿ ನೀಡುತ್ತದೆ. ಭೂಮಿಯ ಮೇಲ್ಮೈಯಲ್ಲಿ ತಾಪಮಾನವು ನಿರಂತರವಾಗಿ ಏರಿಳಿತಗೊಳ್ಳುವಂತೆ ಭೂಮಿಯ ಒಳಗಿನ ತಾಪಮಾನದಲ್ಲೂ ಬದಲಾವಣೆ ಇರುತ್ತದೆ. ಇದನ್ನು ಗಮನಿಸಿದ ಪಾಕಿಸ್ತಾನದ ಜಿಯೋ ಏರ್‌ಕಾನ್ ಎಂಬ ಕಂಪೆನಿಯು ಮನೆಗಳನ್ನು ತಂಪಾಗಿಸಲು ನೀರು ತುಂಬಿದ ಭೂಗತ ಕೊಳವೆಗಳ ವ್ಯವಸ್ಥೆಯನ್ನು ಮಾಡಿದ್ದಾರೆ. ಈ ವ್ಯವಸ್ಥೆಯ ಮೂಲಕ ಕಟ್ಟಡ ನಿರ್ಮಾಣ ಸಮಯದಲ್ಲಿ ನೆಲದಡಿ ಪೈಪ್‌ಗಳನ್ನು ಅಳವಡಿಸಿ ನೀರಿನಿಂದ ತುಂಬಿಸುವ ಮೂಲಕ ಬೇಸಿಗೆಯಲ್ಲಿ ಮನೆಯನ್ನು ಕೂಲಾಗಿರಿಸುವುದು. ಪೈಪ್‌ಗಳು ಬೇಸಿಗೆಯಲ್ಲಿ ಕಟ್ಟಡದಿಂದ ಬಿಸಿಯಾದ ನೀರನ್ನು ಸೆಳೆದುಕೊಳ್ಳುತ್ತವೆ ಮತ್ತು ಕಟ್ಟಡಕ್ಕೆ ತಂಪನ್ನು ನೀಡುತ್ತವೆ. ಇದಕ್ಕೆ ವಿರುದ್ಧವಾಗಿ ಚಳಿಗಾಲದಲ್ಲಿ ಮನೆಯನ್ನು ಬೆಚ್ಚಗಿಡುತ್ತವೆ ಎಂಬುದನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿದೆ.

ಈ ವ್ಯವಸ್ಥೆಯಿಂದ ಮನೆಯ ತಾಪಮಾನವು 21-25 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಮತ್ತು ಇದಕ್ಕೆ ತಗಲುವ ಅಂದಾಜು ವೆಚ್ಚ 22-40 ಸಾವಿರ ರೂ.ಗಳು ಮಾತ್ರ ಎಂದು ಸಂಸ್ಥೆ ಹೇಳಿದೆ. ಗೃಹ ನಿರ್ಮಾಣದಲ್ಲಿ ವಾಸ್ತುಶಿಲ್ಪಿಗಳು ಮತ್ತು ವಿನ್ಯಾಸಕರ ತಂತ್ರಗಾರಿಕೆಗಳೂ ಪ್ರಾಮುಖ್ಯ ಪಡೆಯುತ್ತವೆ ಎಂಬುದಕ್ಕೆ ಉತ್ತರ ಬಾಂಗ್ಲಾದೇಶದ ರುದ್ರಪುರದಲ್ಲಿ ಒಂದು ಯೋಜನೆಯೇ ಸಾಕ್ಷಿ. ಈ ಯೋಜನೆಯಲ್ಲಿ ಕಡಿಮೆ ಆದಾಯದ ಕುಟುಂಬಗಳಿಗೆ ನಿರ್ಮಿಸಿದ ಮನೆಗಳಲ್ಲಿ ಸ್ಥಳೀಯ ತಂತ್ರವನ್ನು ಬಳಸಲಾಗಿದೆ. ಮಣ್ಣು ಮತ್ತು ಬಿದಿರನ್ನು ಬಳಸಿ, ಅವರು ಅಡ್ಡ ವಾತಾಯನಕ್ಕಾಗಿ ತೆರೆಯುವಿಕೆ, ತೆಂಗಿನ ನಾರು ಮತ್ತು ಗಾಜಿನ ಕಿಟಕಿಗಳಿಂದ ಮಾಡಿದ ನಿರೋಧನವನ್ನು ಸ್ಥಾಪಿಸಿದ್ದಾರೆ. ಆ ಮೂಲಕ ಮನೆಯನ್ನು ಕೂಲಾಗಿಡುವ ಯೋಜನೆಯಾಗಿದೆ. ಅಸ್ಸಾಮಿನಲ್ಲಿಯೂ ಸಾಂಪ್ರದಾಯಿಕ ಸ್ಟಿಲ್ಟ್ ಮನೆಗಳಿಗೆ ಕೂಲಿಂಗ್ ವ್ಯವಸ್ಥೆಯನ್ನು ಬಳಸಲಾಗಿದೆ. ಅಡ್ಡ ವಾತಾಯನ ವ್ಯವಸ್ಥೆಯನ್ನು ಸಕ್ರಿಯಗೊಳಿಸಿ, ಪ್ಲಾಸ್ಟರ್ ಮಾಡದೆ ಉಳಿದಿರುವ ಗೋಡೆಗಳ ಮೂಲಕ ನೈಸರ್ಗಿಕ ವಾತಾಯನವನ್ನು ಉತ್ತೇಜಿಸುತ್ತವೆ.

ಇವೆಲ್ಲವುಗಳನ್ನು ಗಮನಿಸಿದರೆ ನಾವು ಚಿಕ್ಕವರಿದ್ದಾಗ ಶೀಟ್ ಮೇಲ್ಛಾವಣಿಗೆ ಬೇಸಿಗೆಯಲ್ಲಿ ತೆಂಗಿನ ಗರಿ ಅಥವಾ ಇನ್ನಿತರ ಹುಲ್ಲು ಹೊದಿಸುವ ಮೂಲಕ ಮನೆಯನ್ನು ತಂಪಾಗಿಸುತ್ತಿದ್ದ ವ್ಯವಸ್ಥೆ ನೆನಪಾಯಿತು. ಏನೇ ಆಗಲಿ ವಿಭಿನ್ನ ತಂತ್ರಗಳನ್ನು ಅನುಸರಿಸುವ ಮೂಲಕ ಎಪ್ರಿಲ್ ಕೂಲ್ ಆಗಲು ಶ್ರಮಿಸೋಣವೇ?

Similar News