ಬಿಜೆಪಿಗೆ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದೇನೆ: ಲಕ್ಷ್ಮಣ್ ಸವದಿ
ಅಥಣಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ
Update: 2023-04-12 10:26 IST
ಬೆಳಗಾವಿ: ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದೇನೆ ಎಂದು ಮಾಜಿ ಡಿಸಿಎಂ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ್ ಸವದಿ ಬುಧವಾರ ಘೋಷಣೆ ಮಾಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 'ಅಥಣಿ ಕ್ಷೇತ್ರದ ಜನರೇ ನನ್ನ ಹೈಕಮಾಂಡ್. ಕ್ಷೇತ್ರದ ಜನರ ರಕ್ಷಣೆ ಮಾಡುವುದು ನನ್ನ ಜವಾಬ್ದಾರಿ. ಅಭಿಮಾನಿಗಳೊಂದಿಗೆ ಚರ್ಚೆ ಮಾಡಿ ನಾಳೆ ಸಂಜೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ' ಎಂದು ಹೇಳಿದರು.
ಮಂಗಳವಾರ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಅಥಣಿಯಲ್ಲಿ ಲಕ್ಷ್ಮಣ್ ಸವದಿಗೆ ಟಿಕೆಟ್ ನಿರಾಕರಿಸಲಾಗಿದೆ. ಬದಲಾಗಿ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಿದೆ. ಇದರಿಂದ ಅಸಮಾಧಾನಗೊಂಡಿರುವ ಸವದಿ ಬಿಜೆಪಿ ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ.