ಬೆಳಗಾವಿ ಉತ್ತರ: ಜಾತ್ರೆಗಳಲ್ಲಿ ಆರ್ಥಿಕ ನಿರ್ಬಂಧ ವಿರೋಧಿಸಿದ್ದ ಅನಿಲ್ ಬೆನಕೆಗೆ ಕೈ ತಪ್ಪಿದ ಬಿಜೆಪಿ ಟಿಕೆಟ್
ಅಭಿಮಾನಿಗಳಿಂದ ಪ್ರತಿಭಟನೆ, ಬಿಜೆಪಿ ವಿರುದ್ಧ ಆಕ್ರೋಶ
ಬೆಳಗಾವಿ: ಜಾತ್ರೆಗಳಲ್ಲಿ ಆರ್ಥಿಕ ನಿರ್ಬಂಧ ವಿರೋಧಿಸಿದ್ದ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆಗೆ ಬಿಜೆಪಿಯಿಂದ ಟಿಕೆಟ್ ನಿರಾಕರಿಸಲಾಗಿದೆ.
ಇಲ್ಲಿ ಅನಿಲ್ ಬೆನಕೆ ಬದಲಿಗೆ, ಡಾ.ರವಿ ಪಾಟೀಲ್ ಅವರಿಗೆ ಟಿಕೆಟ್ ನೀಡಲಾಗಿದ್ದು, ಇದರಿಂದ ತೀವ್ರ ಆಕ್ರೋಶಗೊಂಡಿರುವ ಬೆನಕೆ ಅಭಿಮಾನಿಗಳು ಇಲ್ಲಿನ ರಾಣಿ ಚನ್ನಮ್ಮನ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಇನ್ನು ಅನಿಲ್ ಬೆನಕೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರೂ ಬಿಜೆಪಿ ಹೈಕಮಾಂಡ್ ಅವರಿಗೆ ಟಿಕೆಟ್ ನೀಡದಿರುವುದು ಸರಿಯಲ್ಲ ಎಂದು ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು.
ಆರ್ಥಿಕ ನಿರ್ಬಂಧ ವಿರೋಧಿಸಿದ್ದ ಬೆನಕೆ:
ರಾಜ್ಯದಲ್ಲಿ ಈ ಹಿಂದೆ ಜಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ಹೇರುವ ಸಂಘರಿವಾರದ ನಡೆಯನ್ನು ಶಾಸಕ ಅನಿಲ್ ಬೆನಕೆ ವಿರೋಧಿಸಿದ್ದರು.
ಶಾಸಕ ಅನಿಲ್ ಬೆನಕೆ ಅವರು ನೀಡಿದ್ದ ಹೇಳಿಕೆ ಏನು?
''ಜಾತ್ರೆಗಳಲ್ಲಿ ಇತರ ಧರ್ಮೀಯ ವ್ಯಾಪಾರಸ್ಥರಿಗೆ ಆರ್ಥಿಕ ನಿರ್ಬಂಧ ಹೇರಲು ನಾವು ಅವಕಾಶ ಕೊಡುವುದಿಲ್ಲ. ವ್ಯಾಪಾರಕ್ಕೆ ನಿರ್ಬಂಧ ಹೇರುವುದು ಸಂವಿಧಾನ ವಿರೋಧಿಯಾಗಿದೆ''
''ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ಹಾಕುವ ಪ್ರಶ್ನೆ ಬರುವುದಿಲ್ಲ. ಇತರ ಧರ್ಮೀಯರ ವ್ಯಾಪಾರಕ್ಕೆ ನಿರ್ಬಂಧ ಹೇರುವುದು ಸಂವಿಧಾನ ವಿರೋಧಿಯಾಗಿದ್ದು, ನಾವು ಕೂಡ ನಿರ್ಬಂಧ ಹಾಕುವುದಿಲ್ಲ. ಜನರು ನಿರ್ಬಂಧ ಹಾಕಿದರೆ ನಮಗೆ ಏನೂ ಹೇಳಲು ಆಗಲ್ಲ''
''ಜನರು ಅಲ್ಲೇ ಖರೀದಿ ಮಾಡಬೇಕು, ಇಲ್ಲೇ ಮಾಡಬೇಕು ಅನ್ನೋದು ತಪ್ಪು. ಎಲ್ಲರಿಗೂ ಅವರಿಗೆ ಬೇಕಾದಲ್ಲಿ ವ್ಯವಹಾರ ಮಾಡಲು ಅವಕಾಶವಿದೆ. ಎಲ್ಲಿಂದ ಏನೂ ಖರೀದಿ ಮಾಡಬೇಕು ಎಂದು ಜನರು ತೀರ್ಮಾನ ಮಾಡಬೇಕು'' ಎಂದು ಅನಿಲ್ ಬೆನಕೆ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ಜಾತ್ರೆಗಳಲ್ಲಿ ಇತರ ಧರ್ಮೀಯರಿಗೆ ವ್ಯಾಪಾರಕ್ಕೆ ನಿರ್ಬಂಧ ಸಂವಿಧಾನ ವಿರೋಧಿ: ಬಿಜೆಪಿ ಶಾಸಕ ಅನಿಲ್ ಬೆನಕೆ