ಇದ್ರೀಸ್ ಪಾಷಾ ಹತ್ಯೆ ಪ್ರಕರಣ: ಪುನೀತ್ ಕೆರೆಹಳ್ಳಿ ಸೇರಿ ಐವರು ಆರೋಪಿಗಳು 7 ದಿನ ಪೊಲೀಸ್ ಕಸ್ಟಡಿಗೆ

Update: 2023-04-09 11:51 GMT

ಕನಕಪುರ: ಜಾನುವಾರು ಸಾಗಾಟ ವಾಹನದ ಚಾಲಕ, ಮಂಡ್ಯ ಮೂಲದ ಇದ್ರೀಸ್ ಪಾಷಾ ಹತ್ಯೆ ಪ್ರಕರಣದ ಆರೋಪಿಗಳಾದ ಸಂಘ ಪರಿವಾರದ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಸೇರಿದಂತೆ ಐವರನ್ನು ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

ಎ.5ರಂದು ರಾಜಸ್ತಾನದ ಬನಸ್ವಾರದಲ್ಲಿ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಬಳಿಕ ರಾಮನಗರಕ್ಕೆ ಕರೆತಂದಿದ್ದು, ಸ್ಥಳ ಮಹಜರು ನಡೆಸಿ ಇಂದು ಕನಕಪುರದ ಪ್ರಧಾನ ಸಿವಿಲ್ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. 

ಹೆಚ್ಚಿನ‌ ವಿಚಾರಣೆಗೆ ಆರೋಪಿಗಳನ್ನು 7 ದಿನಗಳ‌ ಕಾಲ ಪೋಲಿಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶಿಸಿದ್ದಾರೆ.

ಪ್ರಕರಣದ ವಿವರ: ಮಾ.31ರಂದು ಕನಕಪುರ ತಾಲೂಕಿನ ಸಾತನೂರು ಪೊಲೀಸ್ ಠಾಣೆ ಬಳಿ ಪುನೀತ್ ಕೆರೆಹಳ್ಳಿ ನೇತೃತ್ವದ ತಂಡಜಾನುವಾರು ಸಾಗಣೆ ಮಾಡುತ್ತಿದ್ದ ವಾಹನವನ್ನು ತಡೆದು ಹಲ್ಲೆ ನಡೆಸಿದ್ದರು. ಇನ್ನೂ, ಎ.1ರಂದು ಬೆಳಿಗ್ಗೆ 8ರ ಸುಮಾರಿಗೆ ಘಟನೆ ನಡೆದ 100 ಮೀಟರ್ ನಷ್ಟು ದೂರದಲ್ಲಿ ಇದ್ರೀಸ್ ಪಾಷಾ ಅವರ ಶವ ಪತ್ತೆಯಾಗಿತ್ತು.

ಪುನೀತ್ ಮತ್ತು ಅವರ ಗೆಳೆಯರು ಹಲ್ಲೆ ನಡೆಸಿ ಇದ್ರೀಸ್ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಇದ್ರೀಸ್ ಪಾಷಾ ಸಂಬಂಧಿ ಯೂನುಸ್ ಪಾಷಾ ಎಂಬುವರು ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 341, 504, 506, 324, 302, 304 ಅಡಿ ಮೂರು ಎಫ್‍ಐಆರ್ ದಾಖಲು ಮಾಡಿದ್ದರು. ಇದಾದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು.

Similar News