ಬಂಡೀಪುರ ಅರಣ್ಯದಲ್ಲಿ ಮೋದಿ ಸಫಾರಿ: ಕಣ್ಣಿಗೆ ಬೀಳದ ಹುಲಿ
ಚಾಮರಾಜನಗರ, ಎ.9: ಹುಲಿ ಯೋಜನೆಯ ಸುವರ್ಣ ಮಹೋತ್ಸವದ ಆಚರಣೆಗಾಗಿ ಬಂಡೀಪುರಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇಂದು ಬೆಳಗ್ಗೆ ಸಫಾರಿ ನಡೆಸಿದರು.
ತೆರೆದ ಜೀಪ್‌ನಲ್ಲಿ (ಬೊಲೆರೊ ಕ್ಯಾಂಪರ್) ಸಫಾರಿಗೆ ತೆರಳಿದ ಪ್ರಧಾನಿ ಸುಮಾರು ಎರಡು ಗಂಟೆಗಳ ಕಾಲ ಬಂಡೀಪುರ ಅರಣ್ಯದ ಕಚ್ಚಾ ರಸ್ತೆಯಲ್ಲಿ ಸಂಚರಿಸಿ, ಪ್ರಕೃತಿ ಸೌಂದರ್ಯ ಸವಿದರು. ಈ ವೇಳೆ ಆನೆಗಳು, ಜಿಂಕೆಗಳು, ಕಾಟಿಗಳು ಸೇರಿದಂತೆ ಹಲವು ಪ್ರಾಣಿ, ಪಕ್ಷಿಗಳು ಪ್ರಧಾನಿ ಕಣ್ಣಿಗೆ ಬಿದ್ದವು. ಆದರೆ 22 ಕಿ.ಮೀ. ಸಫಾರಿ ಸಮಯದಲ್ಲಿ ಎಲ್ಲೂ ಹುಲಿ ಕಾಣಿಸಲಿಲ್ಲ ಎಂದು ತಿಳಿದುಬಂದಿದೆ.
ಪ್ರಧಾನಿ 9:50ಕ್ಕೆ ಕೆಕ್ಕನಹಳ್ಳ ಚೆಕ್ ಪೋಸ್ಟ್‌ಗೆ ತಲುಪಿದರು. ಅಲ್ಲಿಂದ ತಮ್ಮ ವಾಹನದಲ್ಲಿ ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ತೆರಳಿದರು.
ಇದಕ್ಕೂ ಮೊದಲು ಬೆಳಗ್ಗೆ 7:35ರ ಸುಮಾರಿಗೆ ಬಂಡೀಪುರ ಕ್ಯಾಂಪಸ್‌ಗೆ ತಲುಪಿದ ಮೋದಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಗೌರವಾರ್ಪಣೆ ಸಲ್ಲಿಸಿದರು.
ದಿಲ್ಲಿಯಿಂದ ಬಂದಿದ್ದ ಏಮ್ಸ್ ವೈದ್ಯರ ತಂಡ, ಎಡಿಜಿಪಿ ಅಲೋಕ್ ಕುಮಾರ್, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಎಸ್ಪಿ ಪದ್ಮನಿ ಸಾಹು ಸಹಿತ ಜಿಲ್ಲಾ ಆರೋಗ್ಯ ಇಲಾಖೆಯ ವೈದ್ಯರ ತಂಡ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಧಾನಿಯ ಜೊತೆಗಿದ್ದರು.