×
Ad

ಸಂತೋಷ್ ಆಟಕ್ಕೆ ಬಿಎಸ್ ವೈ ಬಲಿ, ಪ್ರಹ್ಲಾದ್ ಜೋಷಿ ಆಟಕ್ಕೆ ಶೆಟ್ಟರ್ ಬಲಿ: ಕಾಂಗ್ರೆಸ್ ಟೀಕೆ

''ಮಾಜಿ ಸಿಎಂ ಒಬ್ಬರಿಗೆ ಟಿಕೆಟ್ ನಿರಾಕರಿಸುವಂತಹ ಅವಮಾನ ಇನ್ನೊಂದಿಲ್ಲ''

Update: 2023-04-11 20:10 IST

ಬೆಂಗಳೂರು, ಎ. 11: 'ಸಂತೋಷ್ ಆಟಕ್ಕೆ ಯಡಿಯೂರಪ್ಪ ಬಲಿ. ಪ್ರಹ್ಲಾದ್ ಜೋಷಿ ಆಟಕ್ಕೆ ಜಗದೀಶ್ ಶೆಟ್ಟರ್ ಬಲಿ. ನಾಗಪುರದ ಕರುಳುಬಳ್ಳಿಯ ಸಂಬಂಧವನ್ನೇ ಬಳಸಿ ಬಿಜೆಪಿಯಲ್ಲಿ ಪ್ರಾಭಲ್ಯ ಸಾಧಿಸಿರುವ ಪ್ರಹ್ಲಾದ್ ಜೋಶಿ ಲಿಂಗಾಯತ ನಾಯಕರನ್ನು ಹೊಂಡಕ್ಕೆ ಕೆಡವುದರಲ್ಲಿ ಯಶಸ್ವಿಯಾಗಿದ್ದಾರೆ. ಮಾಜಿ ಸಿಎಂ ಒಬ್ಬರಿಗೆ ಟಿಕೆಟ್ ನಿರಾಕರಿಸುವಂತಹ ಅವಮಾನ ಇನ್ನೊಂದಿಲ್ಲ' ಎಂದು ಕಾಂಗ್ರೆಸ್ ಟೀಕಿಸಿದೆ. 

ಮಂಗಳವಾರ ಸರಣಿ ಟ್ವೀಟ್ ಮಾಡಿದ ಕಾಂಗ್ರೆಸ್, 'ಬಿಎಸ್ ವೈ ಈಶ್ವರಪ್ಪ, ಜಗದೀಶ್ ಶೆಟ್ಟರ್.. ಬಿಜೆಪಿ ಎಂಬ ಕಳೆಗೆ ನೀರು ಗೊಬ್ಬರ ಹಾಕಿ ಬೆಳೆಸಿದ ನಾಯಕರನ್ನು ಅಗೌರವದ ನಿರ್ಗಮನ ದಾರಿ ತೋರಿಸಿದೆ ಬಿಜೆಪಿ. "ನಾವೇ ಎಲ್ಲ" ಎನ್ನುತ್ತಿದ್ದವರಿಗೆ "ನೀವೇನೂ ಅಲ್ಲ" ಎನ್ನುತ್ತಿದೆ ಮೊ-ಶಾ ಜೋಡಿ. ಗೊಡ್ಡು ಹಸುಗಳನ್ನು ಗೋಶಾಲೆಗಾದರೂ ಬಿಡಬಹುದಿತ್ತು, ಆದರೆ ನೇರ ಕಸಾಯಿಖಾನೆಗೇ ಕಳಿಸುತ್ತಿರುವುದು ದುರಂತ' ಎಂದು ಕುಟುಕಿದೆ. 

‘ಬಿಜೆಪಿ ಯಡಿಯೂರಪ್ಪ ಕಣ್ತಪ್ಪಿಸಿ, ದಿಕ್ಕು ತಪ್ಪಿಸಿ ಮೀಟಿಂಗ್ ಮಾಡ್ತಿರೋದೇಕೆ? ಅವರಿಗೆ ಕೇಂದ್ರೀಯ ಸಂಸದೀಯ ಮಂಡಳಿಯ ಸ್ಥಾನ ನೀಡಿದ್ದು ನಾಮಕಾವಸ್ಥೆಗೆ ಮಾತ್ರವೇ? ಬಿಎಸ್‍ವೈಗಿಂತ ಸಿ.ಟಿ.ರವಿ, ಸಂತೋಷ್, ಪ್ರಹ್ಲಾದ್ ಜೋಷಿಯೇ ಮುಖ್ಯವಾದರೆ?. ಬಿಎಸ್‍ವೈಗೆ ಕವಡೆ ಕಾಸಿನ ಕಿಮ್ಮತ್ತಿಲ್ಲವೇ? ಇಂತಹ ದಯನೀಯ ಸ್ಥಿತಿ ಬಿಎಸ್‍ವೈ ಅವರಿಗೆ ಬರಬಾರದಿತ್ತು!’ ಎಂದು ಕಾಂಗ್ರೆಸ್ ಟೀಕಿಸಿದೆ.

‘ದಿಲ್ಲಿಗೆ ಹೋಗಿದ್ದ ಬಿಎಸ್‍ವೈ ಅವರಂತಹ ಹಿರಿಯ ನಾಯಕರನ್ನು ದಿಕ್ಕು ತಪ್ಪಿಸಿ, ಅಲ್ಲಿ ಇಲ್ಲಿ ಅಲೆಸಿ ಅವರನ್ನು ಹೊರಗಿಟ್ಟು ಸಭೆ ನಡೆಸಿದ್ದರ ಹಿಂದಿನ ಕೈವಾಡ ಯಾರದ್ದು? ಅಮಿತ್ ಶಾರದ್ದೋ, ಪ್ರಹ್ಲಾದ್ ಜೋಷಿಯದ್ದೋ, ಬಿ.ಎಲ್.ಸಂತೋಷರದ್ದೋ, ಬೊಮ್ಮಾಯಿಯವರದ್ದೋ? ಮತಕ್ಕಾಗಿ ಮುಖ ತೋರಿಸಲು ಬೇಕಾದ ಬಿಎಸ್‍ವೈ ಟಿಕೆಟ್ ನಿರ್ಧಾರಕ್ಕೆ ಬೇಡವಾದರೆ?’ ಎಂದು ಪ್ರಶ್ನಿಸಿದೆ.

‘ಬಿಎಸ್‍ವೈ ಇರಬೇಕಾದ ಜಾಗದಲ್ಲಿ ಪ್ರಯತ್ನಪೂರ್ವಕವಾಗಿ ಪ್ರಹ್ಲಾದ್ ಜೋಷಿಯನ್ನು ತಂದು ಕೂರಿಸುತ್ತಿದೆ ಬಿಜೆಪಿ. ಟಿಕೆಟ್ ಹಂಚಿಕೆಯ ಸಭೆಯಲ್ಲಿ ಬಿಎಸ್ ವೈ ಅವರ ಮಾತಿಗೆ ಮನ್ನಣೆ ಕೊಡುವುದಿರಲಿ ಕನಿಷ್ಠ ಹಾಜರಿಗೂ ಅವಕಾಶ ಕೊಡಲಿಲ್ಲ. ಬಿಎಸ್‍ವೈರಿಗೆ ನಿರಂತರ ಅವಮಾನ ಮಾಡಿದ ಬಿಜೆಪಿ ಅವರನ್ನು ಡಸ್ಟ್‍ಬಿನ್‍ನಲ್ಲಿ ಬಿದ್ದಿರುವ ಕಸದಂತೆ ನಡೆಸಿಕೊಳ್ಳುತ್ತಿದೆ’ ಎಂದು ಕಾಂಗ್ರೆಸ್ ಹೇಳಿದೆ.

‘ಬಿಜೆಪಿಗೆ ಯಡಿಯೂರಪ್ಪ ಬೇಕಿರುವುದು ಓಟು ಗಳಿಕೆಗೆ ಮುಖ ತೋರಿಸಲು ಮಾತ್ರ! ಟಿಕೆಟ್ ಹಂಚಿಕೆಯ ಸಭೆಗೆ ಮಾತ್ರ ಬಿಎಸ್‍ವೈ ಹೊರಗೆ, ಪ್ರಹ್ಲಾದ್ ಜೋಶಿ, ಬಿ.ಎಲ್.ಸಂತೋಷ್, ಸಿ.ಟಿ.ರವಿ, ಕಟೀಲು ಒಳಗೆ! ಬಿಎಸ್‍ವೈ ಅವರಿಗೆ ಈಗ ಮಾರ್ಗದರ್ಶಕ ಮಂಡಳಿಯೂ ಇಲ್ಲ, ಬಿಜೆಪಿಗೆ ಮಾರ್ಗದರ್ಶನ ಬೇಕಿಲ್ಲ. ಬಿಎಸ್‍ವೈರ ರಾಜಕೀಯ ಬದುಕಿಗೆ ದುರಂತ ಅಂತ್ಯ ತೋರಿಸುತ್ತಿದೆ ಬಿಜೆಪಿ’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

‘ಬಿಎಸ್‍ವೈ ಅವರನ್ನೇ ಹೊರಗಿಟ್ಟು ಇತರೇ ರಾಜ್ಯ ನಾಯಕರೊಂದಿಗೆ ಸಭೆ ನಡೆಸಿದ್ದು ಲಿಂಗಾಯತ ಸಮುದಾಯದ ಹಿರಿಯ ನಾಯಕನಿಗೆ ಮಾಡಿದ ಘೋರ ಅವಮಾನ. ಕರ್ನಾಟಕದಲ್ಲಿ ಬಿಜೆಪಿ ಕಟ್ಟಿದ ಃSಙ ಅವರಿಗೆ ಸಭೆಯಲ್ಲಿ ಕುರ್ಚಿ ಇರಲಿಲ್ಲವೇ?. ಟಿಕೆಟ್ ನಿರ್ಧರಿಸುವ ಸ್ವತಂತ್ರವಿಲ್ಲವೇ?. ಬಿಎಸ್‍ವೈ ಅವರು ಬಿಜೆಪಿ ಬಳಸಿ ಬಿಸಾಡುವ ಟಿಶ್ಯೂ ಪೇಪರ್ ಆಗಿದ್ದಾರೆ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

‘ಬಸವರಾಜ ಬೊಮ್ಮಾಯಿ ಅವರು ವರ್ಷ ಪೂರ್ತಿ ದಿಲ್ಲಿಗೆ ಅಲೆದರೂ ಸಂಪುಟ ರಚನೆಗೆ ಅನುಮತಿ ದೊರಕಲಿಲ್ಲ. ಈಗ ಮೂರು ದಿನ ಸಭೆ ನಡೆಸಿದರೂ ಒಂದೇ ಒಂದು ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಮಾಡಲಾಗಲಿಲ್ಲ. ಇದಕ್ಕೇ ಅಲ್ಲವೇ ನಾವು ‘ಪೂಪೆಟ್ ಸಿಎಂ’ ಎನ್ನುವುದು! ಇಂತಹ ಆರೆಸೆಸ್ಸ್ ಕೈಗೊಂಬೆಯಾಗಿರುವ ಬಿಜೆಪಿ ಪಕ್ಷದಿಂದ ಕರ್ನಾಟಕದ ಹಿತ ಕಾಯಲು ಸಾಧ್ಯವೇ?’

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Similar News