ಜಗದೀಶ್ ಶೆಟ್ಟರ್ ಗೂ ಇಲ್ಲ ಟಿಕೆಟ್?: ವರಿಷ್ಠರ ಮಾತಿನಿಂದ ನೋವಾಗಿದೆ ಎಂದ ಮಾಜಿ ಸಿಎಂ
ಹುಬ್ಬಳ್ಳಿ, ಎ. 11: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬೇರೆಯವರಿಗೆ ತಮ್ಮ ಕ್ಷೇತ್ರವನ್ನು ಬಿಟ್ಟು ಕೊಡುವಂತೆ ಸೂಚಿಸಿರುವ ಬಿಜೆಪಿ ಹೈಕಮಾಂಡ್ ನಡೆಯಿಂದ ನನ್ನ ಮನಸ್ಸಿಗೆ ನೋವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಸಮಾಧಾನ ಹೊರಹಾಕಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್‍ನಿಂದ ನನಗೆ ಬೆಳಗ್ಗೆ ದೂರವಾಣಿ ಕರೆ ಬಂತು. ನೀವು ಹಿರಿಯರಿದ್ದೀರಿ, ನಿಮ್ಮ ಕ್ಷೇತ್ರವನ್ನು ಬೇರೆಯವರಿಗೆ ಬಿಟ್ಟುಕೊಡುವಂತೆ ಹೇಳಿದರು. ಉತ್ತರ ಕರ್ನಾಟಕ ಭಾಗದಲ್ಲಿ 30 ವರ್ಷಗಳಿಂದ ಪಕ್ಷವನ್ನು ಕಟ್ಟುವ ಕೆಲಸ ಮಾಡಿದ್ದೇನೆ. ನನ್ನಂತಹ ಹಿರಿಯರಿಗೆ ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದೇನೆ ಎಂದರು.
ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ಸಚಿವನಾಗಿ ಕೆಲಸ ಮಾಡಿದ್ದೇನೆ. ನಿನ್ನೆಯವರೆಗೆ ನನಗೆ ಟಿಕೆಟ್ ಖಚಿತ ಎಂದು ಹೇಳಲಾಗುತ್ತಿತ್ತು. ಇವತ್ತು ಬೆಳಗ್ಗೆ ಕರೆ ಮಾಡಿ ಬೇರೆಯವರಿಗೆ ಅವಕಾಶ ಮಾಡಿ ಕೊಡಿ ಎಂದರೆ ಮನಸ್ಸಿಗೆ ನೋವು ಆಗುವುದಿಲ್ಲವೇ ಎಂದು ಅವರು ಪ್ರಶ್ನಿಸಿದರು.
ಆರು ಬಾರಿ ಗೆದ್ದಿದ್ದೇನೆ. ನೂರಾರು ಜನರಿಗೆ ಟಿಕೆಟ್ ಕೊಡಿಸಿದ್ದೇನೆ. ಈಗ ನನಗೆ ಟಿಕೆಟ್ ನೀಡದಿರಲು ಕಾರಣವೇನು?, ಸಮೀಕ್ಷೆಗಳೆಲ್ಲವೂ ನನ್ನ ಪರವಾಗಿಯೆ ಇದೆ. ಕ್ಷೇತ್ರದ ಶೇ.70ರಷ್ಟು ಜನರು ನನ್ನ ಪರವಾಗಿ ಒಲವು ಹೊಂದಿದ್ದಾರೆ. ರಾಜಕಾರಣದಲ್ಲಿ ಒಂದೆ ಒಂದು ಕಪ್ಪು ಚುಕ್ಕೆ ಇಲ್ಲ, ಭ್ರಷ್ಟಾಚಾರದ ಆಪಾದನೆ ಇಲ್ಲದಂತೆ 30 ವರ್ಷ ರಾಜಕಾರಣ ಮಾಡಿದ್ದೇನೆ ಎಂದು ಅವರು ಹೇಳಿದರು.
ನನಗೆ ಬೇರೆ ಅವಕಾಶ ಕೊಡುವುದಾಗಿ ಹೇಳಿದ್ದಾರೆ. ಅಂತಹ ಪರಿಸ್ಥಿತಿ ಇದ್ದಿದ್ದರೆ ಎರಡು, ಮೂರು ತಿಂಗಳ ಮುಂಚಿತವಾಗಿಯೆ ನನ್ನನ್ನು ಕರೆದು ಚರ್ಚಿಸಬೇಕಿತ್ತು. ನಾಮಪತ್ರ ಸಲ್ಲಿಸಲು ಎರಡು, ಮೂರು ದಿನ ಇರುವಾಗ ವರಿಷ್ಠರು ರೀತಿ ನಡೆದುಕೊಂಡರೆ ಏನು ಹೇಳಬೇಕು ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಈಶ್ವರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿರುವುದಕ್ಕೂ ನನ್ನ ನಿಲುವಿನಲ್ಲೂ ಸಾಕಷ್ಟು ವ್ಯತ್ಯಾಸ ಇದೆ. ನನ್ನಲ್ಲಿ ಇನ್ನು 10-15 ವರ್ಷ ಸಕ್ರಿಯ ರಾಜಕಾರಣ ಮಾಡುವ ಶಕ್ತಿಯಿದೆ. ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ ನಾನು ಮತ್ತೆ ಸ್ಪರ್ಧಿಸುತ್ತೇನೆ. ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದು ತೋರಿಸುತ್ತೇನೆ ಎಂದು ಜಗದೀಶ್ ಶೆಟ್ಟರ್ ಸವಾಲು ಹಾಕಿದರು.