ಧಾರವಾಡ ಐಐಟಿ ಕ್ಯಾಂಪಸ್‌ ಉದ್ಘಾಟನೆಯ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದಿಂದ ರೂ. 9.49 ಕೋಟಿ ವೆಚ್ಚ

RTI ಮಾಹಿತಿಯಿಂದ ಬಹಿರಂಗ

Update: 2023-04-10 10:42 GMT

ಬೆಂಗಳೂರು: ಈ ವರ್ಷದ ಮಾರ್ಚ್‌ 12 ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಐಐಟಿ-ಧಾರವಾಡದ ಹೊಸ ಕ್ಯಾಂಪಸ್‌ (IIT Dharwad Campus) ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿವಿಧ ಕಾರ್ಯಗಳಿಗಾಗಿ ರಾಜ್ಯದ ಬಿಜೆಪಿ ಸರ್ಕಾರ ಒಟ್ಟು ರೂ 9.49 ಕೋಟಿ ಖರ್ಚು ಮಾಡಿತ್ತು ಎಂದು ಆರ್ಟಿಐ (RTI) ಮಾಹಿತಿಯಿಂದ ತಿಳಿದು ಬಂದಿದೆ ಎಂದು thewire.in ವರದಿ ಮಾಡಿತ್ತು.

ಕಾರ್ಯಕ್ರಮಕ್ಕೆ ಜನರನ್ನು ಕರೆತರಲು, ವೇದಿಕೆ ನಿರ್ಮಾಣಕ್ಕೆ, ಪ್ರಚಾರ ಕಾರ್ಯಗಳು ಮತ್ತಿತರ ಕೆಲಸಗಳಿಗೆ ಈ ಹಣ ವೆಚ್ಚವಾಗಿತ್ತು.

ಧಾರವಾಡ ಐಐಟಿ ಕ್ಯಾಂಪಸ್‌ ಉದ್ಘಾಟನೆ ಮಾತ್ರವಲ್ಲದೆ ಪ್ರಧಾನಿ ನರೇಂದ್ರ ಮೋದಿ ಈ ಸಂದರ್ಭ ಹಲವು ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದ್ದರು.

ಕಾರ್ಯಕ್ರಮದಲ್ಲಿ 2 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದರು ಹಾಗೂ ಅವರಲ್ಲಿ ಹೆಚ್ಚಿನವರಿಗೆ ಆಹಾರ ಮತ್ತು ಸಂಚಾರ ಸೌಲಭ್ಯ ಒದಗಿಸಲಾಗಿತ್ತು. ಪ್ರಧಾನಿ ಹೊರತಾಗಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜೆಡಿಎಸ್‌ ನಾಯಕ ಗುರುರಾಜ್‌ ಹುನ್ಸಹಿಮರದ್‌ ಅವರು ಕೇಳಿದ ಆರ್ಟಿಐ ಪ್ರಶ್ನೆಗೆ ಹುಬ್ಬಳ್ಳಿ-ಧಾರವಾಡ ಜಿಲ್ಲಾಡಳಿತ ಮಾಹಿತಿ ನೀಡಿತ್ತು. ಇದರನ್ವಯ ರೂ. 2.83 ಕೋಟಿಯನ್ನು ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಸಾರಿಗೆ ಸೌಲಭ್ಯ ಒದಗಿಸಲು, ರೂ. 86 ಲಕ್ಷ ಊಟ ಒದಗಿಸಲು, ರೂ. 40  ಲಕ್ಷ ಧ್ವನಿಬೆಳಕಿನ ವ್ಯವಸ್ಥೆ ಹಾಗೂ ಸಿಸಿಟಿವಿಗಳಿಗೆ ಬಳಸಲಾಗಿದ್ದರೆ, ಜರ್ಮನ್‌ ಟೆಂಟ್‌, ವೇದಿಕೆ, ಗ್ರೀನ್‌ ರೂಂ. ಬ್ಯಾರಿಕೇಡ್‌ಗಳಿಗೆ ರೂ. 4.68 ಕೋಟಿ ವೆಚ್ಚ ಮಾಡಲಾಗಿತ್ತು. ಕಾರ್ಯಕ್ರಮದ ಬ್ರ್ಯಾಂಡಿಂಗ್‌ಗಾಗಿ ರೂ. 61 ಲಕ್ಷ ವೆಚ್ಚ ಮಾಡಲಾಗಿತ್ತು ಎಂದು RTI ಉತ್ತರದಿಂದ ತಿಳಿದು ಬಂದಿದೆ.

ಸದ್ಯದಲ್ಲಿಯೇ ಚುನಾವಣೆ ನಡೆಯಲಿರುವ ರಾಜ್ಯಕ್ಕೆ ಪ್ರಧಾನಿ ಆಗಾಗ  ಭೇಟಿ ನೀಡುತ್ತಿರುವುದು ಹಾಗೂ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಸರಕಾರಿ ವೆಚ್ಚದಲ್ಲಿ ನಡೆದ ಈ ಭೇಟಿಗಳಲ್ಲಿ ಅಧಿಕೃತ ಕಾರ್ಯಕ್ರಮಗಳು ಪಕ್ಷದ ಪ್ರಚಾರ ಕಾರ್ಯಕ್ರಮಗಳಂತೆ ಕಾಣುತ್ತಿರುವ ಕುರಿತು ವಿಪಕ್ಷಗಳು ಟೀಕೆ ವ್ಯಕ್ತಪಡಿಸುತ್ತಿರುವ ನಡುವೆ ಈ ಆರ್ಟಿಐ ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ: ಸೋನಿಪತ್‌: ಮಸೀದಿಯಲ್ಲಿ ದಾಂಧಲೆಗೈದು ಪ್ರಾರ್ಥನಾ ನಿರತರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ಗುಂಪು

Similar News