ಬಿಜೆಪಿಗೆ ರಾಜೀನಾಮೆ ನೀಡಿ ಪಕ್ಷೇತರರಾಗಿ ಕಣಕ್ಕಿಳಿಯಲಿರುವ ವಿಜಯ್ ಕುಮಾರ್ ಹೂಡಿ: ಮೋದಿ ಫೋಟೊ ಕಿತ್ತೊಗೆದ ಬೆಂಬಲಿಗರು
ಕೈ ತಪ್ಪಿದ ಟಿಕೆಟ್: ಮಾಲೂರು ಬಿಜೆಪಿಗೆ ಬಂಡಾಯದ ಬಿಸಿ
ಮಾಲೂರು (ಕೋಲಾರ) ಎಪ್ರಿಲ್.13 : ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಟಿಕೆಟ್ ಕೈತಪ್ಪಿರುವುದರಿಂದ ಬಂಡಾಯವೆದ್ದಿರುವ ಹೂಡಿ ವಿಜಯ್ ಕುಮಾರ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಅಲ್ಲದೇ, ಅವರ ಬೆಂಬಲಿಗರು ತಮ್ಮ ಕಚೇರಿಗಳಲ್ಲಿ ಹಾಕಿದ್ದ ಮೋದಿ ಫೋಟೊ ಕಿತ್ತೊಗೆದು, ಬಿಜೆಪಿಯ ವಿವಿಧ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದಾರೆ.
ಮಾಲೂರು ಪಟ್ಟಣದ ವೈಟ್ ಗಾರ್ಡನ್ ನಲ್ಲಿರುವ ತಮ್ಮ ಮೋದಿ ನಿವಾಸದ ಬಳಿ ಕಾರ್ಯಕರ್ತರ ಮತ್ತು ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹೂಡಿ ವಿಜಯಕುಮಾರ್, ನನಗೆ ಆಗಿರುವ ಅನ್ಯಾಯಕ್ಕೆ ನೋವು ತಂದಿದೆ. ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷ ಕಟ್ಟಿದ ಹಲವಾರು ನಾಯಕರು ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಪಕ್ಷ ನೀಡಿದ್ದ ಸ್ಥಾನಗಳಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿ ಬೆಂಬಲ ನೀಡುತ್ತಿರುವುದಕ್ಕೆ ಸದಾಕಾಲವೂ ಚಿರಋಣಿಯಾಗಿರುತ್ತೇನೆ ಎಂದರು.
ಬಿಜೆಪಿ ಪಕ್ಷ ನನಗೆ ಅನ್ಯಾಯ ಮಾಡಿದರೂ, ನನ್ನ ನಂಬಿದ ಮುಖಂಡರ ಹಾಗೂ ಕಾರ್ಯಕರ್ತರನ್ನು ಬಿಟ್ಟು ಹೋಗಬಾರದು ಎಂಬ ಕಾರಣಕ್ಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಮಾಲೂರು ತಾಲೂಕಿನ ಜನತೆ ನನ್ನ ಕೈ ಹಿಡಿಯುತ್ತಾರೆಂಬ ನಂಬಿಕೆ ಇದೆ. ನಿಮ್ಮ ವಿಶ್ವಾಸಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳತ್ತೇನೆಂದು ಹೇಳಿದರು.
ನಮ್ಮ ನಂಬಿಕೆಗೆ ದ್ರೋಹ ಮಾಡಿದ ಬಿಜೆಪಿ ಪಕ್ಷ ನಮಗೆ ಅವಶ್ಯಕತೆ ಇಲ್ಲವಾದ್ದರಿಂದ ಈಗಾಗಲೇ ನಾನು ಬಿಜೆಪಿ ಪಕ್ಷದ ರಾಜ್ಯ ಫಲಾನುಭವಿಗಳ ಪ್ರಕೋಷ್ಠದ ಸದಸ್ಯ ಸ್ಥಾನಕ್ಕೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಘೋಷಿಸಿದರು.
ಸಭೆಯಲ್ಲಿ ಬಿ.ಜೆ.ಪಿ ಪಕ್ಷದ ಹನುಮಪ್ಪ, ಪ್ರಭಾಕರ್, ತಿಪ್ಪಣ್ಣ,ಚಂಬೆ ನಾರಾಯಣ ಗೌಡ ಬಿ.ಆರ್.ವೆಂಕಟೇಶ್, ರಾಮಮೂರ್ತಿ,ಹುಂಗೇನ ಹಳ್ಳಿ ವೆಂಕಟೇಶ್, ಮೋಹನ್ ಬಾಬು,ನಾಗಣ್ಣ, ಕೆಂಬೋಡಣ್ಣ, ಅಮರೇಶ್ ರೆಡ್ಡಿ, ದೇವರಾಜ ರೆಡ್ಡಿ,ಜಗಣ್ಣ, ಚಂದ್ರಣ್ಣ ಸೇರಿದಂತೆ ಸಾವಿರಾರು ಮುಖಂಡರು ಭಾಗವಹಿಸಿದ್ದರು