×
Ad

ಸುಳ್ಯದಲ್ಲಿ ದಲಿತ ಮಹಿಳೆಗೆ ಟಿಕೆಟ್:‌ ಬಿಜೆಪಿಯ ದಲಿತೋದ್ಧಾರ ಎಂದ ನಳಿನ್‌ ಕುಮಾರ್‌ ಕಟೀಲ್‌

►ನೆಟ್ಟಿಗರಿಂದ ತರಾಟೆ

Update: 2023-04-12 19:05 IST

ಬೆಂಗಳೂರು: ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ದಲಿತ ಮಹಿಳೆ ಭಾಗೀರಥಿ ಮುರುಳ್ಯ ಅವರಿಗೆ ಟಿಕೆಟ್‌ ನೀಡಿರುವುದನ್ನು ಉಲ್ಲೇಖಿಸಿ ಬಿಜೆಪಿ (BJP) ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ (Nalin Kumar Kateel) ಮಾಡಿರುವ ಟ್ವೀಟ್‌ ವ್ಯಾಪಕ ಟ್ರೋಲ್‌ಗೆ ಗುರಿಯಾಗಿದೆ. 

“ದಲಿತೋದ್ಧಾರ ಎಂಬುದು ಬಿಜೆಪಿಗೆ ಭಾಷಣದ ಸರಕಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ, ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ ಆದಿದ್ರಾವಿಡ ಸಮುದಾಯದ ಓರ್ವ ಮಹಿಳೆ, ಮಹಿಳಾ ಮೋರ್ಚಾದ ಸಾಮಾನ್ಯ ಕಾರ್ಯಕರ್ತೆ 'ಭಾಗೀರತಿ ಮರುಲ್ಯ'ರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಈ ಎಲ್ಲವೂ ಬಿಜೆಪಿಯಲ್ಲಿ ಮಾತ್ರ ಸಾಧ್ಯ!” ಎಂದು ನಳಿನ್‌ ಕುಮಾರ್‌ ಕಟೀಲ್‌ ಟ್ವೀಟ್‌ ಮಾಡಿದ್ದಾರೆ.

ಇದು ವ್ಯಾಪಕ ಟ್ರೋಲ್ ಗುರಿಯಾಗಿದ್ದು, ಮೀಸಲು ಕ್ಷೇತ್ರದಲ್ಲಿ ದಲಿತರಿಗಲ್ಲದೆ ಸಾಮಾನ್ಯರಿಗೆ ಟಿಕೆಟ್‌ ನೀಡಲು ಆಗುತ್ತದೆಯೇ? ಮೀಸಲು ಕ್ಷೇತ್ರದಲ್ಲಿ ಪಕ್ಷೇತರ ನಿಂತರೂ ದಲಿತರೇ ನಿಲ್ಲಬೇಕು, ಅದನ್ನು ದಲಿತೋದ್ಧಾರ ಎಂದು ಬಿಂಬಿಸುವುದು ಎಷ್ಟು ಸರಿ ಎಂದು ನೆಟ್ಟಿಗರು ಕಟೀಲ್‌ರನ್ನು ತರಾಟೆಗೆ ತೆಗೆದಿದ್ದಾರೆ.

“ಮೀಸಲು ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟದ್ದನ್ನೇ ಈ ರೇಂಜಿಗೆ ಬಿಲ್ಡಪ್ ಕೊಡ್ತಿದ್ದೀರಲ್ಲಾ ಸಾರ್....ಮೀಸಲಾತಿ ಇಲ್ಲದ ಕಡೆ ದಲಿತರಿಗೆ ಎಷ್ಟು ಟಿಕೆಟ್ ಕೊಟ್ಟಿದ್ದೀರ ಅಂತ ಸ್ವಲ್ಪ ಡೀಟೇಲ್ಸ್ ಹಾಕಿ ಸಾರ್....ಬೇರೆಲ್ಲಾ ಪಕ್ಷಗಳು ದಲಿತರ ಕಿವಿಗೆ ಹೂವು ಇಟ್ಟು ಮಂಗ ಮಾಡ್ತಿದ್ರೆ ನೀವು ಮಾತ್ರ ಸೀದಾ ಲಾಲ್ಬಾಗನ್ನೇ ಇಟ್ಟುಬಿಟ್ಟಿರಲ್ಲಾ ಕಟೀಲಣ್ಣ” ಎಂದು ಇಂಚರ ಎಂಬವರು ಕಾಮೆಂಟ್‌ ಮಾಡಿದ್ದಾರೆ. 

“ಮಾನ್ಯ ನಳಿನ್ ಕುಮಾರ್ ಕಟೀಲರೇ...ಅಲ್ಲ ನಿಮ್ಮ ತಲೆಯಲ್ಲಿ ಮೆದುಳಿರುವಲ್ಲಿ ಮೆದುಳಿದೆಯೇ ಅಥವಾ ಮತ್ತೆ ಬೇರೆ ಏನಾದರೂ ಇದೆಯೋ ? ಸುಳ್ಯ ಸಾಮಾನ್ಯ ಕ್ಷೇತ್ರವಲ್ಲ.  ಅದು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ.. ಯಾವುದೇ  ಪಕ್ಷವಾಗಿರಲಿ ಅಲ್ಲಿ ದಲಿತರನ್ನೇ ಚುನಾವಣೆಗೆ ನಿಲ್ಲಿಸ ಬೇಕು   ಬೇರೆ ಯಾರಿಗೂ ಟಿಕೇಟು ಕೊಡಕ್ಕಾಗೊಲ್ಲ ..ಇಷ್ಟು  Basic Knowledge ಇಲ್ವೇ.. ನಿಮಗೆ ಗೊತ್ತಿಲ್ಲದೇ ಪೋಸ್ಟಾಗಿದ್ದರೆ...ನಿಮ್ಮ ಎಫ್ಬಿ ಎಕೌಂಟು ನಿರ್ವಹಿಸಲು ಸಮರ್ಥರಿಗೆ ಜವಾಬ್ದಾರಿ ಕೊಡಿ ...” ಎಂದು ಉದ್ಯಾವರ ನಾಗೇಶ್‌ ಕುಮಾರ್‌ ಟೀಕಿಸಿದ್ದಾರೆ. 

ಇನ್ನು ಕೆಲವರು ಪುತ್ತೂರು ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಆಕ್ಷೇಪ ಎತ್ತಿದ್ದು, ಅಂಗಾರರಿಗೆ ಟಿಕೆಟ್‌ ನಿರಾಕರಣೆ ಮಾಡಿರುವುದನ್ನೂ ಪ್ರಶ್ನಿಸಿದ್ದಾರೆ.

Full View

Similar News