×
Ad

ಹುಲಿಗಳ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸದಿದ್ದರೆ ಪುಣ್ಯ: ಬಿಜೆಪಿ ವಿರುದ್ಧ ಕಾಂಗ್ರೆಸ್‌ ವ್ಯಂಗ್ಯ

ಬಂಡಿಪುರದಲ್ಲಿ ಪ್ರಧಾನಿಗೆ ಕಾಣಿಸದ ಹುಲಿ: ಸಫಾರಿ ಚಾಲಕನ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ ವರದಿಗೆ ಕಾಂಗ್ರೆಸ್ ಪ್ರತಿಕ್ರಿಯೆ

Update: 2023-04-12 21:47 IST

ಬೆಂಗಳೂರು: ಬಂಡೀಪುರದಲ್ಲಿ ಮೋದಿಯವರಿಗೆ ಹುಲಿಗಳು ಕಾಣಿಸದೆ ಇರುವುದರಿಂದ ಸಫಾರಿ ಜೀಪ್ ಚಾಲಕನ ವಿರುದ್ಧ ಕ್ರಮ ಜರುಗಿಸಲು ಒತ್ತಾಯ ಬಂದಿದೆ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ. 

ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿರುವ ಕಾಂಗ್ರೆಸ್‌, “ಬಂಡೀಪುರದ ಹುಲಿಗಳ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸದಿದ್ದರೆ ಹುಲಿಗಳ ಪುಣ್ಯ! ಪ್ರಧಾನಿಗಳೇ ಅವು ನವಿಲುಗಳಲ್ಲ, ಕರ್ನಾಟಕದ ಹುಲಿಗಳು, ತಾವು ಕರೆದು ಕಾಳು ಹಾಕುತ್ತೇನೆ ಎಂಬ ಭ್ರಮೆ ಬಿಟ್ಟುಬಿಡಿ!” ಎಂದು ಟೀಕಿಸಿದೆ.

ಪಿ ಆರ್ ಸ್ಟಂಟ್ ವಿಫಲವಾಗಿದ್ದಕ್ಕೆ ಪ್ರಧಾನಿಗೆ ಇಷ್ಟೊಂದು ಕೋಪವೇ!, 40% ಕಮಿಷನ್ ಬಗ್ಗೆ ತಲೆಕೆಡಿಸಿಕೊಳ್ಳದ ಪ್ರಚಾರ ಮಂತ್ರಿ ಮೋದಿ ಬಂಡೀಪುರದಲ್ಲಿ ಹುಲಿ ಕಾಣಿಸದಿರುವುದಕ್ಕೆ ಕುಪಿತರಾಗಿದ್ದರಂತೆ, ಬಿಜೆಪಿ ನಾಯಕರು ಬಡಪಾಯಿ ಚಾಲಕನ ಮೇಲೆ ಮುಗಿಬಿದ್ದಿದ್ದಾರಂತೆ!ಇಂತಹ ಬಾಲಿಶ ಪ್ರಧಾನಿ ಹಿಂದೆಂದೂ ಬಂದಿಲ್ಲ, ಮುಂದೆಯೂ ಬರುವುದಿಲ್ಲ! ಎಂದು ಕಾಂಗ್ರೆಸ್‌ ತನ್ನ ಟ್ವೀಟ್‌ನಲ್ಲಿ ಹೇಳಿದೆ. 

ಬಂಡಿಪುರ ಹುಲಿ ಯೋಜನೆಗೆ  50 ವರ್ಷದ ಹಿನ್ನೆಲೆಯಲ್ಲಿ ಬಂಡೀಪುರಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಸುಮಾರು 22 ಕಿಮೀ ಸಫಾರಿ ಮಾಡಿದ್ದರೂ ಹುಲಿ ಪತ್ತೆಯಾಗಿರಲಿಲ್ಲ. ಪ್ರಧಾನಿ ಮೋದಿಯವರ ಭದ್ರತಾ ಪಡೆ ಪದೇ ಪದೇ ಭದ್ರತೆ ಪರಿಶೀಲಿಸಿದ್ದರಿಂದ ಹುಲಿಗಳೆಲ್ಲಾ ಅಡಗಿ ಕೂತಿದ್ದವು ಎಂದು ಬಂಡಿಪುರ ರಕ್ಷಿತಾರಣ್ಯ ಮೂಲಗಳು ಹೇಳಿದ್ದವು.

Similar News