×
Ad

ಟಿಕೆಟ್ ಸಿಗದ ಹಿನ್ನೆಲೆ: ಕಡೂರು ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ನಂಜಪ್ಪ ಸ್ಪರ್ಧೆ

Update: 2023-04-08 23:28 IST

ಕಡೂರು: ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕಡೂರು ಸಿ ನಂಜಪ್ಪ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ.

ಪಟ್ಟಣದ ಸುರುಚಿ ಹೋಟೆಲ್ ಸಭಾಂಗಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸ್ವತಃ ನಂಜಪ್ಪ ಅವರೇ ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಕೊರಚ, ಕೊರಮ, ಕೊರವರ, ಬಜಂತ್ರಿ, ಕೊರವಂಜಿ, ಕುಂಚಿಕೊರವರ್, ಯರ್ರಕುಲ, ಕೈಕಾಡಿ, ಕುಳವ, ಸಮಾಜದ ರಾಜಕೀಯ ವೇದಿಕೆ ತಮ್ಮ ಸ್ಪರ್ಧೆಗೆ ಬೆಂಬಲ ಸೂಚಿಸಿದೆ ಎಂದರು.

ಸುಮಾರು 40 ವರ್ಷದ ಸುಧೀರ್ಘ ರಾಜಕಾರಣದಲ್ಲಿರುವ ತಾವು ಕಾಂಗ್ರೆಸ್ ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ದಿ. ಪ್ರಧಾನಿ ಇಂದಿರಾಗಾಂಧಿ ಸೇರಿದಂತೆ ಡಿ.ಬಿ. ಚಂದ್ರೇಗೌಡ, ಎಂ. ವೀರಪ್ಪ ಮೊಯ್ಲಿ, ಜಯಪ್ರಕಾಶ್ ಹೆಗ್ಡೆ, ಡಿ.ಕೆ. ತಾರಾದೇವಿ, ಗಂಡಸಿ ಶಿವರಾಮ್ ಮುಂತಾದವರ ಗೆಲುವಿಗೆ ತಾವು ದುಡಿದಿದ್ದು, ಕಳೆದ ಹಲವು ವರ್ಷದಿಂದ ಟಿಕೆಟ್ ಕೋರುತ್ತಾ ಬಂದರೂ ಸ್ಪರ್ಧೆಗೆ ಅವಕಾಶ ಸಿಕ್ಕಿಲ್ಲ ಎಂದು ವಿಷಾಧಿಸಿದರು.

ಪಕ್ಷವು ಈ ಬಾರಿ ಟೆಕೆಟ್ ನೀಡಬಹುದು ಎಂಬ ಅಭಿಲಾಷೆಯಿಂದ ಅರ್ಜಿ ಸಲ್ಲಿಸಿದ್ದರೂ, ಮತ್ತೊಬ್ಬರಿಗೆ ಟಿಕೆಟ್ ನೀಡಲಾಗಿದೆ. ಈ ಹಿನ್ನಲೆಯಲ್ಲಿ ತಾನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಉದ್ದೇಶಿಸಿದ್ದು ಇದಕ್ಕೆ ಕುಳುವ ಸಮಾಜದ ಎಲ್ಲಾ ವರ್ಗದ ಜನ ಬೆಂಬಲ ಮತ್ತು ಪಕ್ಷದೊಳಗಿರುವ ನನ್ನ ಆತ್ಮೀಯರ ಮತ್ತು ಹಿತೈಷಿಗಳ ಬೆಂಬಲವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿಗೋಷ್ಟಿಯಲ್ಲಿ ರಾಜಕೀಯ ವೇದಿಕೆಯ ಉಪಾಧ್ಯಕ್ಷ ಎನ್. ಹರೀಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ಕೃಷ್ಣಮೂರ್ತಿ, ಶಿವರಾಜ, ಜನಾರ್ಧನ್, ಶಂಕರ್ ಮತ್ತಿತರರು ಇದ್ದರು.

ಸುದ್ದಿಗೋಷ್ಟಿ ನಡೆಯುತ್ತಿದ್ದ ಸಮಯದಲ್ಲೇ ಕಾಂಗ್ರೆಸ್ ಟಿಕೆಟ್ ಖಚಿತವಾಗಿರುವ ಕೆ.ಎಸ್. ಆನಂದ್ ಮತ್ತಿತರ ಮುಖಂಡರು ಸುದ್ದಿಗೋಷ್ಠಿಯ ಸ್ಥಳಕ್ಕೆ ಆಗಮಿಸಿ ನಂಜಪ್ಪ ಅವರಿಗೆ ಆನಂದ್ ಅವರು ಶಾಲು ಹೊದಿಸಿ ಗೌರವಿಸಿ ಆಶೀರ್ವದಿಸಬೇಕೆಂದು ಕೋರಿದ ಘಟನೆಯೂ ನಡೆಯಿತು.

Similar News