ಬಿಜೆಪಿಗೆ ರಾಜೀನಾಮೆ ಸಲ್ಲಿಸಿ, ಚುನಾವಣೆಯಲ್ಲಿ ಸ್ಪರ್ಧಿಸಲು ಮಾಜಿ ಸಚಿವ ಸೊಗಡು ಶಿವಣ್ಣ ನಿರ್ಧಾರ
ತುಮಕೂರಿನಲ್ಲಿ ಬಿಜೆಪಿಗೆ ಬಂಡಾಯ ಬಿಸಿ
ತುಮಕೂರು.ಎ.12: ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಇಂದು ತಮ್ಮ ಹಿತೈಷಿಗಳು, ಕಾರ್ಯಕರ್ತರ ಸಭೆ ನಡೆಸಿದ ಮಾಜಿ ಸಚಿವ ಎಸ್.ಶಿವಣ್ಣ, ಕಾರ್ಯಕರ್ತರ ಕೋರಿಕೆಯಂತೆ ಬಿಜೆಪಿ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ಸಲ್ಲಿಸಿ, ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ನಗರದ ಮಾಕಂ ಕಲ್ಯಾಣ ಮಂಟಪದಲ್ಲಿ ತಮ್ಮ ನೂರಾರು ಬೆಂಬಲಿಗರೊಂದಿಗೆ ಸಭೆ ನಡೆಸಿದ ಮಾಜಿ ಸಚಿವ ಸೊಗಡು ಶಿವಣ್ಣ, ಕಾರ್ಯಕರ್ತರು, ಹಿತೈಷಿಗಳ ಅಭಿಪ್ರಾಯ ಆಲಿಸಿದ ನಂತರ ಮಾತನಾಡಿದ ಅವರು,ಅವರೆ ಕಾಯಿ ಮಾರಿಕೊಂಡು ಇದ್ದ ನನ್ನನ್ನು ಪಕ್ಷ ಗುರುತಿಸಿ, ಟಿಕೇಟ್ ನೀಡಿದ ಪರಿಣಾಮ ಸತತವಾಗಿ ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿ, ಎರಡು ಬಾರಿ ಮಂತ್ರಿಯಾಗಿಯೂ ಕೆಲಸ ಮಾಡಿದ್ದೇನೆ.ಅಂದು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹಿರಿಯ ನಾಯಕ ಎಲ್.ಕೆ.ಅಡ್ವಾನಿ ಸೇರಿದಂತೆ ನಮ್ಮನ್ನು ಜೈಲಿಗೆ ಕಳುಹಿಸಿದ ಕಾಂಗ್ರೆಸ್ ಪಕ್ಷದ ಮುಖಂಡರು ಇಂದು ಬಿಜೆಪಿಯಲ್ಲಿ ತಳವೂರಿ,ಪಕ್ಷವನ್ನು ತಳಮಟ್ಟದಿಂದ ಕಟ್ಟಿಬೆಳೆಸಿದ ನಮಗೆ ಜಾಗವಿಲ್ಲದಂತೆ ಮಾಡಿದ್ದಾರೆ ಎಂದು ದೂರಿದರು.
ಕಳೆದ ಬಾರಿ ಅಂದರೆ 2018ರಲ್ಲಿ ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರ ಮಾತಿಗೆ ಕಟ್ಟು ಬಿದ್ದು ಸ್ಪರ್ಧೆಯಿಂದ ಹಿಂದೆ ಸರಿದಿದ್ದೆ.ಆದರೆ ಮಾತು ಕೊಟ್ಟವರೆ ಇಂದು ಮೂಲೆಗುಂಪಾಗಿದ್ದಾರೆ. ವಿಧಿಯಿಲ್ಲದೆ ಕಾರ್ಯಕರ್ತರು, ಹಿತೈಷಿಗಳ ಒತ್ತಾಯದಂತೆ ನಾಳೆ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ, ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ.ಎಲ್ಲಾ ಸಮುದಾಯದ ಮುಖಂಡರು,ಬಿಜೆಪಿ ಪಕ್ಷದ ಮೂಲ ಕಾರ್ಯಕರ್ತರು ನನ್ನೊಂದಿಗೆ ಇದ್ದಾರೆ. ಹತ್ತಾರು ವರ್ಷಗಳಿಂದ ನನ್ನೊಂದಿಗೆ ಇದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟು, ಅವರ ನಿರ್ಧಾರದಂತೆ ನಡೆದುಕೊಳ್ಳುತ್ತೇನೆ ಎಂದು ಸೊಗಡು ಶಿವಣ್ಣ ನುಡಿದರು.
ಸಭೆಯಲ್ಲಿ ಮುಖಂಡರಾದ ಜಯಸಿಂಹರಾವ್,ಟೂಡಾ ಮಾಜಿ ಅಧ್ಯಕ್ಷ ಶ್ರೀಧರ್,ಶ್ರೀಮತಿ ಆಶಾ ಪ್ರಸನ್ನಕುಮಾರ್, ಶಬ್ಬೀರ್ ಅಹಮದ್,ಧನಿಯಕುಮಾರ್, ನರಸಿಂಹಯ್ಯ, ವಕೀಲ ನರೇಂದ್ರಬಾಬು,ಶಾಂತರಾಜು ಸೇರಿದಂತೆ ಹಲವಾರು ಜನರು ಭಾಗವಹಿಸಿದ್ದರು.