ಸರಕಾರದ ವಿರುದ್ಧ ಧರಣಿ ನಡೆಸಿದ್ದೇನೆಂಬ ಒಂದೇ ಕಾರಣಕ್ಕೆ ನನಗೆ ಟಿಕೆಟ್ ನಿರಾಕರಣೆ: ಎಂ.ಪಿ.ಕುಮಾರಸ್ವಾಮಿ

ಜೆಡಿಎಸ್ ನಿಂದ ಸ್ಪರ್ಧೆ ?

Update: 2023-04-14 05:58 GMT

ಮೂಡಿಗೆರೆ, ಏ.13: ತಾಲೂಕಿನ ರೈತರ ಹಾಗೂ ಜನರ ಸಮಸ್ಯೆ ಪರಿಹರಿಸಲು ತಾನು ಬೆಂಗಳೂರಿನ ಗಾಂಧಿ ಪ್ರತಿಮೆ ಮುಂದೆ ಸರಕಾರದ ವಿರುದ್ಧವೇ ಧರಣಿ ನಡೆಸಿದ್ದೇನೆಂಬ ಒಂದೇ ಕಾರಣಕ್ಕೆ ತನಗೆ ಟಿಕೆಟ್ ನೀಡದೇ ವಂಚಿಸಲಾಗಿದೆ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು. 

ಅವರು ಗುರುವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ಚುನಾವಣೆಯಲ್ಲಿ ಕಳೆದ 20 ವರ್ಷದಿಂದ ಒಂದು ಗುಂಪು ವಿರೋಧ ಮಾಡುತ್ತಲೇ ಬಂದಿತ್ತು. ಆದರೆ 2013ರಲ್ಲಿ ಕೇವಲ ಒಂದೂವರೆ ಸಾವಿರ ಅಂತರದಲ್ಲಿ ಸೋಲು ಅನುಭವಿಸಿದ್ದು, ಬಿಟ್ಟರೆ 3 ಬಾರಿ ಗೆಲುವು ಸಾಧಿಸಿದ್ದೆ. ಆದರೆ ಈಬಾರಿ ಸಿ.ಟಿ.ರವಿ ಅವರಿಂದ ಟಿಕೆಟ್ ದಕ್ಕದಂತಾಗಿದೆ. ಇದರಿಂದ ಬೇಸತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವದಕ್ಕೆ ರಾಜೀನಾಮೆ ನೀಡಿದ್ದೇನೆ. ತಾನು ಬಿಜೆಪಿ ತೊರೆದಿದ್ದರಿಂದ ಈಗ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ 20 ವರ್ಷ ಹಿಂದಕ್ಕೆ ಹೋಗಿದೆ. ಇನ್ನು ಮುಂದೆ ತಾ.ಪಂ, ಜಿ.ಪಂ. ಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು. 

ಬಿಜೆಪಿಯ ಒಂದು ಗುಂಪು  ವಿರೋಧ ಮಾಡುತ್ತಿದ್ದರೂ ಉಳಿದವರು ಈಗಲೂ ಪಕ್ಷ ಬಟ್ಟು ಹೋಗಬೇಡಿ ಎನ್ನುತ್ತಿದ್ದಾರೆ. ಅಲ್ಲದೇ ಬೇರೆ ಪಕ್ಷದವರು ತನ್ನ ಬರುವಿಕೆಗೆ ಸ್ವಾಗತಿಸುತ್ತಿದ್ದಾರೆ. ಹಾಗಾಗಿ ಇಂದು ಮತದಾರರ ಅಭಿಪ್ರಾಯ ಪಡೆದು ಶುಕ್ರವಾರ ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರುವ ಬಗ್ಗೆ ಪರೋಕ್ಷವಾಗಿ ಹೇಳಿಕೊಂಡ ಅವರು, ಈಗಾಗಲೇ ತಾಲೂಕಿನಾದ್ಯಂತ ಮೊಬೈಲ್ ಕರೆಗಳು ಬರುತ್ತಿದ್ದು, ಅಭೂತಪೂರ್ವವಾದ ಬೆಂಬಲ ವ್ಯಕ್ತವಾಗುತ್ತಿದೆ. ತಾನು ಯಾವುದೇ ಪಕ್ಷ ಸೇರ್ಪಡೆಗೊಂಡರೂ ಬೆಂಬಲ ನೀಡಬೇಕು. ಎ.17ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ.  ಆ ದಿನ ಸುಮಾರು 15 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಮತದಾರರು ಆಗಮಿಸಲಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ತನ್ನ ಗೆಲುವು ನಿಶ್ಚಿತ  ಎಂದು ಭವಿಷ್ಯ ನುಡಿದರು.

ಬಳಿಕ ಅವರ ನಿವಾಸಕ್ಕೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಬೆಂಬಲಿಗರನ್ನು ಉದ್ದೇಶಿಸಿ ಹೊರಾಂಗಣದಲ್ಲಿ ಮಾತನಾಡಿದರು. 
ಮುಖಂಡರಾದ ಅರೆಕುಡಿಗೆ ಶಿವಣ್ಣ, ರವೀಂದ್ರ ಊರುಬಗೆ, ಹೆಮ್ಮಕ್ಕಿ ಗಿರೀಶ್, ವಿಜೇಂದ್ರ ಕುಂದೂರು ಮತ್ತಿತರರಿದ್ದರು. 
 

Similar News