ರಾಷ್ಟ್ರದಲ್ಲಿ ಹುಲಿಗಳ ಸಂತತಿ ಧ್ವಿಗುಣ: ಪ್ರಧಾನಿ ಮೋದಿ ಸಂತಸ
ಹುಲಿ ಗಣತಿ ವರದಿ ಬಿಡುಗಡೆ ಮಾಡಿದ ಮೋದಿ
ಮೈಸೂರು,ಎ.9: ವರದಿ ಪ್ರಕಾರ ರಾಷ್ಟ್ರದಲ್ಲಿ ಹುಲಿಗಳ ಸಂತತಿ ದ್ವಿಗುಣಗೊಂಡಿದೆ. 2022 ವರದಿ ಪ್ರಕಾರ ರಾಷ್ಟ್ರದಲ್ಲಿ ಒಟ್ಟು 3167 ಹುಲಿಗಳಿವೆ. ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದರು.
ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಸಭಾಂಗಣದಲ್ಲಿ ರವಿವಾರ ಅರಣ್ಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಹುಲಿ ಯೋಜನೆಯ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
2006ರಲ್ಲಿ 1411, 2010ರಲ್ಲಿ 1706, 2014ರಲ್ಲಿ 2226, 2018ರಲ್ಲಿ 2967 ಇದೀಗ 2022ರ ವರದಿ ಪ್ರಕಾರ 3167 ಹುಲಿಗಳಿವೆ. ಯೋಜನೆಯು 50 ವರ್ಷ ಪೂರೈಸಿರುವು ಸಂದರ್ಭದಲ್ಲಿ ಹುಲಿಗಳ ಸಂಖ್ಯೆ ದ್ವಿಗುಣ ಗೊಂಡಿರುವುದು ಇಡೀ ವಿಶ್ವವೇ ಹೆಮ್ಮ ಪಡುಂತ ವಿಚಾರ ಎಂದು ಹೇಳಿದರು.
ಬಂಡೀಪುರವು ಸೇರಿ ದೇಶದ ಒಟ್ಟು 9 ಪ್ರದೇಶಗಳಲ್ಲಿ ಹುಲಿ ಸಂರಕ್ಷಣಾ ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಐವತ್ತು ವರ್ಷಗಳಲ್ಲಿ ದೇಶದಲ್ಲಿ ಹುಲಿ ಸಂರಕ್ಷಣೆಗಾಗಿ ಮೀಸಲಿರಿಸಿದ ಕಾಡುಗಳ ಸಂಖ್ಯೆ 50ಕ್ಕೆ ಹೆಚ್ಚಿದೆ. 35 ಹುಲಿ ಸಂರಕ್ಷಿತ ಪ್ರದೇಶಗಳಿಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮಾನ್ಯತೆ ನೀಡಿದೆ. ವಿಶ್ವದ ಹುಲಿಗಳ ಜನಸಂಖ್ಯೆಯ ಶೇ 75ರಷ್ಟು ಭಾರತದಲ್ಲೇ ಇರುವುದು ವಿಶೇಷ ಎಂದರು.
ಹುಲಿಗಳು ಹೆಚ್ಚಲು ದೇಶದ ಎಲ್ಲರೂ ಕಾರಣರು. ಬೇರೆ ದೇಶಗಳಲ್ಲಿ ವನ್ಯಜೀವಿಗಳು ಕಡಿಮೆಯಾಗುತ್ತಿರುವಾಗ ದೇಶದಲ್ಲಿ ಯಾಕೆ ಹೆಚ್ಚಾಗುತ್ತಿವೆ ಎಂದರೆ, ಇಲ್ಲಿನ ಸಂಸ್ಕೃತಿ, ಪರಂಪರೆ ಮತ್ತು ಸಮಾಜದಲ್ಲಿರುವ ಜೈವಿಕ ವೈವಿಧ್ಯತೆಯ ಕಡೆಗಿನ ಕಾಳಜಿಯೇ ಕಾರಣ. ಪರಿಸರ ಮತ್ತು ಆರ್ಥಿಕತೆಯ ನಡುವೆ ನಮ್ಮಲ್ಲಿ ಗೊಂದಗಳಿಲ್ಲ. ಎರಡಕ್ಕೂ ಸಮಾನ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.
ಹುಲಿಗಳ ಕುರಿತು ದೇಶದಲ್ಲಿ ಸಾವಿರಾರು ವರ್ಷಗಳ ಇತಿಹಾಸವಿದೆ. ಮಧ್ಯಪ್ರದೇಶದಲ್ಲಿ ಸಾವಿರಾರು ವರ್ಷಗಳ ಹಳೆಯ ಶಿಲಾ ಚಿತ್ರಕಲೆಯಲ್ಲಿ ಹುಲಿಯ ಚಿತ್ರಗಳಿವೆ. ಭಾರ್ಯಾ ಮತ್ತು ಮಹಾರಾಷ್ಟ್ರದಲ್ಲಿರುವ ವರ್ಲಿಯಂಥ ಹಲವು ಸಮುದಾಯಗಳು ಹುಲಿಯನ್ನು ಪೂಜಿಸುತ್ತವೆ. ಅನೇಕ ಜನ ಸಮುದಾಯಗಳು ಬಂಧುವೆಂದು ಭಾವಿಸುತ್ತವೆ. ಹುಲಿಯು ದುರ್ಗಾ ಮತ್ತು ಅಯ್ಯಪ್ಪ ದೇವರ ವಾಹನವಾಗಿದೆ. ದೇಶದಲ್ಲಿ ಪ್ರಕೃತಿ ಸಂರಕ್ಷಣೆ ಎಂಬುದು ಸಂಸ್ಕೃತಿಯ ಒಂದು ಭಾಗವೇ ಆಗಿದೆ. ಇದೇ ಕಾರಣಕ್ಕೆ, ವನ್ಯಜೀವಿ ಸಂರಕ್ಷಣೆಯಲ್ಲಿ ದೇಶ ಹಲವು ಸಾಧನೆಗಳನ್ನು ಮಾಡಿದೆಎಂದು ಹೇಳಿದರು.
ಇಡೀ ವಿಶ್ವದಲ್ಲೇ ದೇಶವು ಅತಿ ದೊಡ್ಡ ಹುಲಿ ಸಂರಕ್ಷಣಾ ಪ್ರದೇಶವನ್ನು ಒಳಗೊಂಡಿದೆ. 30 ಸಾವಿರ ಆನೆಗಳಿವೆ. 3ಸಾವಿರ ಘೇಂಡಾಮೃಗಗಳಿದ್ದು, ಈ ಪ್ರಾಣಿಗಳ ಅತಿ ದೊಡ್ಡ ಸಂರಕ್ಷಣಾ ಪ್ರದೇಶವೂ ನಮ್ಮ ದೇಶದಲ್ಲೇ ಇದೆ. 2015ರಲ್ಲಿ ದೇಶದಲ್ಲಿ 525ರಷ್ಟಿದ್ದ ಸಿಂಹಗಳು 2020ರಲ್ಲಿ 675 ಇದ್ದವು. ಚಿರತೆಗಳು ಶೇ 60ರಷ್ಟು ಹೆಚ್ಚಾಗಿವೆ ಎಂದು ಮಾಹಿತಿ ನೀಡಿದರು.
ಇವೆಲ್ಲವೂ ಜನರ ಸಹಭಾಗಿತ್ವ ಮತ್ತು ಸಂರಕ್ಷಣೆಯ ಸಂಸ್ಕೃತಿಯಿಂದ ಸಾಧ್ಯವಾಗಿದೆ. ಇದು ಎಲ್ಲರ ಪ್ರಯತ್ನ. ಪ್ರಕೃತಿ ಸಂರಕ್ಷಣೆಗೆ ಇದು ಅತ್ಯಗತ್ಯ. ಇದು ಸದ್ಯದ ತುರ್ತು ಕೂಡ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊತ್ತಿನಲ್ಲಿ ಅರಣ್ಯ ಪ್ರದೇಶ ಮತ್ತು ಮರಗಳೂ ಹೆಚ್ಚಿದೆ. 75 ಜೌಗು ಪ್ರದೇಶಗಳನ್ನು ಅಭಿವೃದ್ಧಿಗಾಗಿ ಗುರುತಿಸಲಾಗಿದೆ. ಮೊದಲಿಗೆ ಕೇವಲ 11 ಪ್ರದೇಶಗಳನ್ನಷ್ಟೇ ಗುರುತಿಸಲಾಗಿತ್ತು. ಒಂದು ದಶಕದ ಅವಧಿಯಲ್ಲಿ ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾರಣ್ಯಗಳ ಸಂಖ್ಯೆ 9ರಿಂದ 468ಕ್ಕೇರಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ, ಹುಲಿಯ ಚಿತ್ರವುಳ್ಳ ಫಲಕವನ್ನು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಪ್ರಧಾನಿಗೆ ನೀಡಿದರು. ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಖಾತೆಯ ರಾಜ್ಯ ಸಚಿವ ಅಶ್ವಿನಿಕುಮಾರ್ ಚೌಬೆ ಉಪಸ್ಥಿತರಿದ್ದರು.